

ದಾವಣಗೆರೆ: ಕರ್ನಾಟಕದಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಮಠ ಮಾನ್ಯಗಳ ಕೊಡುಗೆ ಅಪಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಣ್ಣಿಸಿದರು.
ಹರಿಹರ ತಾಲೂಕಿನ ನಂದಿಗುಡಿ ಬೃಹನ್ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಕೆಂಚವೀರೇಶ್ವರ ಶಿವಯೋಗಿಗಳ ಪುಣ್ಯ ಸಂಸ್ಮರಣಾ ಮಹೋತ್ಸವ, ಸಿದ್ಧರಾಮೇಶ್ವರ ಶಿವಾಚಾರ್ಯ ಶ್ರೀಗಳ 15ನೇ ವರ್ಷದ ಸೂರ್ಯ ಸಿಂಹಾಸನಾರೋಹಣ, ಬಸವೇಶ್ವರ ಕಾರ್ತಿಕ, ಶ್ರೀ ನಂದಿ ನೊಳಂಬ ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಂದಿಗುಡಿ ಶ್ರೀಗಳು ಎಲ್ಲಾ ಸಮಾಜಗಳನ್ನು ವಿಶ್ವಾಸಕ್ಕೆ ತಗೆದುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ನೊಳಂಬ ಲಿಂಗಾಯತ ಸಮಾಜ ಸ್ವಾಭಿಮಾನಕ್ಕೆ ಹೆಸರಾಗಿದೆ ಎಂದು ಶ್ಲಾಘಿಸಿದ ವಿಜಯೇಂದ್ರ, ಇಂದು ಸಮಾಜಗಳನ್ನು ಒಡೆಯುವ, ವಿಷ ಬೀಜ ಬಿತ್ತುವ ಕೆಲಸ ನಡೆಯುತ್ತಿದೆ. ಹೀಗಾಗಿ ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಕೊಡಬೇಕಿದೆ ಎಂದು ಹೇಳಿದರು.
ಯಡಿಯೂರಪ್ಪನವರಷ್ಟು ಹೋರಾಟ ಯಾವ ರಾಜಕೀಯ ನೇತಾರರು ಮಾಡಲಾಗಿಲ್ಲ. ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ, ಅವರಿಗಾಗಿ ಪ್ರತ್ಯೇಕ ಬಜೆಟ್, ಉಚಿತ ವಿದ್ಯುತ್ ಕೊಟ್ಟರು. ಬಡ ಕುಟುಂಬದ ಹೆಣ್ಣು ಮಗುವಿಗೆ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೊಳಿಸಿದರು ಎಂದು ಹೇಳಿದರು.
ನಂದಿಗುಡಿ ಬೃಹನ್ಮಠದ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಜೇನುಗೂಡಿಗೆ ಕಲ್ಲು ಹೊಡೆಯುವ ಕೆಲಸವನ್ನು ಯಾರೂ ಮಾಡಬಾರದು. ಇದು ಜಾತ್ಯತೀತ ನಿಲ್ಲವನ್ನು ಹೊಂದಿದ ಮಠವಾಗಿದ್ದು, ಯಾವುದೇ ರಾಜಕೀಯ ಪಕ್ಷದ ಪರವಾದ ನಿಲುವು ತಳೆದಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ವೆಂಟಿಲೇಟರ್ ಜೀವನ ನಡೆಸುತ್ತಿದ್ದೇನೆ. ನಿಮ್ಮ ಮಠ, ನಿಮ್ಮ ಸಮಾಜ, ನಿಮ್ಮ ಬದುಕನ್ನು ನಿಮಗೆ ಬೇಕಾದಂತೆ ನೀವೇ ಕಟ್ಟಿಕೊಳ್ಳಿ ಎಂದು ಮಾರ್ಮಿಕವಾಗಿ ನುಡಿದರು.ಸಮಾಜದ ಪ್ರತಿಭಾ ಪುರಸ್ಕಾರ ನಡೆಯಿತು. ವಾಸನದ ಮಹಂತೇಶ್ ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ, ಮಾಡಾಳು ಮಲ್ಲಿಕಾರ್ಜುನ್, ಲೋಕಿಕೆರೆ ನಾಗರಾಜ್, ಮಾಜಿ ಶಾಸಕ ಎಚ್‌ಎಸ್ ಶಿವಶಂಕರ್, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ರಾಜಶೇಖರ್ ಹಾಗೂ ನೊಳಂಬ ಸಮಾಜದ ಮುಖಂಡರು ಇದ್ದರು.
----