ಪಂಚಮಸಾಲಿ ಶ್ರೀ ವಿರುದ್ಧ ನಿಂದನೆ ಶಿವರಾಮು ವಿರುದ್ಧ ಠಾಣೆಗೆ ದೂರು

1000561580.jpg
Published on

ದಾವಣಗೆರೆ: ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮತ್ಯುಂಜಯ ಸ್ವಾಮೀಜಿ ವಿರುದ್ಧ ವೈಯಕ್ತಿಕ ನಿಂದನೆ ಮಾಡಿದ ಆರೋಪದಡಿ ಹಿಂದುಳಿದ ವರ್ಗದ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮು ವಿರುದ್ಧ ಇಲ್ಲಿನ ಕೆಟಿಜೆ ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಲಿಂಗಾಯತ ಪಂಚಮಸಾಲಿ ಮಹಾಸಭಾದ ಜಿಲ್ಲಾಧ್ಯಕ್ಷ ಆರ್. ವಿ. ಅಶೋಕ್ ಗೋಪನಾಳು ಹೇಳಿದರು.
2ಎ ಮೀಸಲಾತಿ ಸಂಬಂಧ ಪಂಚಮಸಾಲಿ ಸಮಾಜದವರು, ವಕೀಲರು ಡಿ. 10ರಂದು ಬೆಳಗಾವಿಯಲ್ಲಿ, ಶ್ರೀಗಳ ನೇತೃತ್ವದಲ್ಲಿ ಮಾಡುತ್ತಿದ್ದ ಹೋರಾಟ ಹತ್ತಿಕ್ಕಲು ದುರುದ್ದೇಶದಿಂದಲೇ ರಾಜ್ಯ ಸರ್ಕಾರ ಲಾಠಿಪ್ರಹಾರ ನಡೆಸಿದೆ. ಹೀಗಿದ್ದೂ ಶಿವರಾಮು ಅವರು ಸ್ವಾಮೀಜಿ ವಿರುದ್ಧ ಸಲ್ಲದ ಹೇಳಿಕೆ ನೀಡಿದ್ದಲ್ಲದೆ ಹಾಗೂ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸ್ವಾಮೀಜಿ ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದು ಸಿದ್ದರಾಮಯ್ಯನವರನ್ನು ಮುಗಿಸುವ ಸುಪಾರಿ ಪಡೆದಿದ್ದಾರೆ. ಸ್ವಾಮೀಜಿಯಾಗಲು ಅವರು ಅನರ್ಹರಾಗಿದ್ದು ಸನ್ಯಾಸತ್ವ ತ್ಯಜಿಸಲಿ. ಅವರ ಕೈಗಳನ್ನು ಕತ್ತರಿಸುತ್ತೇನೆ ಎಂಬ ಹೇಳಿಕೆ ನೀಡುವ ಮೂಲಕ ಶಿವರಾಮು ಅವರು ತೇಜೋವಧೆ ಮಾಡಿದ್ದಾರೆ. ಇದರಿಂದ ಪಂಚಮಸಾಲಿ ಸಮಾಜಕ್ಕೆ ಅಪಮಾನವಾಗಿದೆ ಎಂದು ಹೇಳಿದರು.
ಹೇಳಿಕೆ ಹಿನ್ನೆಲೆಯಲ್ಲಿ ಶಿವರಾಮು ಅವರು ಪಂಚಮಸಾಲಿ ಸಮಾಜದ ಶ್ರೀಗಳಲ್ಲಿ ಕ್ಷಮೆ ಯಾಚಿಸಬೇಕು ಇಲ್ಲದಿದ್ದಲ್ಲಿ ರಾಜ್ಯಾದ್ಯಂತ  ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಲಿಂಗಾಯತ ಪಂಚಮಸಾಲಿ ವಕೀಲರ ಘಟಕದ ಜಿಲ್ಲಾಧ್ಯಕ್ಷ ಎಚ್.ಎಸ್.ಯೋಗೇಶ್ ಅಭಿ ಕಾಟನ್ ಬಕ್ಕೇಶ್, ಗಿರೀಶ್ ಮರಡಿ, ವಿನಯ್ ಕುಮಾರ್, ಕೊಟ್ರೇಗೌಡ, ಶಂಕರ್, ವಿ. ರಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net