ರಾಜ್ಯ ಸರ್ಕಾರಕ್ಕೆ ಒಂದು ವರ್ಷ   ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ

1000141146.jpg
Published on

ದಾವಣಗೆರೆ: ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಒಂದು ವರ್ಷ ಅಧಿಕಾರ ಪೂರೈಸಿದ್ದರ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ ಮಾತನಾಡಿ ಅಭದ್ರತೆಯ ಆತಂಕ ಇರಬಾರದೆಂದು ತೀರ್ಮಾನಿಸಿ ರಾಜ್ಯದ ಮತದಾರರು ಕಾಂಗ್ರೆಸ್‌ಗೆ ಬಹುಮತ ನೀಡಿ ಸರ್ಕಾರ ರಚನೆಗೆ ಕಾರಣರಾಗಿದ್ದಾರೆ. ಅವರ ಪ್ರಜ್ಞಾವಂತಿಕೆ ಪರಿಣಾಮ ನಮ್ಮ ಸರ್ಕಾರ ಒಂದು ವರ್ಷ ಯಶಸ್ವಿ ಆಡಳಿತ ನೀಡಿದೆ ಎಂದರು.
ಭ್ರಷ್ಟಾಚಾರ, ದುರಾಡಳಿತ ಮತ್ತು ಕೋಮುವಾದದಿಂದ ನಲುಗಿದ್ದ ರಾಜ್ಯವನ್ನು ಸರಿದಾರಿಗೆ ತರುವ ದೊಡ್ಡ ಜವಾಬ್ದಾರಿಯನ್ನು ಜನರು ನೀಡಿದ್ದಾರೆ. ಅದಕ್ಕೆ ಪೂರಕವಾಗಿ ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುತ್ತಿದೆ ಎಂದು ಹೇಳಿದರು.
ಸವಾಲುಗಳ ನಡುವೆಯೂ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಮಾತು ಉಳಿಸಿಕೊಂಡಿದ್ದೇವೆ. ಗ್ಯಾರಂಟಿಗಳ ಆಚೆಗೆ ಅಭಿವೃದ್ಧಿಯ ದ್ದಿಯ ರಥವನ್ನು ಕೊಂಡೊಯ್ದು ರಾಜ್ಯವನ್ನು ಸುಖಿ ಮತ್ತು ಸ್ವಾವಲಂಬಿಯಾಗಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಮಲ್ಲಿಕಾರ್ಜುನ್ ಮಾತನಾಡಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸ ಮಾಡಿದೆ ಮತ್ತು ಅಸಂಖ್ಯಾತ ಜನರ ಮೆಚ್ಚುಗೆ ಗಳಿಸಿದೆ ಎಂದು ತಿಳಿಸಿದರು.
ಕಾರ್ಯದರ್ಶಿ ಎ.ನಾಗರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ಶಿವಕುಮಾರ್, ಆರ್.ಎಚ್.ನಾಗಭೂಷಣ್ ಮಾತನಾಡಿದರು. ಗೃಹಲಕ್ಷ್ಮಿ ಯೋಜನೆಯಡಿ 1.20 ಕೋಟಿ ಮನೆ ಯಜಮಾನಿಯರ ಖಾತೆಗೆ ಹಣ ಹಾಕಲಾಗುತ್ತಿದೆ. ಗೃಹಜ್ಯೋತಿ ಯೋಜನೆಯಲ್ಲಿ 1.60 ಕೋಟಿ ಜನರಿಗೆ ಉಚಿತ ವಿದ್ಯುತ್, ಅನ್ನಭಾಗ್ಯದಡಿ 4.10 ಕೋಟಿ ಫಲಾನುಭವಿಗೆ 5754 ಕೋಟಿ ರೂ. ಹಣ ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದರು.
ಮಹಿಳಾ ಘಟಕದ ರಾಜೇಶ್ವರಿ, ಯುವ ಕಾಂಗ್ರೆಸ್ ಘಟಕದ ಎಲ್.ಎಚ್. ಸಾಗರ್, ರಾಘವೇಂದ್ರಗೌಡ, ಸುಭಾನ್‌ಸಾಬ್, ರಾಕೇಶ್, ಗೋಪಿ, ಸುರೇಶ್, ಹನುಮಂತರಾಜು, ರಾಘವೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net