ಚುನಾವಣೆಯಲ್ಲಿ ಸಿಪಿಐ ನಿರ್ಣಾಯಕ ಶಕ್ತಿ

Davangere, Communist Party, Sammelna, Avaragere Chandru.
Published on

ದಾವಣಗೆರೆ: ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಸೋಲಬಹುದು. ಆದರೆ ಅನ್ಯ ಪಕ್ಷಗಳ ಸೋಲು-ಗೆಲುವಿನ ನಿರ್ಣಾಯಕ ಶಕ್ತಿ ನಮ್ಮ ಪಕ್ಷಕ್ಕಿದೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಹೇಳಿದರು.

ನಗರದ ಆಶೋಕ ರಸ್ತೆಯ ಪಂಪಾಪತಿ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಭಾರತ ಕಮ್ಯುನಿಸ್ಟ್ ಪಕ್ಷದ 18ನೇ ತಾಲ್ಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಪಕ್ಷ ಅನೇಕ ಹೋರಾಟ ಮಾಡುತ್ತಿದ್ದರೂ ರಾಜಕೀಯವಾಗಿ ಹಿನ್ನಡೆ ಕಾರಣಕ್ಕೆ ಕಾರ್ಯಕರ್ತರ ಮನಸ್ಥಿತಿ ಕುಗ್ಗಿದೆ. ರಾಜಕಾರಣದಲ್ಲಿ ಕಾರ್ಯಕರ್ತರು ಹಿಂದಿರುವ ಕಾರಣಕ್ಕೆ ಕಮ್ಯುನಿಸ್ಟ್‌ಗೆ ರಾಜಕೀಯ ಶಕ್ತಿ ಕಡಿಮೆಯಾಗಿದೆ. ಆಳುವ ಪಕ್ಷಗಳು ನಮ್ಮ ಹೋರಾಟಗಳನ್ನು ನಿರ್ಲಕ್ಷಿಸುತ್ತಿವೆ ಎಂದು ಹೇಳಿದರು.

ದೇಶದೆಲ್ಲೆಡೆ ನಮ್ಮ ಪಕ್ಷಕ್ಕೆ ಮತ ಬ್ಯಾಂಕ್ ಇದೆ. ಚುನಾವಣೆಗಳಲ್ಲಿ ನಮ್ಮ ಅಭ್ಯರ್ಥಿಗಳ ಸ್ಪರ್ಧೆಯಿಂದಾಗಿ ಇತರೆ ಪಕ್ಷಗಳಿಗೆ ಒತ್ತಡವಾಗಲಿದೆ. ಹೀಗಾಗಿ ನಾವು ಪ್ರತಿ ಚುನಾವಣೆಗೂ ಸ್ಪರ್ಧಿಸಬೇಕು. ಇದರಿಂದ ರಾಜಕೀಯವಾಗಿ ಬೆಳೆಯಲು ಸಾಧ್ಯವಾಗಲಿದೆ ಎಂದರು.

ಹಾಸನದಲ್ಲಿ ಸೆ. 25,26ರಂದು ರಾಜ್ಯ ಮಟ್ಟದ 27ನೇ ಸಮ್ಮೇಳನ ನಡೆಯಲಿದೆ. ರ‌್ಯಾಲಿ ಮತ್ತು ಬಹಿರಂಗ ಸಭೆ ನಡೆಯಲಿದ್ದು, ರಾಷ್ಟ್ರೀಯ ಹಾಗೂ ರಾಜ್ಯದ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಜಿಲ್ಲಾ ಖಜಾಂಚಿ ಆನಂದರಾಜ್ ಮಾತನಾಡಿ, ಎಲ್ಲ ಸದಸ್ಯರನ್ನೂ ಸಮಾನವಾಗಿ ಕಾಣುವ ಪಕ್ಷವಿದ್ದರೆ ಅದುವೇ ಕಮ್ಯುನಿಸ್ಟ್. ಪಕ್ಷಕ್ಕೆ ಅಗೌರವ ಆಗದಂತೆ ನಡೆದುಕೊಳ್ಳಬೇಕಿದೆ. ಕಮಿಷನ್ ಆಧಾರದ ಸರ್ಕಾರಗಳೇ ಹೆಚ್ಚಿದ್ದು, ಮುಂದಿನ ದಿನದಲ್ಲಿ ಕಾರ್ಮಿಕ ಸಂಘಟನೆಯನ್ನು ಬಲಗೊಳಿಸುವ ಅಗತ್ಯವಿದೆ ಎಂದು ಹೇಳಿದರು.

ಜಿಲ್ಲಾ ಕಾರ್ಯದರ್ಶಿ ಎಚ್.ಜಿ.ಉಮೇಶ್ ಮಾತನಾಡಿ, ಶಾಸನಸಭೆಯ ಬಹುತೇಕ ಜನಪ್ರತಿನಿಧಿಗಳು ಹಗರಣಗಳಲ್ಲಿ ಭಾಗಿಯಾಗಿದವರೇ ಇದ್ದಾರೆ. ರೈತರು, ಶ್ರಮಿಕ ವರ್ಗದವರನ್ನು ಚುನಾವಣೆಗಳಲ್ಲಿ ಗೆಲ್ಲಿಸಿ ಈ ಜಾಗಗಳನ್ನು ತುಂಬಬೇಕಿದೆ ಎಂದು ಆಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net