

ದಾವಣಗೆರೆ: ರಾಜ್ಯದ ಪಾಲಿನ ತೆರಿಗೆ ಹಣ ನೀಡದೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅನ್ಯಾಯ ಎಸಗಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಶನಿವಾರ ಚೊಂಬುಗಳ ಪ್ರದರ್ಶನದೊಂದಿಗೆ ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಪ್ರತಿಭಟನಾಕಾರರು ‘ಗೋ ಬ್ಯಾಕ್ ಮೋದಿ’ ಎಂದು ಕೂಗಿದರು. ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿಪತ್ರ ಸಲ್ಲಿಸಿದರು. ಆಮ್‌ಆದ್ಮಿ ಹಾಗೂ ಸಿಪಿಐ ಕಾರ್ಯಕರ್ತರು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.
ಎಐಸಿಸಿ ಕಾರ್ಯದರ್ಶಿ ಮಯೂರ್ ಎಸ್. ಜಯಕುಮಾರ್ ಮಾತನಾಡಿ, 10 ವರ್ಷ ಆಡಳಿತ ಮಾಡಿದ ಮೋದಿ ಸರ್ಕಾರ, ದೇಶದ ಜನರಿಗೆ ಸುಳ್ಳು ಭರವಸೆ ನೀಡುತ್ತಾ ಜನರನ್ನು ವಂಚಿಸುತ್ತಿದೆ ಎಂದು ಕಿಡಿ ಕಾರಿದರು.
ದೇಶದ ಯುವಕರಿಗೆ 2 ಕೋಟಿ ಉದ್ಯೋಗ ಸೃಷ್ಟಿಸುವಲ್ಲಿ ಬಿಜೆಪಿ ಸರ್ಕಾರ ಸೋತಿದೆ. ತೆರಿಗೆ ವಿಚಾರದಲ್ಲೂ ತಾರತಮ್ಯ ಮಾಡಿದೆ. ಅತಿ ಹೆಚ್ಚು ತೆರಿಗೆ ಭರಿಸುವ ಎರಡನೇ ರಾಜ್ಯ ಕರ್ನಾಟಕ. ನಾವು ಕಟ್ಟಿದ ತೆರಿಗೆ ಹಣದಲ್ಲಿ 100 ರೂ.ಗೆ 13 ರೂ. ನೀಡಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆ. ನಮ್ಮ ಪಾಲು ನೀಡದೆ ರಾಜ್ಯಕ್ಕೆ ಖಾಲಿ ಚೊಂಬು ಕೊಟ್ಟಿದೆ. ಇಂತಹ ಸರ್ಕಾರ ಕೊನೆಗಾಣಿಸಬೇಕು ಎಂದು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಮಾತನಾಡಿ, ಅತಿವೃಷ್ಟಿ, ಬರಗಾಲ ಸಂದರ್ಭದಲ್ಲಿ ಕರ್ನಾಟಕಕ್ಕೆ ದಾವಿಸದ ನರೇಂದ್ರ ಮೋದಿ ಈಗ ವೋಟಿಗಾಗಿ ಬರುತ್ತಿದ್ದಾರೆ. ಜಿಲ್ಲೆಗೆ ಏನನ್ನೂ ನೀಡದ ಬಿಜೆಪಿ ಸರ್ಕಾರವನ್ನೂ ಹಿಂದಕ್ಕೆ ಕಳಿಸಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಪಾಲಿಕೆ ಸದಸ್ಯರಾದ ಎ.ನಾಗರಾಜ್, ಅಬ್ದುಲ್ ಲತೀಫ್, ಕೆ. ಚಮನ್‌ಸಾಬ್, ಪಾಮೇನಹಳ್ಳಿ ನಾಗರಾಜ್, ಮುಖಂಡರಾದ ಕೆ.ಜಿ.ಶಿವಕುಮಾರ್, ಬಿ.ಎಚ್.ವೀರಭದ್ರಪ್ಪ, ಹದಡಿ ನಿಂಗಪ್ಪ, ಸೋಮ್ಲಾಪುರ ಹನುಮಂತಪ್ಪ, ಡೋಲಿ ಚಂದ್ರು, ಅನಿತಾಬಾಯಿ ಮಾಲತೇಶ್, ರೇವಣಸಿದ್ದಪ್ಪ, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಶಿವಕುಮಾರ್, ಸಿಪಿಐನ ಮುಖಂಡರಾದ ಎಚ್.ಜಿ.ಉಮೇಶ್, ಆವರಗೆರೆ ಚಂದ್ರು, ಆವರಗೆರೆ ವಾಸು ಇತರರಿದ್ದರು.