

ದಾವಣಗೆರೆ: ಚುನಾವಣೆ ಎಂದರೆ ಬೆರಳೆಣಿಕೆಯ ಜನರಿಗೆ ಅದುವೇ ಜೀವನ. ಮತ್ತೆ ಕೆಲವರಿಗೆ ಜಾಗೃತಿ ಮೂಡಿಸುವ ವೇದಿಕೆಯೂ ಹೌದು. ಪಕ್ಷೇತರ ಅಭ್ಯರ್ಥಿಯೊಬ್ಬ ಕರೆನ್ಸಿ ನೋಟಿನ ಬದಲಾಗಿ 10 ರೂ. ಮುಖಬೆಲೆಯ ನಾಣ್ಯಗಳ ಗಂಟನ್ನು ಠೇವಣಿ ಮೊತ್ತವಾಗಿ ಸಲ್ಲಿಸಿದ ವಿಶೇಷ ಸಂದರ್ಭಕ್ಕೆ ದಾವಣಗೆರೆ ಚುನಾವಣಾಧಿಕಾರಿಗಳ ಕಚೇರಿ ಸಾಕ್ಷಿಯಾಯಿತು!
ಉದ್ಯಮಿ ಎಚ್.ಎಸ್. ದೊಡ್ಡೇಶ ಶುಕ್ರವಾರ, ಜನಹಿತ ಪಕ್ಷದ ಹೆಸರಲ್ಲಿ ನಾಮಪತ್ರ ಸಲ್ಲಿಸಲು 10 ರೂ. ನಾಣ್ಯಗಳಿದ್ದ ಭಾರದ ಚೀಲದೊಂದಿಗೆ ಬಂದಾಗ ಚುನಾವಣಾ ಸಿಬ್ಬಂದಿ ಅಚ್ಚರಿ ವ್ಯಕ್ತಪಡಿಸಿದರು.
ಜಿಲ್ಲಾ ಚುನಾವಣಾಧಿಕಾರಿಯಾಗಿದ್ದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ‘ನೋಟನ್ನೇ ತರಬಹುದಿತ್ತಲ್ಲ, ನಾಣ್ಯವನ್ನೇಕೆ ತಂದಿರಿ?’ ಎಂದು ಪ್ರಶ್ನಿಸಿದರು. 10 ರೂ. ನಾಣ್ಯ ಚಲಾವಣೆಯಲ್ಲಿದ್ದರೂ ಗ್ರಾಮಾಂತರ ಪ್ರದೇಶಗಳಲ್ಲಿ ಹಾಗೂ ವ್ಯಾಪಾರಸ್ಥರು ಕೂಡ ಸ್ವೀಕರಿಸುತ್ತಿಲ್ಲ ಸರ್, ಅದರ ಬಗ್ಗೆ ಜಾಗೃತಿಯೂ ಆಗಲಿದೆ. ಅಲ್ಲದೆ ನಮ್ಮದು ಬಡವರ ಪಕ್ಷ, ಅದಕ್ಕೇ ನೋಟು ಬದಲಿಗೆ ನಾಣ್ಯ ತಂದಿದ್ದೇನೆ’ ಎಂದು ದೊಡ್ಡೇಶ ಹೇಳಿದಾಗ ಡಿಸಿ ‘ಹಾಗಿದ್ದರೆ ಗುಡ್’ ಎಂದು ಸಮ್ಮತಿಸಿದರು.
ನಾಲ್ವರು ಚುನಾವಣಾ ಸಿಬ್ಬಂದಿ, ಟೇಬಲ್ ಮೇಲೆ ಚೀಲ ಸುರುವಿಕೊಂಡು 25 ಸಾವಿರ ರೂ. ಮೊತ್ತದ ನಾಣ್ಯಗಳನ್ನು ಸುಮಾರು ಒಂದೂವರೆ ತಾಸುಗಳ ಕಾಲ ಎಣಿಸಿದರು! ನಂತರ ಉಮೇದುವಾರಿಕೆ ಸಲ್ಲಿಕೆಯಾಯಿತು ಎಂದು ದೊಡ್ಡೇಶ ಪತ್ರಿಕೆಗೆ ವಿವರಿಸಿದರು.
--