ಅತ್ಯಾಚಾರಿಗೆ 10 ವರ್ಷ ಜೈಲು ಸಜೆ

1000001994_20250108004726750.jpg
Published on

ದಾವಣಗೆರೆ: ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಪೋಕ್ಸೋ)ನ್ಯಾಯಾಲಯವು 10 ವರ್ಷ ಜೈಲು ಸಜೆ ವಿಧಿಸಿದೆ.
ಹರಪನಹಳ್ಳಿ ತಾಲೂಕಿನ ಹಳೇಗಂಜಿಗೆರೆ ಗ್ರಾಮದ ಪರಶುರಾಮ ಶಿಕ್ಷೆಗೆ ಗುರಿಯಾದ ಅಪರಾಧಿ.
ಪರಶುರಾಮನು 2016ರ ಮಾರ್ಚ್ ತಿಂಗಳಲ್ಲಿ ಕೊಂಡಜ್ಜಿ ಆಂಜನೇಯ ದೇವರ ಜಾತ್ರೆಗೆ ಬಂದಿದ್ದ ಅಪ್ರಾಪ್ತಳ ಪರಿಚಯವಾಗಿದೆ. ನಂತರ ಸ್ನೇಹವಾಗಿ ಪ್ರೀತಿಗೆ ತಿರುಗಿದೆ. ಈ ಹಂತದಲ್ಲಿ ಅತ್ಯಾಚಾರ ಎಸಗಿದ್ದ ಅಪರಾಧಿ ಮದುವೆಯಾಗಲು ನಿರಾಕರಿಸಿದ್ದಾನೆ. ಅವರ ಮನೆಯವರು ಕೂಡ ಜೀವ ಬೆದರಿಕೆ ಒಡ್ಡಿದ್ದರು.
ಈ ಸಂಬಂಧ ದಾವಣಗೆರೆ ಮಹಿಳಾ ಠಾಣೆಯಲ್ಲಿ ಪರಶುರಾಮ ಸೇರಿ ಎಂಟು ಜನ ವಿರುದ್ಧ ದೂರು ದಾಖಲಾಗಿತ್ತು. ತನಿಖೆ ನಡೆಸಿದ ಪಿಐ ಕೆ. ನಾಗಮ್ಮ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ಬಳಿಕ ನ್ಯಾಯಾಧೀಶ ಶ್ರೀರಾಮ ನಾರಾಯಣ ಹೆಗಡೆ ಅವರು ಸೋಮವಾರ ಅಪರಾಧಿಗೆ ಶಿಕ್ಷೆ ಪ್ರಕಟಿಸಿದರು. ಸಂತ್ರಸ್ತೆಗೆ ಅಪರಾಧಿಯಿಂದ ವಸೂಲಿ ಮಾಡುವ 35 ಸಾವಿರ ರೂ, ದಂಡದ ಹಣದ ಜತೆಗೆ ಹಾಗೂ ಸರ್ಕಾರದಿಂದ 4 ಲಕ್ಷ ರೂ. ಪರಿಹಾರ ನೀಡುವಂತೆಯೂ ಆದೇಶಿಸಿದರು. ಪಿರ‌್ಯಾದಿ ಪರ ಸರ್ಕಾರಿ ನ್ಯಾಯವಾದಿ ಸುನಂದಾ ಮಡಿವಾಳರ್ ವಕಾಲತ್ತು ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net