

ದಾವಣಗೆರೆ: ಸುಳ್ಳು ದಾಖಲೆ ಸೃಷ್ಟಿಸಿ ವಂಚಿಸಿದ ಅಪರಾಧಿಗೆ 3ನೇ ಹೆಚ್ಚುವರಿ ಸಿಜೆ ಮತ್ತು ಜೆಎಂಎಫ್ ನ್ಯಾಯಾಲಯ 6 ವರ್ಷ ಶಿಕ್ಷೆ ಹಾಗೂ 45 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದೆ.
ಇಲ್ಲಿನ ಭಗತ್‌ಸಿಂಗ್ ನಗರದ ಮಾಲತೇಶ್ ಎಂ.ಬಿ ಬಾರಿಕರ್ ಶಿಕ್ಷೆಗೊಳಗಾದ ಅಪರಾಧಿ.
ಹಿಂದುಸ್ತಾನ್ ಯುನಿಲೀವರ್ ಲಿ. ಬಾಂಬೆ ಸಂಸ್ಥೆಯಲ್ಲಿ ಹಣ ತೊಡಗಿಸಿದರೆ ಶೇ.4ರಷ್ಟು ಲಾಭಾಂಶ ನೀಡುವುದಾಗಿ ಹೇಳಿ ಮೊದಲ ಪ್ರಕರಣದಲ್ಲಿ 10,20,000 ರೂ. ಹಾಗೂ ಎರಡನೇ ಪ್ರಕರಣದಲ್ಲಿ 19 ಲಕ್ಷ ಹಣ ತೊಡಗಿಸಿಕೊಂಡು ವಂಚಿಸಿದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಲಾಗಿದೆ.
ಪ್ರಕರಣ ಸಂಬಂಧ ಪಿರ‌್ಯಾದಿದಾರರಾದ ಎಂ.ಕೆ. ತಿಪ್ಪೇಸ್ವಾಮಿ, ಭಗತ್‌ಸಿಂಗ್ ನಗರದ ಸುನೀಲ್ ಅಹ್ಮದ್ ಎಂಬುವರು ಆರೋಪಿಗಳ ವಿರುದ್ಧ 2017ರಲ್ಲಿ ದೂರು ನೀಡಿದ ಮೇರೆಗೆ ಕೆಟಿಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಠಾಣೆ ಉಪ ನಿರೀಕ್ಷಕ, ತನಿಖಾಧಿಕಾರಿ ಪ್ರಭು ಡಿ. ಕೆಳಗಿನಮನಿ ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶ ಎನ್.ಕೆ. ಸಿದ್ದರಾಜು ಎರಡೂ ಪ್ರಕರಣಗಳಲ್ಲಿ ತಲಾ 3 ವರ್ಷದಂತೆ ಒಟ್ಟು 6 ವರ್ಷ ಶಿಕ್ಷೆ ಮತ್ತು 45 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ವಕೀಲ ಬಿ.ಡಿ. ಚಿತ್ರಶೇಖರಪ್ಪ ಪಿರ‌್ಯಾದಿಗಳ ಪರ ವಾದ ಮಂಡಿಸಿದ್ದರು.
-----