ತನಿಖಾ ಲೋಪ ತಪ್ಪಿಸಲು ಸಮನ್ವಯ ಅತ್ಯಗತ್ಯ* ಜಿಲ್ಲಾ ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ

1000348587.jpg
Published on

ದಾವಣಗೆರೆ: ಪ್ರಕರಣಗಳ ಶೀಘ್ರ ವಿಲೇವಾರಿ, ತನಿಖೆ ವೇಳೆ ತನಿಖಾಧಿಕಾರಿಗಳಿಂದ ಆಗುವ ಲೋಪ ಸರಿಪಡಿಸಿಕೊಳ್ಳಲು ಹಾಗೂ ನೊಂದವರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ನ್ಯಾಯಾಂಗ, ಅಭಿಯೋಜನಾ ಹಾಗೂ ಪೊಲೀಸ್ ಇಲಾಖೆಗಳ ನಡುವೆ ಸಮನ್ವಯ ಅತ್ಯಗತ್ಯ ಎಂದು ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಹೇಳಿದರು.
ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ನ್ಯಾಯಾಂಗ, ಅಭಿಯೋಜನಾ ಹಾಗೂ ಪೊಲೀಸ್ ಇಲಾಖೆಗಳ ಸಮನ್ವಯ ಸಭೆಯಲ್ಲಿ ಮಾತನಾಡಿದರು.
ಅಪರಾಧಿಕ ನ್ಯಾಯ ಆಡಳಿತದಲ್ಲಿ ಈ ಮೂರೂ ಇಲಾಖೆಗಳ ಪಾತ್ರವೂ ಮುಖ್ಯವಾಗಿದೆ. ನಮ್ಮ ಮೇಲೆ ಗುರುತರ ಜವಾಬ್ದಾರಿ ಇದೆ. ನಾವು ತಪ್ಪು ಮಾಡಿದರೆ ಸಮಾಜದ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ ತಪ್ಪುಗಳಿಗೆ ನಾವು ಅವಕಾಶ ನೀಡಬಾರದು ಎಂದು ಹೇಳಿದರು.
ಮೂರೂ ವಿಭಾಗದಲ್ಲಿ ಆಯಾ ಕಾರ್ಯ ವ್ಯಾಪ್ತಿಯಲ್ಲಿನ ಲೋಪಗಳು, ಕಾನೂನುಗಳ ಪಾಲನೆ ಬಗ್ಗೆ ವಿಸ್ತೃತ ಚರ್ಚೆ ನಡೆಸಿ ಗೊಂದಲ ಪರಿಹರಿಸಿಕೊಳ್ಳಬಹುದು. ಸಂತ್ರಸ್ತರಿಗೆ ಸರಿಯಾದ ನ್ಯಾಯ ದೊರಕಿಸಿ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವತ್ತ ಕಾರ್ಯೋನ್ಮುಖವಾಗಲು ಸಾಧ್ಯವಾಗಲಿದೆ. ಎಲ್ಲರೂ ಮುಕ್ತವಾಗಿ ಸಭೆಯಲ್ಲಿ ಭಾಗವಹಿಸಬೇಕು. ಇಂತಹ ಸಭೆಗಳಿಂದ ನಮ್ಮಲ್ಲಿ ಜ್ಞಾನ ಹಾಗೂ ಕಾರ್ಯದಕ್ಷತೆ ಹೆಚ್ಚಲಿದೆ ಎಂದು ತಿಳಿಸಿದರು.
ಎಸ್ಪಿ ಉಮಾ ಪ್ರಶಾಂತ್ ಮಾತನಾಡಿ ಇತ್ತೀಚೆಗೆ ಬಂದಿರುವ ಹೊಸ ಕಾನೂನುಗಳ ಬಗ್ಗೆ ಮೂರೂ ಇಲಾಖೆಗಳು ಹೆಚ್ಚು ತಿಳಿಯಬೇಕು. ಇತ್ತೀಚೆಗೆ ಡಿಜಿಟಲ್ ಸಾಕ್ಷೃ ಸಂಗ್ರಹಿಸುವ ವಿಧಾನ ಮತ್ತು ಅದನ್ನು ನ್ಯಾಯಾಲಯಗಳಿಗೆ ಸಲ್ಲಿಸುವ ಬಗ್ಗೆ ಅರಿವು ಅಗತ್ಯ. ನಾವು ಆಸಕ್ತಿಯಿಂದ ಕೆಲಸ ಮಾಡಿದಾಗ ನೊಂದನವರಿಗೆ ನ್ಯಾಯ ದೊರಕಿಸಲು ಸಾಧ್ಯವಾಗಲಿದೆ ಎಂದರು.
ಸಭೆಯಲ್ಲಿ ಪೊಲೀಸ್ ಅಧಿಕಾರಿಗಳು, ಸರ್ಕಾರಿ ಅಭಿಯೋಜಕರು, ನ್ಯಾಯಾಧೀಶರು ಪ್ರಕರಣಗಳ ಆರಂಭದಿಂದ ಅಂತಿಮ ಘಟ್ಟದ ವರೆಗೂ ಬರುವ ವಿವಿಧ ಹಂತಗಳಲ್ಲಿ ಉಂಟಾಗುವ ಲೋಪ, ಕಾರ್ಯವ್ಯಾಪ್ತಿ ಬಗ್ಗೆ  ವಿಸ್ತೃತವಾಗಿ  ಚರ್ಚಿಸಿದರು.
1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ್, 2ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಪ್ರವೀಣ್‌ಕುಮಾರ್, ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಶ್ರೀರಾಮ ನಾರಾಯಣ ಹೆಗಡೆ, ಸಿವಿಲ್ ನ್ಯಾಯಾಧೀಶೆ ನಿವೇದಿತಾ, ಹಿರಿಯ ಸಿವಿಲ್ ನ್ಯಾಯಾಧೀಶೆ ಎಚ್.ಕೆ. ರೇಷ್ಮಾ, ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ಸಿಇಎನ್ ಡಿವೈಎಸ್ಪಿ ಪದ್ಮಶ್ರೀ ಗುಂಜಿಕರ್, ಅಭಿಯೋಜನಾ ಇಲಾಖೆಯ ಉಪನಿರ್ದೇಶಕ ಬಸವರಾಜ್, ಇತರ ಅಧಿಕಾರಿಗಳು, ಸರ್ಕಾರಿ ಅಭಿಯೋಜಕರು ಇದ್ದರು.
ಸರ್ಕಾರಿ ಅಭಿಯೋಜಕ ಮಂಜುನಾಥ್ ಕಾರ್ಯಕ್ರಮ ನಿರ್ವಹಿಸಿದರು. ಎಎಸ್ಪಿ ಜಿ.ಮಂಜುನಾಥ್ ಸ್ವಾಗತಿಸಿದರು. ಗ್ರಾಮಾಂತರ ಡಿವೈಎಸ್ಪಿ ಬಸವರಾಜ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net