ಪ್ರಾಸಿಕ್ಯೂಷನ್ ಅನುಮತಿ ಬೀದಿಗಿಳಿದ ಕಾಂಗ್ರೆಸ್

1000326109.jpg
Published on

ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್‌ನಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು.
ತಮಟೆ ಮೇಳದೊಂದಿಗೆ ಸಾಗಿದ ಪ್ರತಿಭಟನಾಕಾರರು ಮೆರವಣಿಗೆಯಲ್ಲಿ ಕಲ್ಪಿತ ಶವಯಾತ್ರೆ ನಡೆಸಿದರು. ರಾಜ್ಯಪಾಲ ಹಠಾವೋ ಕರ್ನಾಟಕ ಬಚಾವೋ ಎಂದು ಗೌರ‌್ನರ್ ವಿರುದ್ಧ ಧಿಕ್ಕಾರ ಕೂಗಿದರು.
ಗಾಂಧಿವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ. ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ನ್ಯಾಯಕ್ಕಾಗಿ ಹೋರಾಟ ನಡೆಸಲಿದ್ದಾರೆ ಎಂದು ಹೇಳಿದರು.
ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿರುವುದನ್ನು ಮನಗಂಡು ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ವಾಪಾಸ್ ಪಡೆದು ದೊಡ್ಡತನ ಪ್ರದರ್ಶಿಸಬೇಕು. ಯಾವುದೇ ಪಕ್ಷಗಳ ಕೈಗೊಂಬೆಯಾಗಿ ಕೆಲಸ ಮಾಡಬಾರದು ಎಂದರು.
ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಇರುವ ರಾಜ್ಯಗಳಲ್ಲಿನ ಸುಭದ್ರ ಸರ್ಕಾರಗಳ ಅಸ್ಥಿರಗೊಳಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಇದರ ಜತೆಗೆ ರಾಜ್ಯ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ರಾಜ್ಯ ಸರ್ಕಾರ ಅಭದ್ರಗೊಳಿಸುವ ಪ್ರಯತ್ನ ನಡೆಸಿವೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು 136 ಶಾಸಕರನ್ನು ಒಳಗೊಂಡ ಸುಭದ್ರ ಸರ್ಕಾರ ರಚನೆ ಮಾಡಿದ್ದು, ಜನತೆ ಐದು ಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು ಪಕ್ಷಾತೀತವಾಗಿ ಪಡೆಯುತ್ತಿದ್ದಾರೆ. ಜನರ ಆಶೀರ್ವಾದ ಸಿದ್ದರಾಮಯ್ಯ ಸರ್ಕಾರದ ಮೇಲಿದೆ ಎಂದರು.
ಮುಡಾಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರವಿಲ್ಲ. ರಾಜ್ಯಪಾಲರು ಸಂವಿಧಾನಕ್ಕೆ ಹೆಚ್ಚಿನ ಗೌರವ ನೀಡುವ ಮೂಲಕ ಪಕ್ಷಾತೀತವಾಗಿ ನಡೆದುಕೊಳ್ಳಬೇಕು. ಪ್ರಾಸಿಕ್ಯೂಷನ್ ಬಗ್ಗೆ ಸರಿಯಾದ ನಿಲುವು ತೆಗೆದುಕೊಳ್ಳಬೇಕು ಒತ್ತಾಯಿಸಿದರು.
ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸುತ್ತಿದೆ. ರಾಜ್ಯದ ಸುಭದ್ರ ಸರ್ಕಾರ ಕಿತ್ತೊಗೆಯುವ ಒಳಸಂಚನ್ನು ನಡೆಸಿರುವ ಬಿಜೆಪಿಯು ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ದೂರಿದರು.
ರಾಜ್ಯಪಾಲರು ಕೇಂದ್ರ ಸರ್ಕಾರದ ಒತ್ತಡದಿಂದ ದುರುದ್ದೇಶದಿಂದ ಪ್ರಾಸಿಕ್ಯೂಷನ್ ಅನುಮತಿ ನೀಡಿದ್ದಾರೆ. ಅತ್ಯಂತ ದಕ್ಷವಾಗಿ ಸ್ವಚ್ಛ ಆಡಳಿತ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಭದ್ರಗೊಳಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಹೈಕಮಾಂಡ್, 136 ಶಾಸಕರು ಹಾಗೂ ರಾಜ್ಯದ ಜನತೆ ಸಿಎಂ ಜತೆಗಿದ್ದೇವೆ. ಮುಂದಿನ ದಿನಗಳಲ್ಲಿ ಜಯ ಸಿಗುವವರೆಗೆ ಹೋರಾಟ ನಡೆಸಲಾಗುವುದು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಒಂದು ಕಪ್ಪುಚುಕ್ಕೆ ಇಲ್ಲದೆ ಸ್ವಚ್ಛ ಆಡಳಿತ ನೀಡುತ್ತಿದ್ದಾರೆ. ಜನರು ಕಾಂಗ್ರೆಸ್ ಪರವಾಗಿದ್ದಾರೆ ಎಂದು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸಿಎಂ ಕೆಳಗಿಳಿಸಿ ಹಿಂಬಾಗಿಲಿನಿಂದ ಆಧಿಕಾರ ಹಿಡಿಯುವ ಕುತಂತ್ರ ನಡೆಸುತ್ತಿದ್ದು ರಾಜ್ಯಪಾಲರು ಕೈಗೊಂಬೆಯಾಗಿದ್ದಾರೆ ಎಂದು  ಆರೋಪಿಸಿದರು.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ಕೆ.ಶೆಟ್ಟಿ, ಎಸ್. ಮಲ್ಲಿಕಾರ್ಜುನ್, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್. ಜಯದೇವನಾಯ್ಕ, ಪಾಲಿಕೆ ಮೇಯರ್ ವಿನಾಯಕ ಪೈಲ್ವಾನ್, ಸದಸ್ಯರಾದ ಎ. ನಾಗರಾಜ್, ಮುಖಂಡರಾದ ಕೆ.ಜಿ. ಶಿವಕುಮಾರ್, ಅಯೂಬ್ ಪೈಲ್ವಾನ್, ಕೆ.ಪಿ. ಪಾಲಯ್ಯ, ಹೊದಿಗೆರೆ ರಮೇಶ್, ಎಚ್.ಎಸ್.ನಾಗರಾಜ್, ಜಿ.ಸಿ.ನಿಂಗಪ್ಪ, ಬಿ.ವೀರಣ್ಣ, ನಂದಿಗಾವಿ ಶ್ರೀನಿವಾಸ್, ಎಸ್.ಎಸ್. ಗಿರೀಶ್, ಆನಂದಪ್ಪ, ಸುಷ್ಮಾ ಪಾಟೀಲ್, ಶುಭಮಂಗಳಾ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net