ಸದನದಲ್ಲಿ ಕಾಂಗ್ರೆಸ್ ಕಾಲಹರಣ ದ್ವೇಷ ರಾಜಕಾರಣ ಎಂಪಿಆರ್ ಟೀಕೆ

1000002146.jpg
Published on

ದಾವಣಗೆರೆ: ಬೆಳಗಾವಿಯ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರ, ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬದಲಾಗಿ ಅನಗತ್ಯ ವಿಚಾರಗಳನ್ನು ಪ್ರಸ್ತಾಪಿಸಿ, ದ್ವೇಷದ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕದ ವಿಚಾರಗಳ ಚರ್ಚೆ, ಪರಿಹಾರಕ್ಕೆ ಮೀಸಲಿಡಬೇಕಿದ್ದ ಸದನವನ್ನು ಪೋಕ್ಸೋ, 150 ಕೋಟಿ ರೂ. ಆಫರ್, ಕೋವಿಡ್, ಮುನಿರತ್ನ ಪ್ರಕರಣಗಳ ಚರ್ಚೆಗೆ ಮೀಸಲಿಡುವ ಮೂಲಕ ಸರ್ಕಾರ ಜನರ 30 ಕೋಟಿ ತೆರಿಗೆ ಹಣ ಪೋಲು ಮಾಡುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ದ್ವೇಷದ ರಾಜಕಾರಣ, ಸಿದ್ದರಾಮಯ್ಯ ಮತ್ತು ಕಾಂಗ್ರೆಸಿಗರಲ್ಲಿ ರಕ್ತಗತವಾಗಿ ಬಂದಿದೆ. ಸರ್ಕಾರ ತನ್ನ ಆಡಳಿತಾವಧಿಯ ಭ್ರಷ್ಟಾಚಾರ ಹಗರಣಗಳ ಕಳಂಕ ತೊಳೆದುಕೊಳ್ಳಲು ವಿಷಯಾಂತರ ಮಾಡುತ್ತಿದೆ. ರಾಜ್ಯದಲ್ಲಿ ಅತಿವೃಷ್ಟಿಯಿಂದ ಹಾನಿಗೀಡಾದ ಬೆಳೆ ಹಾಗೂ ಬಿದ್ದ ಮನೆಗಳಿಗೆ ಸರ್ಕಾರ ಇದುವರೆಗೆ ಪರಿಹಾರ ನೀಡಿಲ್ಲ. ರಸ್ತೆ ಗುಂಡಿಗಳನ್ನು ಮುಚ್ಚುತ್ತಿಲ್ಲ ಎಂದು ದೂರಿದರು.
ವಕ್ಫ್ ಆಸ್ತಿ ಕಬಳಿಕೆ ಬಗ್ಗೆ ಮೌನವಾಗಿರಲು ಆಮಿಷ ಒಡ್ಡಿದ್ದು ಕಾಂಗ್ರೆಸಿಗರೇ ಹೊರತಾಗಿ ವಿಜಯೇಂದ್ರ ಅಲ್ಲ ಎಂಬುದನ್ನು ಅನ್ವರ್ ಮಾಣಿಪ್ಪಾಡಿ ಸ್ಪಷ್ಟಪಡಿಸಿದ್ದಾರೆ. ಹೀಗಿದ್ದೂ ಸಿಬಿಐ ತನಿಖೆಗೆ ಒತ್ತಾಯಿಸುತ್ತಿರುವ ಕಾಂಗ್ರೆಸ್, ಭ್ರಷ್ಟಾಚಾರ ಹಗರಣಗಳನ್ನೇಕೆ ಸಿಬಿಐಗೆ ವಹಿಸುತ್ತಿಲ್ಲ ಎಂದು ಪ್ರಶ್ನಿಸಿದರು. ತನಿಖೆಗೆ ವಹಿಸಿದರೂ ವಿಜಯೇಂದ್ರ ಹೆದರುವ ಮಾತಿಲ್ಲ ಎಂದೂ ಹೇಳಿದರು.
ಕುಮಾರ ಬಂಗಾರಪ್ಪಗೆ ಟಾಂಗ್
ಜನವರಿಯಲ್ಲಿ ಪಕ್ಷದ ಅಧ್ಯಕ್ಷರ ಬದಲಾವಣೆ  ಸಾಧ್ಯತೆ ಇದೆ ಎಂದ ಮಾಜಿ ಶಾಸಕ ಕುಮಾರ ಬಂಗಾರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ ಇದನ್ನು ಹೇಳಲು ಕುಮಾರ್  ಬಂಗಾರಪ್ಪ ಯಾರು ಎಂದು ಪ್ರಶ್ನಿಸಿದರು.
 ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ರಾಷ್ಟ್ರೀಯ ನಾಯಕರು ಹೇಳಿಲ್ಲ. ವಿಜಯೇಂದ್ರ ಅವರೇ ಮುಂದುವರಿಯುತ್ತಾರೆ. ಈ ವಿಚಾರದಲ್ಲಿ ಯಾವುದೇ ಗೊಂದಲವೂ ಇಲ್ಲ. ಸ್ಥಳೀಯ ಸಂಸ್ಥೆ ಹಾಗೂ ಮುಂಬರುವ ವಿಧಾನಸಭೆ ಚುನಾವಣೆಗಳು ವಿಜಯೇಂದ್ರ ಅವರ ನೇತೃತ್ವದಲ್ಲೇ ನಡೆಯಲಿವೆ ಎಂದರು.
ದಿಲ್ಲಿಯತ್ತ ರೇಣುಕಾಚಾರ್ಯ
ಖಾಸಗಿ ಕೆಲಸದ ನಿಮಿತ್ತ ಸೋಮವಾರ ತಾವೊಬ್ಬರೇ ದಿಲ್ಲಿಗೆ ತೆರಳುತ್ತಿದ್ದು  ಈ ವೇಳೆ ಪಕ್ಷದ ವರಿಷ್ಠರನ್ನು ಕೂಡ ಸಂಪರ್ಕ ಮಾಡಲಿದ್ದೇನೆ ಎಂದು ರೇಣುಕಾಚಾರ್ಯ ತಿಳಿಸಿದರು.ಯಡಿಯೂರಪ್ಪ ಅವರು ರಾಜಕೀಯದಿಂದ ನಿವೃತ್ತಿಯಾಗಿಲ್ಲ. ಅವರ ಅಭಿಮಾನಿಗಳೇ ಸೇರಿಕೊಂಡು ಜನ್ಮದಿನ ಆಚರಣೆ ಮಾಡುತ್ತಿದ್ದೇವೆ, ಇದಕ್ಕೆ ಯಾರ ವಿರೋಧವೂ ಇಲ್ಲ ಎಂದೂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜು ವೀರಣ್ಣ, ಪ್ರವೀಣ್ ಜಾಧವ್, ಜಯಣ್ಣ, ಮಂಜು ಪೈಲ್ವಾನ್, ದಯಾನಂದ್, ಸುಮನ್, ಚಂದ್ರು ಪಾಟೀಲ್ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net