

ದಾವಣಗೆರೆ:ಕಟ್ಟಡ ಕಾರ್ಮಿಕರ ಕಲ್ಯಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ವಲಸೆ ಕಾರ್ಮಿಕರಿಗೆ ಮನೆಗಳ ನಿರ್ಮಾಣ ಮಾಡುತ್ತಿರುವುದನ್ನು ವಿರೋಧಿಸಿ ಹಾಗೂ ರೖತ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಕೖಬಿಡಲು ಆಗ್ರಹಿಸಿ ಜೆಸಿಟಿಯು, ಕಿಸಾನ್ ಮೋರ್ಚಾ,
ಕಟ್ಟಡ ಕಾರ್ಮಿಕ ಸಂಘಟನೆಗಳ ಸಮನ್ವಯ ಸಮಿತಿಯ ಜಿಲ್ಲಾ ಘಟಕದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಅಶೋಕ ರಸ್ತೆಯ ಪಂಪಾಪತಿ ಭವನದ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿದ ಸಮಿತಿ ಪದಾಧಿಕಾರಿಗಳು, ಕಟ್ಟಡ ಕಾರ್ಮಿಕರು ಕಲ್ಯಾಣ ಮಂಡಳಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಹೊರವಲಯದ ಜೆ.ಎಚ್.ಪಟೇಲ್ ಬಡಾವಣೆಯ ಸಿ.ಎ ನಿವೇಶನ ಸಂಖ್ಯೆ 8ರಲ್ಲಿ ಕಟ್ಟಡ ಕಾರ್ಮಿಕರಿಗಾಗಿ 2 ಎಕರೆ 20ಗುಂಟೆ ಜಾಗವನ್ನು ಹಿಂದಿನ ಕಾರ್ಮಿಕ ಸಚಿವರು ಆಗಿದ್ದಂತಹ ಪಿ.ಟಿ ಪರಮೇಶ್ವರ್ ನಾಯ್ಕ ಮೀಸಲಿಟ್ಟಿದ್ದರು.
ಹಲವು ವರ್ಷದಿಂದ ಈ ಜಾಗವು ಮೀಸಲಿಟ್ಟ ಉದ್ದೇಶಕ್ಕೆ ಬಳಕೆಯಾಗಿರಲಿಲ್ಲ. ಇದೀಗ ಹೊರ ರಾಜ್ಯದ ವಲಸೆ ಕಾರ್ಮಿಕರಿಗಾಗಿ ಜಿ ಪ್ಲಸ್2 ಮಾದರಿಯ ಮನೆಗಳ ನಿರ್ಮಾಣಕ್ಕೆ ಬಳಸುತ್ತಿರುವುದು ಸರಿಯಲ್ಲ ಎಂದು ಸಮಿತಿಯ ಜಿಲ್ಲಾ ಸಂಚಾಲಕ ಆವರಗೆರೆ ಉಮೇಶ್ ಅಸಮಾಧಾನ ವ್ಯಕ್ತಪಡಿಸಿದರು.
ಹೋರಾಟದ ಫಲವಾಗಿ ಪಡೆದಿದ್ದ ನಿವೇಶನವನ್ನು, ಅದರಲ್ಲೂ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕೆ ಬಳಕೆ ಮಾಡದೆ ಇತರರಿಗೆ ಅವಕಾಶ ಮಾಡಿಕೊಡುವುದು ನ್ಯಾಯಸಮ್ಮತವಲ್ಲ. ಉದ್ದೇಶಕ್ಕೆ ಹೊರತಾಗಿ ಬೇರೆ ಚಟುವಟಿಕೆಗೆ ಬಳಸಬಾರದು.
ಒಂದು ವೇಳೆ ಇದನ್ನು ಮೀರಿದಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ದಾವಣಗೆರೆಯಿಂದ ಕಾರ್ಮಿಕ ಇಲಾಖೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ವಿಚಾರವಾಗಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಅವರಿಗೆ ಮನವಿಪತ್ರ ಸಲ್ಲಿಸಿ ಮನವರಿಕೆ ಮಾಡಲಾಗಿದೆ. ವಲಸೆ ಕಾರ್ಮಿಕರಿಗೆ ಮನೆ ನಿರ್ಮಾಣ ಕಾಮಗಾರಿ ಕೈಬಿಡಬೇಕು. ಹೊರ ರಾಜ್ಯದ ವಲಸೆ ಕಾರ್ಮಿಕರಿಗೆ ಪ್ರತ್ಯೇಕ ಜಾಗ ಖರೀದಿಸಿ ಮನೆಗಳನ್ನು ನಿರ್ಮಿಸಿಕೊಡಲಿ. ಉದ್ದೇಶಿತ ಜಾಗದಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿ ಐಎಎಸ್- ಕೆಎಎಸ್ ತರಬೇತಿ ಕೇಂದ್ರ ತೆರೆಯಬೇಕು. ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ತರಬೇತಿ ಕೇಂದ್ರ ನಿರ್ಮಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆ ಬಳಿಕ ಬಳ್ಳಾರಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಗೆ ತೆರೆಳಿದ ಮುಖಂಡರು, ಅವರ ಮೂಲಕ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಮನವಿಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ವಿ. ಲಕ್ಷ್ಮಣ್, ಪದಾಧಿಕಾರಿಗಳಾದ ಐರಣಿ ಚಂದ್ರು, ಸುರೇಶ್ ಯರಗುಂಟೆ, ಸುರೇಶ್ ಮುದಹದಡಿ, ಸತೀಶ್ ಅರವಿಂದ್, ಪವಿತ್ರಾ ಅರವಿಂದ್, ನಾಗಮ್ಮ, ಆವರಗೆರೆ ಚಂದ್ರು, ಜಗಳೂರು ಬಾಷಾ, ಚನ್ನಗಿರಿಯ ಸಯ್ಯದ್ ಗೌಸ್‌ಪೀರ್, ಮಹ್ಮದ್ ರಫಿಕ್, ತಿಪ್ಪೇಸ್ವಾಮಿ ಇತರರಿದ್ದರು.