ವಿದ್ಯಾಕಾಶಿಯಲ್ಲಿಂದು ಪ್ರಿಯಾಂಕ ಅಬ್ಬರ  ಪ್ರಜಾಧ್ವನಿ-2 ಕಾಂಗ್ರೆಸ್ ಸಮಾವೇಶಕ್ಕೆ ದಾವಣಗೆರೆ ಸಜ್ಜು

pixlr_20240503234324911.jpg
Published on

ದಾವಣಗೆರೆ: ವಿದ್ಯಾ ಕಾಶಿಗೆ ಚೊಚ್ಚಲ ಬಾರಿಗೆ ಮೇ 4ರಂದು ಆಗಮಿಸುತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ಪ್ರಜಾಧ್ವನಿ-2 ಚುನಾವಣಾ ಸಮಾವೇಶದಲ್ಲಿ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಲಿದ್ದಾರೆ.
ಶಿವಮೊಗ್ಗದಿಂದ ಹೆಲಿಕಾಪ್ಟರ್ ಮೂಲಕ ದಾವಣಗೆರೆ ಎಂಬಿಎ ಕಾಲೇಜಿನ ಹೆಲಿಪ್ಯಾಡ್‌ಗೆ ಮಧ್ಯಾಹ್ನ 3 ಗಂಟೆಗೆ ಆಗಮಿಸಲಿರುವ ಪ್ರಿಯಾಂಕ, 3.10ರ ಸುಮಾರಿಗೆ ನಗರದ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾದ ಸಮಾವೇಶದಲ್ಲಿ ಪ್ರಧಾನ ಭಾಷಣ ಮಾಡಲಿದ್ದಾರೆ. ದಾವಣಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಪರ ಮತ ಯಾಚನೆ ಮಾಡಲಿದ್ದಾರೆ.
ಕರ್ನಾಟಕದಲ್ಲಿ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳ ಲಾಭ ಹಾಗೂ ಕಾಂಗ್ರೆಸ್ ಈಗಾಗಲೆ ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಕೆಗಳ ಬಗ್ಗೆ ಗಮನ ಸೆಳೆಯುವ ಮೂಲಕ ಪ್ರಿಯಾಂಕ ಮಹಿಳಾ ಮತ ಬ್ಯಾಂಕ್‌ನತ್ತ ಕೇಂದ್ರೀಕರಿಸಲಿದ್ದಾರೆ.  
ಸಜ್ಜಾದ ವೇದಿಕೆ:

ಪ್ರಜಾಧ್ವನಿ-2 ಸಮಾವೇಶಕ್ಕೆ ನಗರದ ಹೈಸ್ಕೂಲ್ ಮೈದಾನ ಸಜ್ಜಾಗಿದ್ದು, 650 ಅಡಿ ಉದ್ದ, 340 ಅಡಿ ಅಗಲ ವಿಸ್ತೀರ್ಣದ ಬೃಹತ್ ಪೆಂಡಾಲ್ ಅಳವಡಿಸಲಾಗಿದೆ. ಜರ್ಮನ್ ಹ್ಯಾಂಗರ್ ಮಾದರಿ ಹಾಗೂ ಇಕ್ಕೆಲಗಳಲ್ಲಿ ಸಾಮಾನ್ಯ ಶಾಮಿಯಾನ ಸಿದ್ಧಗೊಂಡಿದೆ.
36-60 ಅಡಿ ಸುತ್ತಳತೆಯ ಮುಖ್ಯ ವೇದಿಕೆಯಲ್ಲಿ 60 ಮಂದಿ ಗಣ್ಯರು ಕೂರಲು ಅವಕಾಶ ಮಾಡಲಾಗಿದೆ. ಕಾರ್ಯಕರ್ತರಿಗೆ ಸುಮಾರು 50 ಸಾವಿರ ಕುರ್ಚಿ ವ್ಯವಸ್ಥೆ ಮಾಡಲಾಗಿದೆ. ವೇದಿಕೆ ಹಿಂಬದಿಯಲ್ಲಿ ಕೇಸರಿ-ಬಿಳಿ-ಹಸಿರು ಬಣ್ಣದ ಬಟ್ಟೆಗಳಿಂದ ಆಕರ್ಷಕ ರೂಪ ನೀಡಲಾಗಿದೆ.
ಮೈದಾನದ ತುಂಬಾ ಕಾಂಗ್ರೆಸ್ ಬಾವುಟಗಳು ರಾರಾಜಿಸುತ್ತಿವೆ. ಮುಖ್ಯವೇದಿಕೆ ಹಿಂಬದಿಯಲ್ಲಿ ಒಂದು ಬ್ಯಾಕ್‌ಡ್ರಾಪ್ ಸ್ಕ್ರೀನ್ ವ್ಯವಸ್ಥೆಯಾಗಿದ್ದು ಮೈದಾನದುದ್ದಕ್ಕೂ 10 ಎಲ್‌ಇಡಿ ಪರದೆ ಅಳವಡಿಸಲಾಗಿದೆ.
ಕಾಂಗ್ರೆಸ್ ಸಮಾವೇಶಗಳಿಗೆ ದಾವಣಗೆರೆ ನೆಚ್ಚಿನ ತಾಣವಾಗಿದೆ. ಶನಿವಾರದ ಚುನಾವಣಾ ಪ್ರಚಾರ ಸಭೆಯಲ್ಲಿ ಸುಮಾರು 1 ಲಕ್ಷ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ. ಕಳೆದ ಹತ್ತು ವರ್ಷದಲ್ಲಿನ, ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಸಮಾವೇಶ ಬಿಚ್ಚಿಡುವ ಕೆಲಸ ಮಾಡಲಿದೆ ಎಂದು ಎಐಸಿಸಿ ಕಾರ್ಯದರ್ಶಿ ಮಯೂರ್ ಎಂ. ಜಯಕುಮಾರ್ ತಿಳಿಸಿದರು.
ಪ್ರಿಯಾಂಕ ಪ್ರಚಾರ, ಕೈಗೆ ಬಲ
ದಾವಣಗೆರೆಯಲ್ಲಿ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಲಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಕಾಂಗ್ರೆಸ್‌ಗೆ ಬಲ ತುಂಬಲಿದ್ದಾರೆ. ಅವರ ಆಗಮನ ಕಾಂಗ್ರೆಸ್ ಗೆಲುವಿಗೆ ಸಹಕಾರಿ ಆಗಲಿದೆ. ಗೆಲುವಿನ ಅಂತರ ಮತ್ತಷ್ಟು ಹೆಚ್ಚಾಗಲಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹಸಚಿವ ಡಾ.ಜಿ. ಪರಮೇಶ್ವರ್, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್, ಮಾಜಿ ಸಂಸದ ಕೆ.ಸಿ. ಕೊಂಡಯ್ಯ, ಮಾಜಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ, ನಂದಿಗಾವಿ ಶ್ರೀನಿವಾಸ್, ಅರಸೀಕೆರೆ ಕೊಟ್ರೇಶ್, ಎಸ್.ರಾಮಪ್ಪ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ಜಿಲ್ಲೆಯಲ್ಲಿ ಸುಮಾರು ಐದೂವರೆ ಲಕ್ಷ ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಾಗಿದ್ದು, ಎಲ್ಲರೂ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಬೆಂಲಿಸಬೇಕೆಂದರು. ಪಾಲಿಕೆ ಸದಸ್ಯ ಕೆ. ಚಮನ್‌ಸಾಬ್, ಮುಖಂಡರಾದ ಎಸ್.ಎಂ. ಜಯಪ್ರಕಾಶ್, ಹುಲಿಕಟ್ಟೆ ಚಂದ್ರಪ್ಪ, ಕೆ.ಎಂ. ಮಂಜುನಾಥ್, ಡಿ. ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net