

ದಾವಣಗೆರೆ: ಬಟ್ಟೆ ಖರೀದಿಸುವ ವಿಚಾರದಲ್ಲಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಿ, ನಗರದಲ್ಲಿ ಕೋಮು ಸೌಹಾರ್ದ ಕದಡಲು ಯತ್ನಿಸಿರುವುದು ಸರಿಯಲ್ಲ ಎಂದು ಮೇಯರ್ ಬಿ.ಜಿ.ಅಜಯ್‌ಕುಮಾರ್ ಹೇಳಿದ್ದಾರೆ.
ದಾವಣಗೆರೆಯನ್ನು ಕರೊನಾಮುಕ್ತ ಮಾಡಲು ಎಲ್ಲರೂ ಶ್ರಮಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ನಿರ್ದಿಷ್ಟ ಅಂಗಡಿಗಳಲ್ಲಿ ಖರೀದಿಗೆ ನಿರ್ಬಂಧಿಸುವ ವೀಡಿಯೋ ಮಾಡಿ ಗೊಂದಲ ಸೃಷ್ಟಿಸಲಾಗುತ್ತಿದೆ. ಹಿಂದು- ಮುಸ್ಲಿಮರ ನಡುವೆ ಸಾಮರಸ್ಯಕ್ಕೆ ಧಕ್ಕೆ ತರಲಾಗುತ್ತಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
30 ವರ್ಷದ ಹಿಂದೆ ನಗರದಲ್ಲಿ ಸಂಭವಿಸಿದ್ದ ಅಶಾಂತಿ ಮತ್ತೆ ತರುವುದು ಬೇಡ. ಕರೊನಾ ಹಿನ್ನೆಲೆಯಲ್ಲಿ ವಿವಿಧ ಧರ್ಮೀಯರು ತಂತಮ್ಮ ಹಬ್ಬಗಳನ್ನು ಮನೆಯಲ್ಲೇ ಆಚರಿಸುತ್ತಿದ್ದಾರೆ. ರಂಜಾನ್ ಹಬ್ಬದಲ್ಲೂ ಮುಸ್ಲಿಮರು ಇದೇ ಮಾದರಿ ಅನುಸರಿಸಬೇಕು ಎಂದು ಮನವಿ ಮಾಡಿದರು.
ನಿರ್ದಿಷ್ಟ ಕೋಮಿನ ಅಂಗಡಿಯಲ್ಲಿ ಬಟ್ಟೆ ಖರೀದಿಸಿದರೆ ನಮ್ಮದು ಜಾತ್ಯತೀತ ರಾಷ್ಟ್ರವಾಗದು. ನಗರದಲ್ಲಿ ಹಿಂದು ಮುಸ್ಲಿಮರು ಅಣ್ಣ ತಮ್ಮಂದಿರಂತೆ ವಾಸಿಸುತ್ತಿದ್ದೇವೆ. ಸಾಮಾಜಿಕ ಶಾಂತಿಗೆ ಧಕ್ಕೆ ತರುವ ಕಿಡಿಗೇಡಿಗಳ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪಾಲಿಕೆ ಸದಸ್ಯರಾದ ಕೆ.ಚಮನ್‌ಸಾಬ್, ಸೈಯದ್ ಚಾರ್ಲಿ ಮಾತನಾಡಿ, ಕರೊನಾ ಸಂಕಟದ ಸಮಯದಲ್ಲಿ ಹೊಸ ಬಟ್ಟೆ ಖರೀದಿಸದೆಯೇ ಹಬ್ಬವನ್ನು ಆಚರಿಸಲು ನಗರದಲ್ಲಿ ಮುಸ್ಲಿಂ ಮುಖಂಡರ ಸಮ್ಮುಖದಲ್ಲಿ ನಿರ್ಧಾರ ಕೈಗೊಂಡಿದ್ದೆವೆಯೇ ಹೊರತು ನಿರ್ದಿಷ್ಟವಾಗಿ ಒಂದು ಕೋಮಿನ ಅಂಗಡಿಗಳಲ್ಲಿ ಬಟ್ಟೆ ಖರೀದಿಸದಂತೆ ತೀರ್ಮಾನ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಕೆಲ ಯುವಕರು ಈ ವಿಚಾರದಲ್ಲಿ ಗೊಂದಲ ಮೂಡಿಸಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ಇದರಿಂದ ಅವರು ದೊಡ್ಡ ನಾಯಕರಾಗುವ ಭ್ರಮೆ ಕಾಣುವುದು ಸರಿಯಲ್ಲ. ಯುವಕರನ್ನು ಕರೆದು ಬುದ್ಧಿವಾದ ಹೇಳುವುದಾಗಿ ಎಸ್ಪಿ ಕೂಡ ಹೇಳಿದ್ದಾರೆ. ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅಭ್ಯಂತರವಿಲ್ಲ ಎಂದರು.
ಮುಖಂಡ ಜೆ.ಅಮಾನುಲ್ಲಾಖಾನ್ ಮಾತನಾಡಿ, ಕರೊನಾ ನಿಯಂತ್ರಣ ವಿಚಾರದಲ್ಲಿ ಜಿಲ್ಲಾಡಳಿತದಷ್ಟೇ ಪಾಲಿಕೆ ಕೂಡ ಶ್ರಮಿಸುತ್ತಿದೆ. ಕಂಟೇನ್‌ಮೆಂಟ್ ವಲಯಗಳ ಮಿತಿಯನ್ನು 100 ಮೀ.ಗೆ ಸೀಮಿತಗೊಳಿಸುವಂತೆ ಮೇಯರ್ ಕೂಡ ಹೇಳಿಕೆ ನೀಡಿದ್ದು ಸರಿಯಾಗಿದೆ ಎಂದರು.