ಎಲ್ಲ ಬಡವರಿಗೂ ಬಿಪಿಎಲ್ ಕಾರ್ಡ್ ವಿತರಿಸಿ  ಕಮ್ಯುನಿಸ್ಟ್ ಪ್ರತಿಭಟನೆ

1000531712.jpg
Published on

ದಾವಣಗೆರೆ: ರಾಜ್ಯ ಸರ್ಕಾರ ಎಲ್ಲ ಬಡವರಿಗೂ ಬಿಪಿಎಲ್ ಕಾರ್ಡ್ ನೀಡಬೇಕೆಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಮಂಡಳಿ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಮಹಾತ್ಮ ಗಾಂಧಿ ವೃತ್ತದಲ್ಲಿ ಮಾತನಾಡಿದ ಮುಖಂಡರು, ಸರ್ಕಾರ ಪಡಿತರ ಕಾರ್ಡ್‌ಗಳನ್ನು ರದ್ದುಪಡಿಸಿದ್ದರಿಂದ ದುಡಿಯುವ ವರ್ಗದ ಜನರಿಗೆ ಮಾರಕವಾಗಿದೆ. ಸರ್ಕಾರ ಈ ಹಿಂದೆ ವಿಧಿಸಿದ್ದ ಕುಟುಂಬದ ಆದಾಯದ ಮಿತಿಯನ್ನು ಹೆಚ್ಚಿಸಬೇಕು. ದುಡಿಯುವ ವರ್ಗದ ಕುಟುಂಬಗಳಿಗೆ ನೀಡಿರುವ ಎಪಿಎಲ್ ಬದಲಾಗಿ ಬಿಪಿಎಲ್ ಕಾರ್ಡ್‌ಗಳನ್ನು ವಿತರಿಸಬೇಕು. ಬಿಪಿಎಲ್ ಚೀಟಿಗಳಿಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ವಿಸ್ತರಿಸಬೇಕು.
ಸಾಮಾನ್ಯ ಸೇವಾ ಕೇಂದ್ರಗಳಿಗೆ ನಿರಂತವಾಗಿ ಅರ್ಜಿ ಸಲ್ಲಿಸಲು ಕಾಲ, ವೇಳ ನಿಗದಿ ಮಾಡದೆ ನಿರಂತ ಅವಕಾಶ ಕಲ್ಪಿಸಬೇಕು. ಪಡಿತರ ಅಂಗಡಿಗಳಲ್ಲಿ ಪ್ರತಿ ಮಾಹೆ ಬಯೋಮೆಟ್ರಿಕ್ ಮತ್ತು ಒಟಿಪಿ ಹೇಳಲು ಸರ್ವರ್ ಸಮಸ್ಯೆಯಿಂದ ಸಾಮಾನ್ಯ ಜನಿಗೆ ಪಡಿತರ ಆಹಾರಧಾನ್ಯ ಪಡೆಯಲು ತೊಂದರೆಯಾಗಲಿದೆ. ಅದನ್ನು ಸರಿಪಡಿಸಬೇಕು.
ನ್ಯಾಯಬೆಲೆ ಅಂಗಡಿಗಳವರು ಆಹಾರಧಾನ್ಯದ ತೂಕದಲ್ಲಿ ವ್ಯತ್ಯಾಸ ಮಾಡುತ್ತಿದ್ದು ಇಂತಹ ಅಂಗಡಿ ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ವಹಿಸಬೇಕು. ಧಾನ್ಯ ವಿತರಣೆ ಸಂಬಂಧ ಇಡೀ ತಿಂಗಳು ಪಡಿತರ ಅಂಗಡಿಗಳನ್ನು ತೆರೆಯಲು ಕಟ್ಟುನಿಟ್ಟಿನ ಕ್ರಮ ವಹಿಸಬೇಕೆಂದು ಆಗ್ರಹಿಸಿದರು. ನಂತರ ದಾವಣಗೆರೆ ಉಪ ವಿಭಾಗ ಅಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, ಸಹ ಕಾರ್ಯದರ್ಶಿ ಎಚ್.ಜಿ. ಉಮೇಶ್, ಜಿಲ್ಲಾ ಖಜಾಂಚಿ ಮಹ್ಮದ್ ರಫಿಕ್, ಎನ್.ಎಚ್. ರಾಮಪ್ಪ, ಮಹ್ಮದ್ ಬಾಷಾ, ಎನ್. ಟಿ. ತಿಪ್ಪೇಶ್, ನಾಗಮ್ಮ, ಸರೋಜಾ, ಶಿವಕುಮಾರ್, ಐರಣಿ ಚಂದ್ರು, ಜಯಪ್ಪ, ಎ. ಮರಿಯಪ್ಪ, ಚಮನ್‌ಸಾಬ್, ಎಚ್.ಕೆ.ಆರ್. ಸುರೇಶ್ ಇತರರಿದ್ದರು.
---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net