ತಳಸಮುದಾಯಗಳ ಸಂಘಟನೆಗೆ ರಾಜ್ಯವ್ಯಾಪಿ ಪ್ರವಾಸ

1000917273_20250602001745471.jpg
Published on

ದಾವಣಗೆರೆ: ಎಸ್ಸಿ-ಎಸ್ಟಿ, ತಳಸಮುದಾಯಗಳ ಸಂಘಟನೆ ಬಲಪಡಿಸಲು ಈಗಿನಿಂದಲೇ ಬೀಜ ಬಿತ್ತಬೇಕಿದೆ. ಹಾಗಾದಲ್ಲಿ 5 ರಿಂದ 10 ವರ್ಷದಲ್ಲಿ ಅಧಿಕಾರ ನಮ್ಮ ಮನೆ ಬಾಗಿಲಿಗೆ ಬರಲಿದೆ. ಈ ಸಂಬಂಧ ರಾಜ್ಯವ್ಯಾಪಿ ಪ್ರವಾಸ ಮಾಡಲಾಗುವುದು. ದಾವಣಗೆರೆ ಸಭೆಯೇ ನಾಂದಿಯಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ನಗರದ ಸಿ. ಕೇಶವಮೂರ್ತಿ ಸಭಾಂಗಣದಲ್ಲಿ ಭಾನುವಾರ ವಿವಿಧ ಶೋಷಿತ ಸಮುದಾಯಗಳ ಮುಖಂಡರ ಜತೆ ಆಂತರಿಕ ಸಮಾಲೋಚನಾ ಸಭೆಯಲ್ಲಿ ಚರ್ಚಿತ ವಿಷಯಗಳಿಗೆ ಪೂರಕವಾಗಿ ಮಾತನಾಡಿದರು.

ಅಂಬೇಡ್ಕರ್ ಅವರು ಎಳೆದ ರಥವನ್ನು ಮುಂದಕ್ಕೆ ತೆಗೆದುಕೊಂಡು ಹೋಗಬೇಕಿದೆ. ಶಿಗ್ಗಾಂವ್ ವಿಧಾನಸಭೆ ಚುನಾವಣೆ ಮಾದರಿಯಲ್ಲಿ ಹಿಂದುಳಿದ ವರ್ಗ ಹಾಗೂ ಎಸ್ಸಿ-ಎಸ್ಟಿ ಜನರಿಗೆ ಶಕ್ತಿ ತುಂಬಿ, ಮುಂದಿನ ಚುನಾವಣೆಯಲ್ಲಿ ಎಲ್ಲ 28 ಕ್ಷೇತ್ರದಲ್ಲೂ ಅಧಿಕಾರ ಹಿಡಿಯಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.

ಕಾಂತರಾಜ್ ಆಯೋಗ ನೀಡಿದ ಜಾತಿಗಣತಿ ವರದಿಯನ್ನು ಸರ್ಕಾರ ಬಿಡುಗಡೆ ಮಾಡುವುದು ಶತಃಸಿದ್ದ. ಆದರೆ ಇದನ್ನು ಸರ್ಕಾರ ಜನರ ಚರ್ಚೆ ಹಂತಕ್ಕೆ ಬಿಟ್ಟಿದೆ. ಹಿಂದಿನ ಸರ್ಕಾರದಲ್ಲಿ ಕಾಣದ ಕೈಗಳ ಒತ್ತಡದಿಂದಾಗಿ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಯಾಗಿರಲಿಲ್ಲ. ನಮ್ಮ ಸರ್ಕಾರದಲ್ಲಿ ನಿಶ್ಚಿತವಾಗಿ ಹುದ್ದೆಗಳನ್ನು ತುಂಬುವ ಪ್ರಯತ್ನ ನಡೆಯಲಿದೆ ಎಂದರು.

ಮಧ್ಯಕರ್ನಾಟಕ ದಾವಣಗೆರೆ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಆಗಬೇಕಿದೆ. ಇದರಿಂದ ಉದ್ಯಮಿಗಳು ಇಲ್ಲಿಗೆ ಬರಲು ಆಸಕ್ತಿ ವಹಿಸಲಿದ್ದಾರೆ. ಇದರಂತೆ ಎಲ್ಲ ಜಿಲ್ಲೆಯಲ್ಲೂ ವಿಮಾನ ನಿಲ್ದಾಣ ಬರಬೇಕು. ಈ ಸಂಬಂಧ ಮುಖ್ಯಮಂತ್ರಿ ಜತೆ ಸಮಾಲೋಚನೆ ನಡೆಸುವುದಾಗಿ ಚರ್ಚೆ ಹೇಳಿದರು.

ಸರ್ಕಾರಿ ಶಾಲೆಗಳನ್ನು ಮುಚ್ಚುವ ಮಾತು ಕೇಳಿಬರುತ್ತಿದೆ. ಇದರಲ್ಲಿ ಬಡವರ ಮಕ್ಕಳೇ ಓದುತ್ತಿರುವುದರಿಂದ ಇದು ಸಮಸ್ಯೆಯಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನರ್ಹರ ಪಡಿತರ ಚೀಟಿಗಳನ್ನು ರದ್ದುಪಡಿಸಲು ಸೂಚಿಸಿರುವುದಿಂದ ವಿಪಕ್ಷಗಳಿಗಿದು ಅಸ್ತ್ರವಾಗಲಿದೆ. ಸರ್ಕಾರಕ್ಕೆ ಮುಜುಗರ ಆಗಬಹುದು ಎಂದು ಕೆಲವರು ವಿಷಯ ಪ್ರಸ್ತಾಪಿಸಿದರು.

ಯಾರೋ ಮಾಡಿದ ತಪ್ಪಿನಿಂದಾಗಿ ಪಡಿತರ ಚೀಟಿಯಲ್ಲಿ ಅನರ್ಹರಿದ್ದಾರೆ. ಶೇ.85ರಿಂದ 95ರಷ್ಟು ಬಡವರು ಇರಲು ಸಾಧ್ಯವಿಲ್ಲ. ಈ ಬಗ್ಗೆ ಪರಿಶೀಲಿಸಲು ಸಿಎಂ ತಿಳಿಸಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಪಪಡಿಸಿದರು. ವೀರಶೈವ ಜಂಗಮರು ಬೇಡ ಜಂಗಮ ಹೆಸರಲ್ಲಿ ಎಸ್ಟಿ ಮೀಸಲಾತಿ ಪಡೆಯುತ್ತಿದ್ದಾರೆ ಎಂದು ಕೆಲವರು ಹೇಳಿದಾಗ ಈ ವಿಚಾರವಾಗಿ ಸಿಎಂ ಜತೆ ಚರ್ಚಿಸುವುದಾಗಿ ಹೇಳಿದರು.

ದಲಿತ, ಹಿಂದುಳಿದ ವರ್ಗಗಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಕೆಲವು ಕಾಮಗಾರಿಗಳ ಸಂಬಂಧ ಎಸ್ಸಿ-ಎಸ್ಟಿ ಗುತ್ತಿಗೆಗಾರರ ಬದಲಾಗಿ ಸಾಮಾನ್ಯ ವರ್ಗದ ಗುತ್ತಿಗೆದಾರರು ಅವಕಾಶ ಪಡೆಯುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಗುತ್ತಿಗೆದಾರರ ಪರವಾನಿಗೆ ಪಡೆಯಲು ನಿಯಮ ಸರಳೀಕರಣಗೊಳಿಸಬೇಕು ಎಂದು ಕೆಲ ಮುಖಂಡರು ಅನಿಸಿಕೆ ಹಂಚಿಕೊಂಡರು.

ರಾಜ್ಯದಲ್ಲಿ ಸತೀಶ್ ಜಾರಕಿಹೊಳಿ ಅವರು ಶೋಷಿತ ಸಮುದಾಯಗಳ ನಾಯಕತ್ವ ವಹಿಸಿದ್ದು ಅವರಿಗೆ ಕೈ ಜೋಡಿಸಬೇಕು. ಸಿದ್ದರಾಮಯ್ಯ ಅವರ ನಂತರದಲ್ಲಿ ಅವಕಾಶ ಸಿಕ್ಕರೆ ಅವರೇ ಮುಖ್ಯಮಂತ್ರಿ ಆಗಬೇಕು ಎಂದು ಕೆಲವರು ಅನಿಸಿಕೆ ಹಂಚಿಕೊಂಡರು.

ಆಗ ‘ಶೋಷಿತರು, ಹಿಂದುಳಿದವರ ಸಂಘಟನೆಯೇ ಮೊದಲ ಆಯ್ಕೆ, ಸಿಎಂ ಆಗಬೇಕೆಂಬುದು ಎರಡನೆಯದು. ಈಗ ಸಿದ್ದರಾಮಯ್ಯ ಅವರು ಆಡಳಿತ ನಡೆಸುತ್ತಿದ್ದು ಅವರೇ ಈಗ ನಮ್ಮ ನಾಯಕರು’ ಎಂದು ಸತೀಶ್ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ಕೆಪಿಸಿಸಿ ವಕ್ತಾರ ಡಿ.ಬಸವರಾಜ್, ಶಾಸಕ ಕೆ.ಎಸ್.ಬಸವಂತಪ್ಪ, ವಕೀಲ ಜಯದೇವನಾಯ್ಕ, ಮುಖಂಡರಾದ ಹೊದಿಗೆರೆ ರಮೇಶ್, ಜಿ.ಬಿ. ವಿಜಯಕುಮಾರ್, ಕೆ.ಅನಂತನಾಯ್ಕ, ಬಿ.ಎಚ್. ಪರಶುರಾಮಪ್ಪ, ಅನೀಸ್ ಪಾಷಾ, ರವಿನಾರಾಯಣ್, ರುದ್ರಮುನಿ, ಹೆಗ್ಗೆರೆ ರಂಗಪ್ಪ ಮೊದಲಾದವರಿದ್ದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net