ದಾವಣಗೆರೆಯಲ್ಲಿ ಕಣ್ಮನ ಸೆಳೆದ ಕೊಲಾಜ್: ದೃಶ್ಯಕಲಾ ಕಾಲೇಜು ವಿದ್ಯಾರ್ಥಿಗಳ ಕೈಚಳಕ

dvg chitrostava 25-1
Published on

ದಾವಣಗೆರೆ: ಗೋಡೆ ಮೇಲೆ ತೂಗು ಹಾಕಿದ್ದ ಕಲಾಕೃತಿಗಳ ಕೊಲಾಜ್ ಅಲ್ಲಿತ್ತು. ಒಂದೊಂದೂ ಕಲೆ ಹಿಂದೆ ಭಾವನೆಗಳ ಬಣ್ಣವಿತ್ತು. ಕೆಲವು ಚಿತ್ರಗಳು ಸಮಕಾಲೀನ ಸಮಸ್ಯೆಗಳ ಪ್ರತಿರೂಪದಂತಿದ್ದವು.

ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಚಿತ್ರೋತ್ಸವ-2022 ಅಂಗವಾಗಿ ಕಲಾ ಗ್ಯಾಲರಿಯೊಳಗೆ ಸಾದರಗೊಂಡ ವಾರ್ಷಿಕ ಕಲಾಪ್ರದರ್ಶನದ ಪರಿಚಯವಿದು.

ಕಾಲೇಜಿನ ನಾಲ್ಕು ವಿಭಾಗಗಳ ವಿದ್ಯಾರ್ಥಿಗಳು 120ಕ್ಕೂ ಹೆಚ್ಚು ಕಲಾಕೃತಿಗಳನ್ನು ಪ್ರದರ್ಶಿಸಿದ್ದರು. ಕೋವಿಡ್ ನಿರೋಧಕ ಚುಚ್ಚುಮದ್ದು ಕೆಲವು ಚಿತ್ರಗಳಲ್ಲಿ ಪ್ರತಿಧ್ವನಿಸಿತು. ಮಹಿಳಾ ದೌರ್ಜನ್ಯ, ಪರಿಸರ ನಾಶ, ಬಂದಿಯಾದ ನಾರಿ ಮೊದಲಾದ ಸಮಸ್ಯೆಗಳು ಅನಾವರಣಗೊಂಡವು. ಜಾನಪದ ಕಲೆ-ಸಂಸ್ಕೃತಿಯ ಸೊಗಡು, ಪರಿಸರ, ಆಧುನಿಕ ಮಹಿಳೆ, ಪದಕ ಚಿತ್ತದ ಕ್ರೀಡಾಪಟು ಮೊದಲಾದ ಚಿತ್ರಗಳಿದ್ದವು.

ತಾಯಿ ಗರ್ಭದಲ್ಲಿ ಸುರಕ್ಷಿತ ಭ್ರೂಣ, ಪಕ್ಷಿಗಳಿಗೆ ಸಂಚಕಾರವಾದ ಮೊಬೈಲ್ ಸ್ಥಾವರ, ಸ್ಥೂಲ ಕಾಯದ ಸಮಸ್ಯೆ, ಕೋವಿಡ್‌ನಿಂದ ದೂರವಿರಲು ಮಾಸ್ಕ್‌ನ ಟಾಸ್ಕ್, ಮತ್ಸೃಕನ್ಯೆ ಮೊದಲಾದ ಟೆರ‌್ರಾಕೋಟ ಕಲಾಕೃತಿಗಳು ಕಣ್ಸೆಳೆದವು. ಶಿಲ್ಪಕಲಾ ವಿಭಾಗದ ಎಫ್.ಜಿ. ರಾಹುಲ್, ಮಾನಸಾ ಇತರರು ಇದನ್ನು ನಿರ್ಮಿಸಿದ್ದರು. ನಟ ಪುನೀತ್ ರಾಜಕುಮಾರ್ ಹಾಗೂ ಕಲಾವಿದ ಕೃಷ್ಣಶೆಟ್ಟಿ ಅವರಿಗೆ ವಿನಯ್ ತಮ್ಮ ಕೈಚಳಕದಲ್ಲಿ ಫೈಬರ್ ರೂಪ ನೀಡಿದ್ದರು.

ವಾಟರ್ ಪೇಂಟ್, ಆಯಿಲ್ ಪೇಂಟ್, ಸಮಕಾಲೀನ ಕಲೆ, ಚುಕ್ಕಿ ಚಿತ್ರ, ಪೋರ್ಟರೈಟ್, ಅಕ್ರಾಲಿಕ್, ಡಿಜಿಟಲ್, 2ಡಿ ಆ್ಯನಿಮೇಷನ್, 2ಡಿ ಆ್ಯನಿಮೇಷನ್ ವೆಕ್ಟರ್ ಆರ್ಟ್ಸ್, ಮಿಕ್ಸ್ ಮೀಡಿಯಾ, ಕ್ಯಾಲಿಗ್ರಾಫ್, ಭಿತ್ತಿಪತ್ರಗಳ ವಿನ್ಯಾಸ, ಪತ್ರಿಕಾ ಜಾಹೀರಾತಿನ ಮಾದರಿ, ಸಾಂಪ್ರದಾಯಿಕ ಕಲೆ, ಮಿನಿಯೇಚರ್, ಪೆನ್ಸಿಲ್ ವರ್ಕ್ಸ್ ಮೊದಲಾದ ಶೈಲಿಯ ಚಿತ್ರಗಳು ಗಮನಸೆಳೆದವು.

ಚಿತ್ರೋತ್ಸವಕ್ಕೆ ದಾವಣಗೆರೆ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ಡಿ.ಕುಂಬಾರ್ ಚಾಲನೆ ನೀಡಿದರು. ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ನಾಡೋಜ ಡಾ.ವಿ.ಟಿ.ಕಾಳೆ, ದಾವಿವಿ ಕಲಾ ನಿಕಾಯದ ಡೀನ್ ಡಾ.ವೆಂಕಟರಾವ್ ಎಂ.ಪಲಾಟೆ, ಕಾಲೇಜಿನ ಸಂಯೋಜನಾಧಿಕಾರಿ ಡಾ. ಸತೀಶಕುಮಾರ್ ಪಿ. ವಲ್ಲೆಪುರಿ, ದಾವಿವಿ ಫ್ಯಾಶನ್ ಡಿಸೈನ್ ವಿಭಾಗದ ಸಂಯೋಜನಾಧಿಕಾರಿ ಡಾ.ಜಯರಾಜ್, ಎಂ.ಚಿಕ್ಕ ಪಾಟೀಲ್, ಡಿ.ಹೇಮಲತಾ ಇತರರು ಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net