

ದಾವಣಗೆರೆ: ಮುಡಾ ನಿವೇಶನ ಹಂಚಿಕೆ ಹಾಗೂ ವಾಲ್ಮೀಕಿ ನಿಗಮದಲ್ಲಿನ ಕೋಟ್ಯಂತರ ರೂ. ಹಗರಣದಲ್ಲಿ ಸ್ವಚ್ಛ ಇರುವುದಾಗಿ ಹೇಳುವ ಮುಖ್ಯಮಂತ್ರಿ
ಇದರ ಸಾಬೀತಿಗಾಗಿ ಸಿಬಿಐ ತನಿಖೆಗೆ ಅನುವು ಮಾಡಿಕೊಡಲಿ ಎಂದು ಸಂಸದ ಗೋವಿಂದ ಕಾರಜೋಳ ಸವಾಲು ಹಾಕಿದರು.
ದಾವಣಗೆರೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರದ ಖಜಾನೆಯಿಂದ ಹಣ ಬಿಡುಗಡೆಯಾಗಿದೆ. ಹಾಗಾಗಿ ಪ್ರಕರಣ ಸಮರ್ಥಿಸಿ ತಪ್ಪಿತಸ್ಥರನ್ನು ಉಳಿಸುವ ನೈತಿಕತೆ ಇಲ್ಲ. ಹೀಗಾಗಿ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜಿನಾಮೆ ಕೊಡಬೇಕೆಂದು ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರ ಎಂದರೆ ಹಗರಣಗಳ ಸರಮಾಲೆ. ಸ್ವಾತಂತ್ರಾೃನಂತರದಲ್ಲಿ 60 ಲಕ್ಷ ಕೋಟಿ ರೂ,ಗಿಂತ ಅಧಿಕ ಹಗರಣ ಮಾಡಿದ ಕಾಂಗ್ರೆಸಿಗರು ಜೈಲು ಸೇರಿದ್ದಾರೆ. ಕೆಲವರು ಜಾಮೀನಿನ ಮೇಲೆ ಹೊರಗೆ ಇದ್ದಾರೆ ಎಂದು ಟೀಕಿಸಿದರು.
ಅಧಿಕಾರಕ್ಕೆ ಬಂದು ಒಂದು ವರ್ಷ ಎರಡು ತಿಂಗಳು ಕಳೆದಿರುವ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದಲ್ಲಿ ಮುಳುಗಿದೆ.
ಸರ್ಕಾರದಿಂದ ಬ್ಯಾಂಕ್ ದರೋಡೆಯಾಗಿದ್ದು ಕರ್ನಾಟಕ ಇತಿಹಾಸದಲ್ಲಿ ಆಗಿರಲಿಲ್ಲ. ಇದರಲ್ಲಿ ಸಚಿವರೇ ಭಾಗಿಯಾಗಿರುವುದು ನಾಚಿಕೆಗೇಡು. ಇಡಿಯವರು ತನಿಖೆ ನಡೆಸುತ್ತಿದ್ದಾರೆ ಎಂದರು.