

ದಾವಣಗೆರೆ: ಬಿ.ವೈ.ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಯಶಸ್ವಿ ಒಂದು ವರ್ಷ ಪೂರೈಸಿದ್ದರ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಶೀಘ್ರವೇ 1 ಲಕ್ಷ ಜನರನ್ನು ಸೇರಿಸಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗುವುದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ. ದಾವಣಗೆರೆಯಲ್ಲಿ ಮಂಗಳವಾರ ಎಸ್ಎ ರವೀಂದ್ರನಾಥ್ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಅವರು ಮುಂದಿನ ಮುಖ್ಯಮಂತ್ರಿ ಆಗಬೇಕು. ಈ ಕಾರ್ಯಕ್ರಮದ ಮೂಲಕ ರಾಜ್ಯಕ್ಕೆ ದಿಕ್ಸೂಚಿ ಸಂದೇಶ ರವಾನಿಸಲಾಗುವುದು ಎಂದರು. ವಿಜಯೇಂದ್ರ ಅವರು ಮುಖ್ಯಮಂತ್ರಿ ಆಗುವುದನ್ನು ಕಣ್ತುಂಬಿಕೊಳ್ಳಲಿದ್ದಾರೆ. ಇದನ್ನು ಯಾವ ದುಷ್ಟ ಶಕ್ತಿಯೂ ತಡೆಯಲಾಗದು ಎಂದರು.
ವಿಜಯೇಂದ್ರ ಅವರು ನಾಡಿನ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ. ರಾಜ್ಯಾಧ್ಯಕ್ಷರಾಗಿ ಅವರು ವಾಲ್ಮೀಕಿ, ಮುಡಾ ಇತರೆ ಹಗರಣಗಳನ್ನು ಬಯಲಿಗೆ ತಂದಿದ್ದಾರೆ.
ಹೀಗಾಗಿ ರವೀಂದ್ರನಾಥ್ ಹಾಗೂ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಈ ಕಾರ್ಯಕ್ರಮ ಸಂಘಟಿಸಲು ಮಾಜಿ ಶಾಸಕರು ಹಾಗೂ ಮುಖಂಡರು ಚರ್ಚೆ ನಡೆಸಿದ್ದೇವೆ ಎಂದು ತಿಳಿಸಿದರು.
ಯಡಿಯೂರಪ್ಪ ಅವರಿಗೆ ಅನೇಕರು ತೊಂದರೆ ಕೊಟ್ಟರು. ಆದರೂ ಅವರು ಸಂಘ ಪರಿವಾರ ಮತ್ತು ಬಿಜೆಪಿಯೇ ನನ್ನ ಉಸಿರು ಎಂದರು. ಅವರನ್ನು ಟೀಕಿಸುವ ಕೆಲವರು ಮುಖವಾಡ ಹೊತ್ತು ಓಡಾಡುತ್ತಿದ್ದಾರೆ ಎಂದು ಟೀಕಿಸಿದರು.
ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಎಂದು ಯಡಿಯೂರಪ್ಪನವರು ಹೇಳಿಲ್ಲ ಇದು ನನ್ನ ತಾಯಿಯಾಣೆಗೂ ಸತ್ಯ ಎಂದರು.
ಕಾಂಗ್ರೆಸ್ ಸರ್ಕಾರ ಹಣ ಹೆಂಡ ತೋಳ್ಬಲ ಬಳಸಿ ಮೂರು ಉಪಚುನಾವಣೆಗಳಲ್ಲಿ ಗೆದ್ದಿದೆ. ಹಾಗೆಂದು ನಮ್ಮ ಪಕ್ಷದ ಕಾರ್ಯಕರ್ತರು ಅಂಜಬೇಕಿಲ್ಲ. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆ ಗಳಿಗೆ ನಾವು ಸಜ್ಜಾಗಬೇಕಿದೆ. ಪಕ್ಷವನ್ನು ಬಲಪಡಿಸಬೇಕಿದೆ. ಯಡಿಯೂರಪ್ಪರಂತ ಬಂಡೆ, ವಿಜಯೇಂದ್ರ ಅವರಂತ ಮರಿ ರಾಜಾಹುಲಿ ಇರುವಾಗ ನಾವು ಹೆದರ ಬೇಕಿಲ್ಲ ಎಂದರು.
ನಿಮ್ಮನ್ನು ಗೆಲ್ಲಿಸಿದ್ದು ದಾವಣಗೆರೆ ಜಿಲ್ಲೆ ಜನ. ಆದರೆ ಅವರನ್ನು ಬಿಟ್ಟು ಒಬ್ಬ ವ್ಯಕ್ತಿಯ ಹಿಂದೆ ಬೀದರ್ ನಲ್ಲಿ ಪ್ರವಾಸ ಮಾಡುತ್ತಿರಲ್ಲ. ಅಣ್ಣ ನಿಮ್ಮ ಶಕ್ತಿ ಸಾಮರ್ಥ್ಯವನ್ನು ಇಲ್ಲಿ ತೋರಿಸಿ ಎಂದು ಮಾಜಿ ಸಂಸದ ಸಿದ್ದೇಶ್ವರ ಅವರನ್ನು ಕುಟುಕಿದರು.