ಶಿಷ್ಟಾಚಾರ ಮರೆತರೆ ಮನೆ ಕಡೆ ದಾರಿ ಪದಾಧಿಕಾರಿಗಳಿಗೆ ಎಚ್ಚರಿಕೆ

1000973288.jpg
Published on

ದಾವಣಗೆರೆ: ಪಕ್ಷದ ಶಿಷ್ಟಾಚಾರದಂತೆ ಕೆಲಸ, ಸಂಘಟನೆ ಮಾಡಿದವರಿಗೇ ಮಾತ್ರವೇ ಇಲ್ಲಿ ಪೋಸ್ಟ್. ಇಲ್ಲವಾದಲ್ಲಿ ಅವರ ಮನೆಯಲ್ಲಿ ಬೇರೊಂದು ಪೋಸ್ಟ್ ಇಟ್ಟುಕೊಂಡು ಕೂರಬೇಕಾದೀತು ಎಂದು ಕಾಂಗ್ರೆಸ್ ಯುವ ಘಟಕದ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ ಪದಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ನಗರದ ಬಾಪೂಜಿ ಎಂಬಿಎ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ, ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜಕೀಯದಲ್ಲಿ ತಾಳ್ಮೆ ಮುಖ್ಯ. ಸಹನೆಯಿಂದ ಕೇಳಿಸಿಕೊಂಡು ಕೆಲಸ ಮಾಡಬೇಕು. ಕಾಂಗ್ರೆಸ್ ಸಮುದ್ರದಂತೆ. ನನ್ನಿಂದಲೇ ಎಲ್ಲವೂ ನಡೆಯುತ್ತದೆ ಎಂಬ ಭ್ರಮೆಯಾಗಲೀ, ಚುನಾವಣೆಯಲ್ಲಿ ಆಯ್ಕೆಯಾಗಿದ್ದೇವೆ, ನಮ್ಮನ್ನು ಯಾರೂ ಅಲುಗಾಡಿಸಲಾಗದು ಎಂಬ ಮನೋಭಾವವಾಗಲಿ ಬೇಡ. ಕೆಲಸ ಮಾಡದವರ ಬದಲಾವಣೆ ನಿಶ್ಚಿತ ಎಂದು ಹೇಳಿದರು.

ದೇಶದಲ್ಲಿ ಕರ್ನಾಟಕದಲ್ಲಿ ಮಾತ್ರವೇ ಗ್ಯಾರಂಟಿ ಯೋಜನೆಗಳನ್ನು ಜಾರಿ ಜತೆಗೆ ತೊಂದರೆಯಾಗದಂತೆ ಯಶಸ್ವಿ ನಿರ್ವಹಣೆ ಮಾಡಲಾಗುತ್ತಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳು ಇದನ್ನು ನಕಲು ಮಾಡಿದರೂ ನಷ್ಟದ ಕಾರಣಕ್ಕೆ ದೂರ ಸರಿದಿವೆ. ನಮ್ಮ ಸರ್ಕಾರದ ಈ ಯೋಜನೆಗಳ ಬಗ್ಗೆ ಭಿತ್ತಿಪತ್ರಗಳನ್ನು ಅಂಟಿಸಿ ಮನೆ ಮನೆಗೆ ತಲುಪಿಸಬೇಕು ಎಂದು ಕಾರ್ಯಕರ್ತರಿಗೆ ಸೂಚನೆ ನೀಡಿದರು.

ಇಂದಿರಾಗಾಂಧಿ ಅವರನ್ನು ಹಿಟ್ಲರ್ ಎಂದು ಬಿಜೆಪಿಯವರು ಟೀಕಿಸಿದ್ದಾರೆ. ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸದ, ಯಾವುದೇ ಹೊಸ ಯೋಜನೆ ನೀಡದ ಹಾಗೂ ದೇಶದ ಸಾಲ ಹೆಚ್ಚು ಮಾಡಿರುವ ಪ್ರಧಾನಿ ನರೇಂದ್ರ ಮೋದಿಯೇ ನಿಜವಾದ ಹಿಟ್ಲರ್ ಎಂದು ದೂರಿದ ಅವರು, ತಮ್ಮ ಮನೆತನವನ್ನು ಟೀಕಿಸಿದರೂ ರಾಷ್ಟ್ರ ಕಟ್ಟುವ ರಾಹುಲ್‌ಗಾಂಧಿ ಅವರ ಕೈ ಬಲಪಡಿಸಬೇಕಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಯುವ ಘಟಕದ ರಾಜ್ಯ ಉಸ್ತುವಾರಿ ನಿಗಮ್ ಭಂಡಾರಿ, ಜಿಲ್ಲಾ ಯುವ ಘಟಕದಲ್ಲಿ 186 ಪದಾಧಿಕಾರಿಗಳಿದ್ದರೂ ಕಾರ್ಯಕ್ರಮಕ್ಕೆ 40 ಜನರೂ ಹಾಜರಾಗಿಲ್ಲ. ಪಕ್ಷ ಸಂಘಟನೆಗಾಗಿ ಹಿಮಾಚಲ ಪ್ರದೇಶದಿಂದ ಇಲ್ಲಿಗೆ ಬಂದ ನನಗೆ ದುಃಖವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಯುವ ಘಟಕಗಳಲ್ಲಿ ಹೊಸ ಯುವಕರಿಗೆ ಅವಕಾಶ ನೀಡಬೇಕು. ಯುವ ಕಾರ್ಯಕಾರಿಣಿ ಹಿಗ್ಗಿಸಬೇಕು. ರಾಜ್ಯ ಮಟ್ಟದ ಪದಾಧಿಕಾರಿಗಳಿಗೆ ನೀಡುವ ಮಾದರಿಯ ತರಬೇತಿಯನ್ನು ಜಿಲ್ಲಾ, ಬ್ಲಾಕ್ ಹಂತದಲ್ಲೂ ನೀಡಬೇಕು ಎಂದ ಅವರು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಗೆಲ್ಲುವ ಮಾನದಂಡದಡಿ ಯುವಕರಿಗೆ ಟಿಕೆಟ್ ನೀಡಲಾಗುವುದು ಎಂದರು.

ರಾಜ್ಯ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಮಾತನಾಡಿ ನಿಮಗೆ ಸಿಕ್ಕ ಅಧಿಕಾರ ಶಾಶ್ವತವಲ್ಲ. ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಜನರ ಜತೆ ಪ್ರೀತಿ-ವಿಶ್ವಾಸದಿಂದ ನಡೆದಾಗ ಮಾತ್ರ ಜನನಾಯಕರಾಗಲು ಸಾಧ್ಯ ಎಂದರು.

ಯುವ ಮುಖಂಡ ಸಮರ್ಥ್ ಎಸ್.ಎಸ್. ಮಲ್ಲಿಕಾರ್ಜುನ್ ಮಾತನಾಡಿ ಯುವ ಘಟಕ ಕೇವಲ ಚುನಾವಣೆಗೆ ಸೀಮಿತವಾಗದೆ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಪರಿಹಾರಕ್ಕೆ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ ಮಾತನಾಡಿ ಪಕ್ಷವನ್ನು ಬೂತ್ ಮಟ್ಟ, ತಳ ಮಟ್ಟದಿಂದ ಸಂಘಟಿಸಬೇಕು. ಯುವ ಘಟಕದಲ್ಲಿ ಉತ್ತಮ ಕೆಲಸ ಮಾಡಿದರೆ ಉತ್ತಮ ನಾಯಕರಾಗುವ ಅವಕಾಶ ಸಿಗಲಿದೆ ಎಂದು ಹೇಳಿದರು.

ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ ಮಾತನಾಡಿ ಯುವ ಘಟಕದಲ್ಲಿ ಗುಂಪುಗಾರಿಕೆ, ಜಾತೀಯತೆ ಬಿಟ್ಟು ಪ್ರಾಮಾಣಿಕ ಕೆಲಸ ಮಾಡಿದರೆ ಸ್ಥಳೀಯ ಸಂಸ್ಥೆಗಳಲ್ಲಿ ಟಿಕೆಟ್ ಸಿಗಲಿದೆ ಎಂದರು.

ರಾಜ್ಯ ಕಾರ್ಯದರ್ಶಿಗಳಾದ ರಂಜಿತ್, ಅಬು ತಾಹೀರ್, ಪ್ರಧಾನ ಕಾರ್ಯದರ್ಶಿ ಬಾಹುಬಲಿ ಜೈನ್, ಜಿಲ್ಲಾಧ್ಯಕ್ಷ ವರುಣ್ ಬೆಣ್ಣೆಹಳ್ಳಿ, ಉಪಾಧ್ಯಕ್ಷ ಅಲಿ ರೆಹಮತ್, ಮುಖಂಡರಾದ ಮೈನುದ್ದೀನ್, ಎಲ್.ಎಂ.ಎಚ್. ಸಾಗರ್, ಮುಜಾಹಿದ್ ಪಾಷಾ, ಲಿಯಾಖತ್, ದರ್ಶನ್. ಶ್ರೀಧರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net