

ದಾವಣಗೆರೆ : ನಗರದ ಎಸ್‌ಬಿಸಿ ಪ್ರಥಮದರ್ಜೆ ಮಹಿಳಾ ಕಾಲೇಜು ಆವರಣದಲ್ಲಿ ಬುಧವಾರ ಹಬ್ಬದ ವಾತಾವರಣವಿತ್ತು. ಇಡೀ ಕ್ಯಾಂಪಸ್ ವರ್ಣಮಯವಾಗಿತ್ತು. ವಿದ್ಯಾರ್ಥಿಗಳು, ಅಧ್ಯಾಪಕರು, ಬೋಧಕೇತರ ಸಿಬ್ಬಂದಿ ಸೇರಿದಂತೆ ಎಲ್ಲರೂ ಬಗೆ ಬಗೆಯ ಉಡುಪುಗಳನ್ನು ತೊಟ್ಟು ಸಂಭ್ರಮಿಸಿದರು.
ಎಸ್‌ಬಿಸಿ ಪ್ರಥಮದರ್ಜೆ ಮಹಿಳಾ ಕಾಲೇಜು, ಅಥಣಿ ಸ್ನಾತಕೋತ್ತರ ಕೇಂದ್ರ ಮತ್ತು ಅಥಣಿ ಪಿಯು ಕಾಲೇಜು ಸಂಯುಕ್ತ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪಾರಂಪರಿಕ ದಿನಾಚರಣೆಯಲ್ಲಿ ಕಂಡುಬಂದ ದೃಶ್ಯಗಳಿವು. ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ದೇಸಿ ಉಡುಗೆ ಧರಿಸಿ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸಿದರು. ಕೆಲವು ವಿದ್ಯಾರ್ಥಿನಿಯರು ಇಳಕಲ್ ಸೀರೆಯಲ್ಲಿ ಮಿಂಚಿದರು. ರಾಜಸ್ಥಾನದ ಉಡುಪುಗಳು ಗಮನ ಸೆಳೆದವು. ಮತ್ತೆ ಕೆಲವರು ಮಹಾರಾಷ್ಟ್ರ ರಾಜ್ಯದ ಸಂಸ್ಕೃತಿಯನ್ನು ಬಿಂಬಿಸುವ ಉಡುಪುಗಳನ್ನು ಹಾಕಿಕೊಂಡು ಬಂದಿದ್ದರು. ಕುರ್ತಾ, ಪೈಜಾಮ, ಪೇಟಾಗಳೂ ಕಂಡುಬಂದವು.
ಇಷ್ಟೆಲ್ಲ ಜೋಶ್‌ನಲ್ಲಿದ್ದ ವಿದ್ಯಾರ್ಥಿಗಳು ಸೆಲ್ಫಿ ತೆಗೆದುಕೊಂಡು ಆ ಉಡುಪುಗಳಲ್ಲಿ ಹೇಗೆ ಕಾಣಿಸುತ್ತೇವೆ ಎಂಬುದನ್ನು ನೋಡಿ ಸಂತಸಪಟ್ಟರು. ಕಾಲೇಜು ಆವರಣದ ತುಂಬ ಗುಂಪು ಗುಂಪಾಗಿ ಓಡಾಡಿದರು. ಡಿಜೆನಲ್ಲಿ ತೇಲಿಬಂದ ಹಾಡುಗಳಿಗೆ ವಿದ್ಯಾರ್ಥಿಗಳ ಜತೆಗೆ ಅಧ್ಯಾಪಕರೂ ಹೆಜ್ಜೆ ಹಾಕಿದರು. ನಂತರ ರ‌್ಯಾಂಪ್ ವಾಕ್ ಕೂಡಾ ನಡೆಯಿತು.
ಎಸ್‌ಬಿಸಿ ಪ್ರಥಮದರ್ಜೆ ಮಹಿಳಾ ಕಾಲೇಜು ಅಧ್ಯಕ್ಷ ಬಿ.ಸಿ. ಉಮಾಪತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಾರಂಪರಿಕ ದಿನಾಚರಣೆಯ ಮೂಲಕ ನಮ್ಮ ದೇಸಿ ಸಂಸ್ಕೃತಿಯನ್ನು ಪ್ರತಿಬಿಂಬಿಸಿದ್ದೀರಿ. ಇದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು.
ವಿನಾಯಕ ಎಜುಕೇಶನ್ ಟ್ರಸ್ಟ್‌ನ ಸದಸ್ಯ ಅಥಣಿ ಪ್ರಶಾಂತ್, ಎಸ್‌ಬಿಸಿ ಕಾಲೇಜು ಪ್ರಾಂಶುಪಾಲ ಡಾ. ಕೆ. ಷಣ್ಮುಖ, ಬಿ.ಎಸ್. ಚನ್ನಬಸಪ್ಪ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಬೇತೂರುಮಠ್, ಅಥಣಿ ಪಿಯು ಕಾಲೇಜಿನ ಪ್ರಾಂಶುಪಾಲ ಕೆ. ರಾಜಶೇಖರ್ ಉಪಸ್ಥಿತರಿದ್ದರು.