ದಾವಣಗೆರೆಯಲ್ಲಿ ಪ್ರಭಾ ಮಲ್ಲಿಕಾರ್ಜುನ್ ರೋಡ್ ಶೋ   ಬಿಸಿಲಲ್ಲೂ ಕೈ ಕಾರ್ಯಕರ್ತರ ಉತ್ಸಾಹ

IMG-20240418-WA0088.jpg
Published on

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್, ಸಾವಿರಾರು ಕಾರ್ಯಕರ್ತರೊಂದಿಗೆ ನಗರದಲ್ಲಿ ಗುರುವಾರ ಭರ್ಜರಿ ರೋಡ್ ಶೋ ನಡೆಸಿದರು.
ದಾವಣಗೆರೆ ಉತ್ತರ, ದಕ್ಷಿಣ ಭಾಗಗಳಿಂದ ಮೆರವಣಿಗೆ ಆಯೋಜಿಸಲಾಗಿತ್ತು. ಬಿರುಬಿಸಿಲಲ್ಲೂ ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಟೆಂಪೋ, ಟ್ರಾೃಕ್ಟರ್, ಕಾರುಗಳು ಸಾಲುಗಟ್ಟಿದ್ದವು.
ಅಭ್ಯರ್ಥಿ ಡಾ. ಪ್ರಭಾ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರೊಂದಿಗೆ ಶಾಮನೂರಿನ ಈಶ್ವರ ಹಾಗೂ ಆಂಜನೇಯ ಸ್ವಾಮಿ, ನಿಟುವಳ್ಳಿಯ ದುರ್ಗಾಂಬಿಕಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವಿಶೇಷ ವಾಹನದಲ್ಲಿ ರೋಡ್ ಶೋ ನಡೆಸಿದರು. ಮತದಾರರತ್ತ ಕೈ ಬೀಸಿದರು.
ನಿಟುವಳ್ಳಿ ವೃತ್ತದಲ್ಲಿ ಮಲ್ಲಿಗೆ, ಕನಕಾಂಬರ, ತುಳಸಿಯಿಂದ ನಿರ್ಮಿಸಿದ ಬೃಹತ್ ಹಾರವನ್ನು ಕ್ರೇನ್ ಮೂಲಕ ಸಮರ್ಪಿಸಲಾಯಿತು. ಅಭಿಮಾನಿಗಳು ತೊಡಿಸಿದ ಮೈಸೂರು ಪೇಟಾ, ರಾಜಸ್ತಾನಿ ರುಮಾಲು, ಕಂಬಳಿ ಹೊದ್ದು ಗಮನ ಸೆಳೆದ ದಂಪತಿ ಪ್ರಚಾರ ವಾಹನದಲ್ಲಿಯೇ ಬೆಣ್ಣೆದೋಸೆ ಸವಿದರು. ಮಗ ಸಮರ್ಥ್‌ನ ಕೈ ಕುಲುಕಲು ಜನರು ಮುಂದಾದರು. ಡಾಂಗೆ ಪಾರ್ಕ್, ಶಿವಪ್ಪಯ್ಯ ವೃತ್ತ ಮೂಲಕ ಪಿಬಿ ರಸ್ತೆಗೆ ಸಾಗಿತು.
ಮೊಮ್ಮ್ಮಗಳು ಶ್ರೇಷ್ಠಾ ಜತೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರು ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿಗೆ ಪೂಜೆ ಸಲ್ಲಿಸಿ, ತೆರೆದ ವಾಹನದಲ್ಲಿ ಆರಂಭಿಸಿದ್ದ ರೋಡ್ ಶೋ ಹಗೆದಿಬ್ಬ ವೃತ್ತ, ಕಾಳಿಕಾದೇವಿ ರಸ್ತೆ, ಮಂಡಿಪೇಟೆ, ವಿಜಯಲಕ್ಷ್ಮೀ ವೃತ್ತ ಮೂಲಕ ನಗರಪಾಲಿಕೆಗೆ ತಲುಪಿತು. ಅಲ್ಲಿ ಸಮಾವೇಶಗೊಂಡ ರೋಡ್ ಶೋ, ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಅಂತ್ಯಗೊಂಡಿತು.
ನಾಸಿಕ್ ಡೋಲ್ ಸದ್ದು ಮಾಡಿತು. ಯುವಕರು ಪಕ್ಷದ ಗುರುತಿನ ಟೋಪಿ, ಶಲ್ಯ ಧರಿಸಿದ್ದರು. ಕಾಂಗ್ರೆಸ್,ಎನ್‌ಎಸ್‌ಯುಐ ಬಾವುಟ,ಪ್ರಮುಖರ ಭಾವಚಿತ್ರಗಳು ರಾರಾಜಿಸಿದವು. ಥರ್ಮಾಕೋಲ್‌ನಲ್ಲಿ ನಿರ್ಮಿಸಿದ್ದ ಪ್ರಭಾ ಮಲ್ಲಿಕಾರ್ಜುನ್ ಹೆಸರಿನ ಪದಗುಚ್ಛ ಪ್ರದರ್ಶಿತವಾಯಿತು. ಧ್ವನಿಮುದ್ರಿತ ಹಾಡುಗಳು ಮೊಳಗಿದವು. ಪಟಾಕಿ ಸಿಡಿಸಲಾಯಿತು. ಮಜ್ಜಿಗೆ ವಿತರಣೆ ನಡೆಯಿತು.
ಶಾಸಕರಾದ ಶಿವಗಂಗಾ ಬಸವರಾಜ್, ಡಿ.ಜಿ.ಶಾಂತನಗೌಡ, ಕೆ.ಎಸ್.ಬಸವಂತಪ್ಪ, ಲತಾ ಮಲ್ಲಿಕಾರ್ಜುನ, ಮಾಜಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ, ಪಕ್ಷದ ಜಿಲ್ಲಾಧ್ಯಕ್ಚ ಎಚ್.ಬಿ.ಮಂಜಪ್ಪ, ಉದ್ಯಮಿ ಅಣಬೇರು ರಾಜಣ್ಣ, ಲೆಕ್ಕ ಪರಿಶೋಧಕ ಅಥಣಿ ವೀರಣ್ಣ, ಸವಿತಾ ಹುಲ್ಮನಿ, ಗಣೇಶ್ ಹುಲ್ಮನಿ ಇತರರಿದ್ದರು.

...
ಕ್ಷೇತ್ರದ ಜನರು ಈ ಬಾರಿ ಬದಲಾವಣೆ ಬಯಸುತ್ತಿದ್ದಾರೆ. ಕಾರ್ಯಕರ್ತರ ಉತ್ಸಾಹ ಮೇ ಏಳನೇ ತಾರೀಕಿನಿವರೆಗೂ ಹೀಗೇ ಇರಲಿ. ಜನರ ತೀರ್ಮಾನವನ್ನು ಈ ರ‌್ಯಾಲಿ ಮೂಲಕ ತೋರಿಸಿದ್ದು, ಮತದಾರರು ನನಗೊಂದು ಅವಕಾಶ ಮಾಡಿಕೊಡಬೇಕು.
 ಡಾ. ಪ್ರಭಾ ಮಲ್ಲಿಕಾರ್ಜುನ್.
ಕಾಂಗ್ರೆಸ್ ಅಭ್ಯರ್ಥಿ
---
ಸಿದ್ದರಾಮಯ್ಯ ಸರ್ಕಾರದ ಯೋಜನೆಗಳು ದಾವಣಗೆರೆಯಲ್ಲಿ ಎಲ್ಲರಿಗೂ ತಲುಪಿದೆ. ಕ್ಷೇತ್ರದಲ್ಲಿ ಡಾ. ಪ್ರಭಾ ಮಲ್ಲಿಕಾರ್ಜುನ್,  ಕಾಂಗ್ರೆಸ್ ಅಲೆ ಇದೆ. ಮೇ.3ರಂದು ಪಕ್ಷದ ವರಿಷ್ಠರು ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.
 ಎಸ್.ಎಸ್. ಮಲ್ಲಿಕಾರ್ಜುನ
ಜಿಲ್ಲಾ ಉಸ್ತುವಾರಿ ಸಚಿವ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net