ಗ್ಯಾರಂಟಿ ಯೋಜನೆಗಳ ಅಪಪ್ರಚಾರ ಜಿಲ್ಲಾ ಕಾಂಗ್ರೆಸ್‌ನಿಂದ ಪ್ರತಿಭಟನೆ

1000798637.jpg
Published on

ದಾವಣಗೆರೆ: ರಾಜ್ಯ ಸರ್ಕಾರದ ಜನಪರ ಗ್ಯಾರಂಟಿ ಯೋಜನೆಗಳು ಹಾಗೂ ವಿವಿಧ ಕಾರ್ಯಕ್ರಮಗಳಿಗೆ ಬಿಜೆಪಿ ನಾಯಕರ ವಿರೋಧ ಖಂಡಿಸಿ ಕಾಂಗ್ರೆಸ್ ಜಿಲ್ಲಾ ಘಟಕದ ಮುಖಂಡರು, ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಜಯದೇವ ವೃತ್ತದಲ್ಲಿ ಸಾಂಕೇತಿಕ ಧರಣಿ ನಡೆಸಿದ ಕಾರ್ಯಕರ್ತರು ಬಿತ್ತಿಪತ್ರಗಳನ್ನು ಹಿಡಿದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅಲ್ಲದೆ ರಾಜ್ಯದ ನಾಯಕರ ವಿರುದ್ಧವೂ ಧಿಕ್ಕಾರ ಕೂಗಿದರು.

ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಕೊಟ್ಟ ಭರವಸೆ ಈಡೇರಿಸಿದೆ. ರಾಜ್ಯದಲ್ಲಿ ಸುಭದ್ರ, ಜನಪರ ಆಡಳಿತ ನೀಡುತ್ತಿದೆ. ಬಿಜೆಪಿ ನಾಯಕರು ಇಲ್ಲಸಲ್ಲದ ಸುಳ್ಳು ಹೇಳುವ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿ ಬಾರಿಯಂತೆ ಈ ಸಲವೂ ಉತ್ತಮ ಬಜೆಟ್ ಮಂಡಿಸಿದ್ದಾರೆ. ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಯ ಅಂಶಗಳನ್ನು ಬಿಜೆಪಿಯವರು ಅವರ ಪ್ರಣಾಳಿಕೆಯಲ್ಲಿ ನಕಲು ಮಾಡಿದ್ದಾರೆ ಎಂದರು.

ವಿಧಾನಸಭೆ ಸದನದಲ್ಲಿ ಸಭಾಧ್ಯಕ್ಷರ ಮೇಲೆ ಬಿಜೆಪಿ ಸದಸ್ಯರು ಪತ್ರಿಕೆಗಳ ತುಣುಕುಗಳನ್ನು ಹರಿದು ಎಸೆದಿದ್ದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕಾಲೆಳೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಎಲ್ಲ ಭಾರತೀಯರ ಬ್ಯಾಂಕ್ ಖಾತೆಗೂ 15 ಲಕ್ಷ ರೂ. ಹಾಕುವ ಹೇಳಿಕೆ ನೀಡಿದ್ದರೂ ಅದನ್ನು ಕಾರ್ಯಗತಗೊಳಿಸಿಲ್ಲ. 15 ರೂ. ಸಹ ಹಾಕಿಲ್ಲ. ಜಾತಿಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿರುವ ಬಿಜೆಪಿ, ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕಿತ್ತು. ಆದರೆ ಅದರ ಬದಲಾಗಿ ವಕ್ಫ್ ತಿದ್ದುಪಡಿ ವಿಧೇಯಕ ಅಂಗೀಕರಿಸಿದೆ ಎಂದರು.

ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮಾತನಾಡಿ ಕೇಂದ್ರದ ಸರ್ಕಾರವು ರಾಜ್ಯಕ್ಕೆ ಅನ್ಯಾಯ ಎಸಗುತ್ತಿದೆ. ಹೆಚ್ಚು ತೆರಿಗೆ ಕಟ್ಟುತ್ತಿದ್ದರೂ, ರಾಜ್ಯದ ಪಾಲಿನ ಅನುದಾನವನ್ನೂ ಸಹ ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತಿಲ್ಲ ಎಂದು ಕಿಡಿ ಕಾರಿದರು.

ಬಡವರ ಹೆಣದ ಮೇಲೆ ರಾಜಕಾರಣ ಮಾಡುವುದು ಬಿಜೆಪಿಯ ಚಾಳಿಯಾಗಿದೆ. ಸತೀಶ್ ಪೂಜಾರಿ ಗಣೇಶ ಹಬ್ಬದ ವೇಳೆ ಗಲಾಟೆ ಮಾಡಿಸಲು ಯತ್ನಿಸಿದರು. ಜನರ ಭಾವನೆಗಳಿಗೆ ಧಕ್ಕೆ ತರುವ, ಬೆಂಕಿ ಹಚ್ಚುವ ಕೆಲಸದಲ್ಲಿ ಬಿಜೆಪಿ ನಿರತವಾಗಿದೆ ಎಂದು ಆರೋಪಿಸಿದರು.

ಮಾಜಿ ಮೇಯರ್ ಕೆ.ಚಮನ್‌ಸಾಬ್, ಪಾಲಿಕೆ ಮಾಜಿ ಸದಸ್ಯ ಎ.ನಾಗರಾಜ್, ಅಯೂಬ್ ಪೈಲ್ವಾನ್, ಕೆ.ಜಿ.ಶಿವಕುಮಾರ್, ಶಾಮನೂರು ಬಸವರಾಜ್, ಸೋಗಿ ಶಾಂತಕುಮಾರ್, ಡೋಲಿ ಚಂದ್ರು, ಎಸ್. ಮಲ್ಲಿಕಾರ್ಜುನ, ಎಲ್.ಎಚ್. ಸಾಗರ್, ಮೈನುದ್ದೀನ್, ದಾದಾಪೀರ್, ಮಂಗಳಮ್ಮ, ಮಂಜಮ್ಮ, ದಾಕ್ಷಾಯಿಣಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net