ಕಾಂಗ್ರೆಸ್-ಬಿಜೆಪಿಗೆ ಗೆಲುವಿನ ಸಿಕ್ಸರ್! ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಉಭಯ ಪಕ್ಷಗಳದ್ದೇ ಜಿದ್ದು

IMG_20240401_234119.jpg
Published on

ಡಿ.ಎಂ.ಮಹೇಶ್, ದಾವಣಗೆರೆ
ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆ ಕಾವು ಬಿಸಿಲಿನ ಧಗೆಯಷ್ಟೇ ಏರುತ್ತಲಿದೆ. ಕಾಂಗ್ರೆಸ್-ಬಿಜೆಪಿ ಸಮಬಲದ ಹೋರಾಟಕ್ಕೆ ಈ ಕ್ಷೇತ್ರದಲ್ಲಿ ಉಭಯ ಪಕ್ಷಗಳೂ ತಲಾ 6 ಬಾರಿ ಗೆಲುವು ಹಂಚಿಕೊಂಡಿರುವುದೇ ಸಾಕ್ಷಿಯಾಗಿದೆ.
ಇಡೀ ಕ್ಷೇತ್ರದ ಶುರುವಾತಿನ ಚುನಾವಣೆ ವರ್ಷಗಳು ಕಾಂಗ್ರೆಸ್‌ಗೆ ಪರ್ವ ಕಾಲ! 1977ರಲ್ಲಿ ಚೊಚ್ಚಲ ಜಯ ಸಾಧಿಸಿದ್ದ ಕೈ, 1996ರ ಚುನಾವಣೆ ಹೊರತಾಗಿಸಿ 1998ರವರೆಗೆ ಹಿಡಿತ ಸಾಧಿಸಿತ್ತು.
ಕ್ಷೇತ್ರದ ಚುನಾವಣೆಗಳ ಆರಂಭಿಕ ವರ್ಷಗಳಲ್ಲಿ ಕಾಂಗ್ರೆಸ್‌ಗೆ ಭಾರತೀಯ ಲೋಕದಳ, ಜನತಾದಳ ಪಕ್ಷಗಳು ನೇರ ಪೈಪೋಟಿ ಒಡ್ಡಿದ್ದವು. ಮೊದಲಿನ ನಾಲ್ಕೂ ಎಲೆಕ್ಷನ್‌ಗಳಲ್ಲಿ ಬಿಜೆಪಿ ಸ್ಫರ್ಧಾ ಕಣದಲ್ಲೇ ಇರಲಿಲ್ಲ!
1991ರಿಂದ ಬಿಜೆಪಿ ಎಂಟ್ರಿಯಾದರೂ ಗೆಲುವು ಸಿಗಲಿಲ್ಲ. 1996ರಲ್ಲಿ ಗೆದ್ದಿದ್ದ ಕಮಲ, 1998ರಲ್ಲಿ ಕಾಂಗ್ರೆಸ್‌ಗೆ ಸ್ಥಾನ ಬಿಟ್ಟುಕೊಟ್ಟಿತು. 1999ರಿಂದ ಬಿಜೆಪಿ ಗೆಲುವಿನ ಅಭಿಯಾನ ಮುಂದುವರಿದಿದೆ.
ಇನ್ನು ಜನತಾದಳ (ಪರಿವಾರ) ಮೂರು ಚುನಾವಣೆಗಳಲ್ಲಿ ಪ್ರಬಲ ಪೈಪೋಟಿಯೊಂದಿಗೆ ಎರಡನೇ ಸ್ಥಾನ ಸಂಪಾದಿಸಿದ್ದು ಬಿಟ್ಟರೆ ಕಮ್ಯುನಿಸ್ಟ್, ಎಡಿಎಂಕೆ, ಕರ್ನಾಟಕ ಕಾಂಗ್ರೆಸ್ ಪಕ್ಷ, ಕರ್ನಾಟಕ ವಿಕಾಸ ಪಕ್ಷ, ಬಿಎಸ್ಪಿ, ಎಐಜೆಎಂಕೆ, ಪ್ರಜಾಕೀಯ, ಆಮ್‌ಆದ್ಮಿ, ಎಸ್‌ಯುಸಿಐ(ಸಿ) ಮೊದಲಾದ ಪಕ್ಷಗಳು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ನೇಪಥ್ಯಕ್ಕೆ ಸರಿದವು.

ಅತ್ಯಲ್ಪ ಅಂತರದ ಸೋಲು
ಮಾಯಕೊಂಡ ವಿಧಾನಸಭೆಯ ಎರಡು ಚುನಾವಣೆಗಳಲ್ಲಿ ಹಸ್ತದ ಎದುರು ಸೋಲುಂಡಿದ್ದ ಬಿಜೆಪಿಯ ಎಸ್.ಎ.ರವೀಂದ್ರನಾಥ್ 1991ರಲ್ಲಿ ಅದೃಷ್ಟ ಪರೀಕ್ಷೆಗಾಗಿ ಲೋಕಸಭಾ ಕಣಕ್ಕಿಳಿದರು. ಕಾಂಗ್ರೆಸ್‌ನ ಚನ್ನಯ್ಯ ಒಡೆಯರ್ ಎದುರು 455 ಮತಗಳ ಅಂತರದಿಂದ ಸೋತರು. ಕ್ಷೇತ್ರದ ಇತಿಹಾಸದಲ್ಲೇ ಇದು ಅತ್ಯಲ್ಪ ಅಂತರ ಸೋಲು.
2009ರ ಎಲೆಕ್ಷನ್‌ನಲ್ಲಿ ಬಿಜೆಪಿ ಹುರಿಯಾಳು  ವಿರುದ್ಧ ಕಾಂಗ್ರೆಸ್‌ನ ಎಸ್.ಎಸ್.ಮಲ್ಲಿಕಾರ್ಜುನ ಅವರು 2024 ಮತಗಳ ಅಂತರದಿಂದ ಪರಾಭವಗೊಂಡಿದ್ದರು. 2019ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ  ಕಾಂಗ್ರೆಸ್‌ನ ಅಭ್ಯರ್ಥಿ ಎಚ್.ಬಿ.ಮಂಜಪ್ಪ ಅವರನ್ನು 169702 ಮತಗಳ ಅಂತರದಿಂದ ಸೋಲುಣಿಸಿದ್ದರು. ಇದು ಅತಿ ಹೆಚ್ಚಿನ ಅಂತರದ ಗೆಲುವಾಗಿ ದಾಖಲಾಗಿದೆ.

ಪ್ರಬಲರ ಹಣಾಹಣಿ
ಕ್ಷೇತ್ರದ ಇದುವರೆಗಿನ ಮತಗಳ ಲೆಕ್ಕಾಚಾರದಲ್ಲಿ ಪ್ರಬಲರೂ ಸೋತಿದ್ದಾರೆ. ನಂತರ ಗೆದ್ದವರಿದ್ದಾರೆ. ಜಯಿಸಿ ಬೀಗಿದವರನ್ನೂ ನಂತರದಲ್ಲಿ ಮನೆಗೆ ಕಳುಹಿಸುವಲ್ಲಿಯೂ ಪಾತ್ರ ವಹಿಸಿದ್ದಾರೆ ಇಲ್ಲಿನ ಮತದಾರರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ 1971ರಲ್ಲಿ ಸ್ಪರ್ಧಿಸಿ ಗೆದ್ದಿದ್ದ ಕೊಂಡಜ್ಜಿ ಬಸಪ್ಪ ಅವರು, 1977ರಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲೂ ಚೊಚ್ಚಲ ಜಯ ಸಾಧಿಸಿ ಸಂಸದರಾದರು. ಅದುವರೆಗೆ ಕಾಂಗ್ರೆಸ್‌ನಲ್ಲಿದ್ದ ಕೊಂಡಜ್ಜಿ ಬಸಪ್ಪ 1980ರ ಚುನಾವಣೆಯಲ್ಲಿ ಜನತಾ ಪರಿವಾರದಿಂದ ಮತ್ತೆ ಕಣಕ್ಕಿಳಿದರೂ ಕಾಂಗ್ರೆಸ್‌ನ ಟಿ.ವಿ. ಚಂದ್ರಶೇಖರಪ್ಪ ಎದುರು ಗೆಲ್ಲಲಿಲ್ಲ.
ರಾಜ್ಯಸಭೆಯ ಮಾಜಿ ಸದಸ್ಯ ಕೆ.ಜಿ.ಮಹೇಶ್ವರಪ್ಪ 1977ರಲ್ಲಿ ಭಾರತೀಯ ಲೋಕದಳದಿಂದ ಹಾಗೂ 1984ರಲ್ಲಿ ಜನತಾ ಪರಿವಾರದಿಂದ ಸ್ಪರ್ಧಿಸಿದರೂ ಮತದಾರರು ಒಲವು ತೋರಲಿಲ್ಲ.
1980ರಲ್ಲಿ ಅರಸು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಡಾ. ಶಾಮನೂರು ಶಿವಶಂಕರಪ್ಪ 86167 ಮತ ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರೆ, ಇಂದಿರಾ ಕಾಂಗ್ರೆಸ್‌ನಿಂದ ಕಣದಲ್ಲಿದ್ದ ಟಿ.ವಿ.ಚಂದ್ರಶೇಖರಪ್ಪ 238506 ಮತ ಪಡೆದು ಲೋಕಸಭೆ ಪ್ರವೇಶಿಸಿದ್ದರು. 1999ರಲ್ಲಿ ಶಿವಶಂಕರಪ್ಪ ಅವರು ಬಿಜೆಪಿಯ ಜಿ.ಮಲ್ಲಿಕಾರ್ಜುನಪ್ಪ ಅವರನ್ನು 16269 ಮತಗಳ ಅಂತರದಿಂದ ಸೋಲಿಸಿ ಜಯ ಸಾಧಿಸಿದ್ದರು.
1991ರಲ್ಲಿ ಭಾಜಪ ಹುರಿಯಾಳಾಗಿದ್ದ ಎಸ್.ಎ.ರವೀಂದ್ರನಾಥ್  ಕಾಂಗ್ರೆಸ್‌ನ ಚನ್ನಯ್ಯ ಒಡೆಯರ್ ಎದುರು ಸೋತರು. ಮತಪೆಟ್ಟಿಗೆಯಲ್ಲಿದ್ದ ಮತಗಳ ಮರು ಎಣಿಕೆ ನಡೆದಿದ್ದು ದಾವಣಗೆರೆ ಕ್ಷೇತ್ರದಲ್ಲಿ ಅದೇ ಮೊದಲು ಮತ್ತು ಕೊನೆಯದು!
ವಕೀಲರು, ಕಾನೂನು ಕಾಲೇಜಿನ ಪ್ರಾಚಾರ್ಯರು, ವಾಗ್ಮಿಯೂ ಆಗಿದ್ದ ಪ್ರೊ.ಎಸ್.ಎಚ್.ಪಟೇಲರು ಜನತಾದಳದಿಂದ 1996ರಲ್ಲಿ ಸ್ಪರ್ಧಿಸಿ ಬಿಜೆಪಿ ಎದುರು ಸೋಲುಂಡರು. 2014ರ ಚುನಾವಣೆಯಲ್ಲಿ ಜಾತ್ಯತೀತ ಜನತಾದಳದ ಉಮೇದುವಾರರಾಗಿದ್ದ ಮಹಿಮ ಪಟೇಲ್ 46911 ಮತ ಗಳಿಸಿ ಮೂರನೇ ಸ್ಥಾನಕ್ಕಿಳಿದರು.  
ಕುರುಬ ಸಮಾಜದ ಗುರುಗಳೂ ಆಗಿದ್ದ ಚನ್ನಯ್ಯ ಒಡೆಯರ್ 1984ರಲ್ಲಿ ಶೇ.54.09, 1989ರಲ್ಲಿ ಶೇ.52.31, 1991ರಲ್ಲಿ ಶೇ.39.85ರಷ್ಟು ಮತಗಳನ್ನು ಪಡೆದು ಹ್ಯಾಟ್ರಿಕ್ ಗೆಲುವಿನೊಂದಿಗೆ ಇತಿಹಾಸ ಬರೆದರು. 1996ರ ಚುನಾವಣೆಯಲ್ಲಿ ಶೇ.22.08ರಷ್ಟು ಮತ ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು.
ಕಾಂಗ್ರೆಸ್‌ನ ಎಸ್.ಎಸ್.ಮಲ್ಲಿಕಾರ್ಜುನ್ 2004, 2009, 2014ರಲ್ಲಿ ಸೋಲು ಅನುಭವಿಸಿದರೆ, ಒಟ್ಟು ನಾಲ್ಕು ಅವಧಿಗೆ ಬಿಜೆಪಿ ಅಭ್ಯರ್ಥಿ ಮತ್ತು ಎರಡು ಅವಧಿಗೆ  ಜಿ.ಮಲ್ಲಿಕಾರ್ಜುನಪ್ಪ ಜಯ ಸಾಧಿಸಿದ್ದರು.
--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net