

ದಾವಣಗೆರೆ: ಭಾರತದಲ್ಲಿ ಹೆಣ್ಣು ಪೂಜ್ಯನೀಯ ಎಂಬುದು ನೇಪಥ್ಯ ಮಾತ್ರ. ಹೆಣ್ಣುಮಕ್ಕಳು ಆರ್ಥಿಕ, ಸಾಮಾಜಿಕವಾಗಿ ಸ್ವಾವಲಂಬಿ ಆಗುವ ರೀತಿಯಲ್ಲಿ ಮತ್ತು ಜಗತ್ತಿನ ವೇಗಕ್ಕೆ ತಕ್ಕಂತೆ ಬದುಕು ರೂಪಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ, ಪಠ್ಯಪೂರಕ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿ, ಭಾರತೀಯ ಸಾಮಾಜಿಕ, ಆರ್ಥಿಕ ವ್ಯವಸ್ಥೆ ನಾವು ಅರಿತಂತೆ ಇಲ್ಲ. ಪಾಶ್ಚಾತ್ಯ ರಾಷ್ಟ್ರಗಳಲ್ಲಿರುವ ಉದಾತ್ತ ಚಿಂತನೆ, ವಿಶಾಲ ಮನೋಭಾವದ ಕೊರತೆ ಇಲ್ಲಿದೆ ಎಂದರು.
ವಿದ್ಯಾರ್ಥಿ ಬದುಕು ಜೀವನದ ಪ್ರಮುಖ ಕಾಲಘಟ್ಟ. ಈ ಹಂತದಲ್ಲಿ ನಮ್ಮ ವ್ಯಕ್ತಿತ್ವ ರೂಪಿಸಿಕೊಂಡು ಬದುಕು ಕಟ್ಟಿಕೊಳ್ಳಲು ಸಾಧ್ಯ ಇದೆ. ರಂಗಭೂಮಿ, ಸಿನಿಮಾ ಸೇರಿ ವ್ಯಕ್ತಿತ್ವ ಬೆಳವಣಿಗೆಗೆ ಸಹಕಾರಿಯಾದ ಕ್ಷೇತ್ರದಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದರು.
ಹುಬ್ಬಳ್ಳಿಯ ಕ್ಯಾನ್ಸರ್ ಸಮಾಲೋಚಕಿ, ಪತ್ರಕರ್ತೆ ಕೃಷ್ಣಿ ಶಿರೂರ ಮಾತನಾಡಿ ಇಂದಿನ ತಲೆಮಾರಿನ ಮಕ್ಕಳಲ್ಲಿ ಕಷ್ಟದ ಅನುಭವ ಕಡಿಮೆ. ಇದರಿಂದ ಸಂಕಷ್ಟ ಎದುರಿಸುವ ಮನಸ್ಥಿತಿ, ಸಾಮರ್ಥ್ಯ ಕಡಿಮೆ ಆಗುತ್ತಿದೆ. ಇದಕ್ಕೆ ಪಾಲಕರ ಮನೋಭಾವ ಕಾರಣವಾಗಿದೆ ಎಂದು ಹೇಳಿದರು.
ಯೋಜಿತ ರೀತಿಯಲ್ಲಿ ಬದುಕು ನಡೆಯುದಿಲ್ಲ. ಎದುರಾಗುವ ಅಡ್ಡಿ, ಆತಂಕ ಮೆಟ್ಟಿ ಯಶಸ್ಸು ಪಡೆದಾಗ ಸಾಧನೆ ಸಾಧ್ಯ ಆಗುತ್ತದೆ. ಸಂದರ್ಭ ಎದುರಿಸುವ ಮನೋಭಾವ, ಗಟ್ಟಿತನ ಬೆಳೆಯಬೇಕು. ಕಷ್ಟ ಬಂದಾಗಲೇ ಬದುಕು ಇನ್ನಷ್ಟು ಗಟ್ಟಿ ಆಗುತ್ತದೆ. ಧೈರ್ಯಗೆಡದಿದ್ದಾಗ ಮತ್ತಷ್ಟು ಸಕಾರಾತ್ಮಕವಾಗಿ ರೂಪುಗೊಳ್ಳುತ್ತದೆ ಎಂದರು.
ಆಹಾರ, ಗಾಳಿ ಸೇರಿ ಎಲ್ಲವೂ ಕಲುಷಿತ ಆಗಿದೆ. ಇದರ ಪರಿಣಾಮ ದೇಹದ ಅನಾರೋಗ್ಯಕ್ಕೆ ಕಾರಣ ಆಗುತ್ತವೆ. ಮನೆಯ ಆಹಾರ ಸೇವಿಸುವುದು ಉತ್ತಮ. ಯೋಗ, ಪ್ರಾಣಾಯಾಮಕ್ಕೆ ಹೆಚ್ಚು ಸಮಯ ಮೀಸಲಿಡಿ ಎಂದು ಹೇಳಿದರು.
ಸಾಂಸ್ಕೃತಿಕ ಸಮಿತಿ ಸಂಚಾಲಕ ತೊಪ್ಪಲ ಕೆ.ಮಲ್ಲಿಕಾರ್ಜುನಗೌಡ ಮಾತನಾಡಿ, ಸಾಮಾಜಿಕ ಜಾಲತಾಣಕ್ಕೆ ಅಂಟಿಕೊಂಡ ಬಳಿಕ ವಿದ್ಯಾರ್ಥಿಗಳನ್ನು ಸೃಜನಶೀಲ ಬರವಣಿಗೆ ಕಡೆಗೆ ಕರೆತರುವುದು ತುಂಬಾ ಕಷ್ಟ. ಇಂತಹ ಪ್ರಯತ್ನ ಮಹಿಳಾ ಕಾಲೇಜಿನಲ್ಲಿ ನಡೆದಿದೆ. ವಿದ್ಯಾರ್ಥಿನಿಯರ ಬಡ ಕುಟುಂಬದ ನೋವಿನ ಕಥೆ, ಬಾಲ್ಯದ ನೆನಪು, ನೋವನ್ನು ‘ಹೆಣ್ದನಿ’ ಕೈಬರಹದ ಪತ್ರಿಕೆಯ ರೂಪದಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸಿದರು.
ಪ್ರಾಚಾರ್ಯ ಎನ್. ಮಂಜಣ್ಣ, ನಿವೃತ್ತ ಪ್ರಾಚಾರ್ಯ ಪ್ರೊ.ಕೆ.ಎಸ್. ಈಶ್ವರಪ್ಪ, ಐಕ್ಯುಎಸಿ ಸಂಚಾಲಕ ಭೀಮಪ್ಪ, ಎಚ್.ಈ ಸುನೀತಾ, ಚನ್ನಪ್ಪ, ಕರಿಬಸಪ್ಪ, ಟಿ. ಶೇಷಪ್ಪ ಇತರರಿದ್ದರು.