

ದಾವಣಗೆರೆ: ಚಿತ್ರ ಕಲಾವಿದರಲ್ಲಿ ಒಗ್ಗಟ್ಟು ಕಡಿಮೆ. ನಮ್ಮ ಧ್ವನಿ ಜೋರಾಗಿದ್ದರೆ ಸರ್ಕಾರಗಳಿಂದ ಸಾಹಿತಿಗಳಿಗೆ ಸಿಗುವಷ್ಟೇ ಮನ್ನಣೆ ಸಿಗುತ್ತಿತ್ತು ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ.ಕುಮಾರ್ ಹೇಳಿದರು.
ಇಲ್ಲಿನ ದೃಶ್ಯಕಲಾ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾಲೇಜಿನ ವಜ್ರ ಮಹೋತ್ಸವದ ಸಮಾರೋಪ ಹಾಗೂ ಗುರುವಂದನಾ ಸಮಾರಂಭದಲ್ಲಿ ಮಾತನಾಡಿದರು.
ಸಾಹಿತಿಗಳು ಇತರರ ನೋವಿಗೆ ಸ್ಪಂದಿಸುತ್ತಾರೆ, ಜಾತಿ-ಮೌಢ್ಯದ ಬಗ್ಗೆ ಮಾತನಾಡುವ ಕಾರಣಕ್ಕೆ ಅವರು ಜನಪರವಾಗಿ ಕಾಣುತ್ತಾರೆ. ಲಲಿತಕಲೆಗೆ ಮನಸಿಗೆ ಮುದ ನೀಡುವ ಶಕ್ತಿ ಇರುವುದರಿಮದ ಜನರು ತಲೆಬಾಗುತ್ತಾರೆ. ಕಲೆಯನ್ನು ಜನಪರವಾಗಿಸಲು ಅದನ್ನು ಜನರತ್ತ ಕೊಂಡೊಯ್ದೆವು. ಚಿತ್ರ ಕಲಾವಿದರು ಜನಪರ ಕೆಲಸ ಮಾಡಿಲ್ಲ. ಮಾಡಿದ್ದರೆ ಜನರೂ ಗುರುತಿಸುತ್ತಿದ್ದರು ಎಂದು ತಿಳಿಸಿದರು.
ಧರ್ಮ, ದೇವರು ಚಿತ್ರ ಬರೆದ ಕಾರಣಕ್ಕೆ ರವಿವರ್ಮ ಬೆಳೆದರು. ಜನರಲ್ಲಿ ಕಲೆಯ ಅಭಿರುಚಿಯನ್ನು ಬೆಳೆಸುವ ಕಾರ್ಯವನ್ನು ಕಲಾವಿದರು ಮುಂದುವರಿಸಬೇಕು. ಪ್ರತಿಯೊಬ್ಬರೂ ಮಕ್ಕಳಿಗೆ ಚಿತ್ರಕಲೆ ಬಗ್ಗೆ ಮನೆಪಾಠ ಮಾಡಿ. ಇದರಿಂದ ಕಲೆ ಬೆಳೆಸಲು ಸಹಕಾರಿಯಾಗಲಿದೆ ಎಂದು ಕಿವಿಮಾತು ಹೇಳಿದರು.
ಕಲಾ ಕಾಲೇಜುಗಳು ಅಪ್‌ಡೇಟ್ ಆಗಬೇಕು. ಶಾಂತಿನಿಕೇತನ ಮತ್ತು ಬರೋಡಾ ಕಲಾ ಶಾಲೆಯ ಪ್ರಭಾವ ಹೆಚ್ಚು ಇದೆ. ಐದು ವರ್ಷಕ್ಕೆ ಹೊಸದೊಂದು ಪರ್ವವನ್ನು ಶುರು ಮಾಡುತ್ತಾರೆ. ಕರ್ನಾಟಕದ ಕಲಾ ಶಾಲೆಗಳು ಈ ಪಾತ್ರ ವಹಿಸಬೇಕು ಎಂದು ಆಶಿಸಿದರು.
ಹಿಂದೆಲ್ಲ ಸರ್ಕಾರ, ಸಾಹಿತ್ಯ ಸಮ್ಮೇಳನದ ನಿರ್ಣಯಗಳನ್ನು ಗಂಭೀರವಾಗಿ ಪರಿಗಣಿಸುತ್ತಿತ್ತು. ಅಧ್ಯಕ್ಷರ ಭಾಷಣ, ಸಲಹೆ ಅನುಷ್ಠಾನಕ್ಕೆ ಬರುತ್ತಿತ್ತು. ಇತ್ತೀಚಿಗೆ ಇದಕ್ಕೆ ಮಾನ್ಯತೆ ಕಡಿಮೆಯಾಗಿದ್ದು, ಇಂತಹ ಸಮ್ಮೇಳನ ಚಿತ್ರಕಲಾವಿದರಿಗೆ ಅನಗತ್ಯ ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಜೈರಾಜ್ ಚಿಕ್ಕಪಾಟೀಲ್ ಮಾತನಾಡಿ ಕಾಲಕ್ಕೆ ತಕ್ಕಂತೆ ಬದಲಾಗದ್ದರಿಂದ, ಎರಡನೇ ತಲೆಮಾರು ಬೆಳೆಸದ ಪರಿಣಾಮ ಖಾಸಗಿ ಕಲಾ ಕಾಲೇಜುಗಳು ಬಾಗಿಲು ಹಾಕಿವೆ. ಸರ್ಕಾರಿ ವ್ಯವಸ್ಥೆಗೆ ಈ ಆತಂಕವಿಲ್ಲ. ರಾಜ್ಯದ ಎಲ್ಲ ಕಲಾಶಾಲೆಗಳಿಗೆ ದಾವಣಗೆರೆಯ ದೃಶ್ಯಕಲಾ ಕಾಲೇಜು ಮಾದರಿಯಾಗಬೇಕು ಎಂದು ಹೇಳಿದರು.
ಸಾರ್ವಜನಿಕ ಸ್ಥಳಗಳಲ್ಲಿ ವೆಂಕಟಪ್ಪ ಪ್ರಶಸ್ತಿ ಪುರಸ್ಕೃತ ಕಲಾವಿದರ ಚಿತ್ರಗಳು ಜನರ ಕೈಗೆ ಸಿಗುವಂತಾದರೆ ಚಿತ್ರಕಲೆಗೆ ಪ್ರೇರಣೆ ಸಿಗಲಿದೆ. ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ಚಿತ್ರಕಲಾ ಸಮ್ಮೇಳನದ ಅಗತ್ಯವಿದೆ. ಚಿತ್ರಕಲಾ ಶಾಲೆಗೂ ಅಕಾಡೆಮಿ ಪುರಸ್ಕಾರ ಸಿಗಬೇಕು. ಲಲಿತಕಲಾ ಅಕಾಡೆಮಿ ಈ ಬಗ್ಗೆ ಗಂಭೀರ ಆಲೋಚನೆ ಮಾಡಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಚಿ.ಸು.ಕೃಷ್ಣಶೆಟ್ಟಿ, ಉಪಾಧ್ಯಕ್ಷ ಗಣಪತಿ ಎಸ್. ಹೆಗಡೆ, ಪ್ರಧಾನ ಕಾರ್ಯದರ್ಶಿ ಸುರೇಶ್ ಎಸ್. ವಾಘ್ಮೋರೆ ಇದ್ದರು.
ಬೆಳಗ್ಗೆ ಆಯೋಜಿಸಿದ್ದ ಕಲಾ ಪ್ರಾತ್ಯಕ್ಷಿಕೆ ನೂರಾರು ಕಣ್ಣುಗಳನ್ನು ಸೆಳೆಯಿತು. ಮಣ್ಣಿನ ಶಿಲ್ಪಕಲೆ, ವ್ಯಂಗ್ಯಚಿತ್ರ ಹಾಗೂ ಕ್ಯಾಲಿಗ್ರಫಿ ಕಲೆಗಳನ್ನು ಹಿರಿಯ ವಿದ್ಯಾರ್ಥಿಗಳು ಪ್ರದರ್ಶಿಸಿದರು. 60 ವರ್ಷದ ಸವಿನೆನಪಿಗಾಗಿ ಕಾಲೇಜು ಆವರಣದಲ್ಲಿ 60 ಸಸಿಗಳನ್ನು ನೆಡಲಾಯಿತು. ಅವುಗಳ ಮುಂದೆ ಇರಿಸಿದ್ದ ಆಯಾ ವರ್ಷದ ಫಲಕಗಳನ್ನು ಆಧರಿಸಿ ನಿಂತು ಹಳೆಯ ವಿದ್ಯಾರ್ಥಿಗಳು ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.