ನೈರ್ಮಲ್ಯದಲ್ಲಿ ದಾವಣಗೆರೆ ಮುಂಚೂಣಿಗೆ ತನ್ನಿ

dcvg-swachchate-sep-25.jpg
Published on

ದಾವಣಗೆರೆ: ಸ್ವಚ್ಛತೆಯಲ್ಲಿ ದಾವಣಗೆರೆ ರಾಷ್ಟ್ರ ಮಟ್ಟದಲ್ಲಿ 32 ನೇ ಸ್ಥಾನ ಗಳಿಸಿದೆ. ಸಾರ್ವಜನಿಕರು ಸ್ವಯಂಪ್ರೇರಿತವಾಗಿ ನೈರ್ಮಲ್ಯತೆಗೆ ಗಮನ ನೀಡಿ, ಟಾಪ್ 10ರೊಳಗೆ ಮುಂಚೂಣಿ ನಗರವಾಗಿ ಬೆಳೆಯಲು ಸಹಕಾರಿಯಾಗಲಿದೆ ಎಂದು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ ಮತ್ತು ವಿವಿಧ ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರ ಸಹಕಾರದಲ್ಲಿ ಕುಂದುವಾಡ ಕೆರೆ ಆವರಣದಲ್ಲಿ ಗುರುವಾರ ಬೆಳಗ್ಗೆ ಸ್ವಚ್ಛತಾ ಹೀ ಸೇವಾ ಪಾಕ್ಷಿಕದ ಅಂಗವಾಗಿ ಶ್ರಮದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.

ಸ್ವಚ್ಛತೆ ಕಾರ್ಯ ನಿರಂತರವಾದಲ್ಲಿ ಸ್ವಚ್ಛ ಪರಿಸರ ನಿರ್ಮಾಣವಾಗಲಿದೆ. ಜನರು ಪ್ಲಾಸ್ಟಿಕ್, ಹಸಿ ಕಸ, ಒಣ ಕಸ ಹಾಗೂ ಇತರೆ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ವಿಂಗಡಿಸಿ ಸಂಗ್ರಹಿಸುವ ಜತೆಗೆ ವೈಜ್ಞಾನಿಕ ವಿಲೇ ಮಾಡಿ ಜಲಚರಗಳು, ಐತಿಹಾಸಿಕ ಮತ್ತು ಪುಣ್ಯಸ್ಥಾನಗಳ ರಕ್ಷಣೆ ಮತ್ತು ಪರಿಸರ ಮಾಲಿನ್ಯ ತಡೆಗೆ ಶ್ರಮಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.

ದಾವಣಗೆರೆ ನಗರ ಅಧಿಕ ಜನಸಂಖ್ಯೆ ಹೊಂದಿದ್ದು, 400 ಜನ ಪೌರಕಾರ್ಮಿರಿದ್ದಾರೆ. ಅವರಿಂದ ಇಂತಹ ಬೃಹತ್ ನಗರ ಪ್ರದೇಶವನ್ನು ಸಂಪೂರ್ಣ ಸ್ವಸ್ಛಗೊಳಿಸುವುದು ಅಸಾಧ್ಯ. ನಾಗರಿಕರು ಸ್ವಚ್ಛತಾ ಕಾರ್ಯಕ್ಕೆ ಸಹಕರಿಸಿ, ಹಸಿಕಸ, ಒಣಕಸ ಎಲ್ಲೆಂದರಲ್ಲಿ ಎಸೆಯದೇ ಬೇರ್ಪಡಿಸಿ ಸ್ಥಳೀಯ ಸಂಸ್ಥೆಗಳ ಕಸಸಂಗ್ರಹ ವಾಹನಗಳಿಗೆ ನೀಡಬೇಕು ಎಂದು ತಿಳಿಸಿದರು.

ಸ್ವಚ್ಛತೆ ಕಾಪಾಡಲು, ಸಾರ್ವಜನಿಕ ಕುಂದುಕೊರತೆ ವ್ಯವಸ್ಥೆ ನಿವಾರಣೆಗೆ ದಾವಣಗೆರೆ ಸ್ಮಾರ್ಟ್ ಹೆಲ್ಪ್ ಅಪ್ಲಿಕೇಷನ್ ಬಿಡುಗಡೆ ಮಾಡಲಾಗಿದೆ. ನಾಗರಿಕ ಸೇವೆ, ಹೊಣೆಗಾರಿಕೆಯನ್ನು ಸುಧಾರಿಸುವ ಪ್ರಮುಖ ಹೆಜ್ಜೆಯಾಗಿ ಈ ಆ್ಯಪನ್ನು ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಬಿಡುಗಡೆಗೊಳಿಸಿದ್ದಾರೆ.

ಸಾರ್ವಜನಿಕರು ಪಾಲಿಕೆಯ ಆರೋಗ್ಯ, ಪರಿಸರ ವಿಭಾಗಕ್ಕೆ ಸಂಬಂಧಿಸಿದಂತೆ ಕಸ ವಿಲೇವಾರಿ ಸಮಸ್ಯೆ ಕುರಿತು ಛಾಯಾಚಿತ್ರಗಳೊಂದಿಗೆ ಮೊಬೈಲ್ ಅಪ್ಲಿಕೇಷನ್ ಮೂಲಕ ದೂರು ಸಲ್ಲಿಸಿ, ಸ್ವೀಕೃತಿ ಪಡೆಯಲು ಮತ್ತು ನಿಗದಿತ ಸಮಯದಲ್ಲಿ ದೂರು ಪರಿಹಾರವಾಗುವ ಬಗ್ಗೆ ಪರಿಶೀಲಿಸಲು ಅವಕಾಶವಿದೆ ಎಂದು ಹೇಳಿದರು.

ದೂರು ಸಲ್ಲಿಸುವ ವಿಧಾನ:

ಕಸ ವಿಲೇವಾರಿ ಕುರಿತ ಪುರಾವೆಗಳ ಛಾಯಾಚಿತ್ರಗಳನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ಅಪ್ಲೋಡ್ ಮಾಡುವುದರೊಂದಿಗೆ ಸರಳ ನೊಂದಣಿ ಮಾಡಿಕೊಳ್ಳಬಹುದು. ಕನ್ನಡ ಅಥವಾ ಇಂಗ್ಲಿಷಲ್ಲಿ ದೂರು ಸಲ್ಲಿಸಬಹುದು. ಪಾರದರ್ಶಕತೆಗಾಗಿ ತಮ್ಮ ದೂರನ್ನು ಯಾರು ನಿರ್ವಹಿಸುತ್ತಿದ್ದಾರೆ, ಯಾವ ಹಂತದಲ್ಲಿದೆ ಎಂಬುದನ್ನು ಸುಲಭವಾಗಿ ವೀಕ್ಷಿಸಬಹುದಾದ ಪಾರದರ್ಶಕತೆ ಇಲ್ಲಿದೆ. ಜನರ ಅಗತ್ಯ, ಪ್ರತಿಕ್ರಿಯೆ ಗಮನಿಸಿ ಇದನ್ನು ಸುಧಾರಣೆ ಮಾಡಲಾಗುವುದು ಎಂದರು.

ಸತ್ತ ಪ್ರಾಣಿಗಳನ್ನು ತೆರವುಗೊಳಿಸದಿರುವುದು, ಕಸದ ರಾಶಿ, ಕಸದ ಬುಟ್ಟಿಗಳನ್ನು ಸ್ವಚ್ಛಗೊಳಿಸದಿರುವುದು. ಕಸದ ವಾಹನಗಳು ಬಾರದಿರುವುದು, ರಸ್ತೆಯಲ್ಲಿನ ಕಸ ಗುಡಿಸದಿರುವುದು. ತೆರೆದ ಜಾಗದಲ್ಲಿ ಕಸ ಸುಡುವುದು. ಕಟ್ಟಡದ ನಿರ್ಮಾಣದ ಸಾಮಗ್ರಿ, ಅವಶೇಷಗಳನ್ನು ಹಾಗೆ ಬಿಟ್ಟಿರುವ ಕಸ ವಿಲೇವಾರಿ ಕುರಿತು ದೂರನ್ನು ಸಲ್ಲಿಸಬಹುದು ಎಂದು ವಿವರಿಸಿದರು.

ಗುರುವಾರದ ಶ್ರಮದಾನದಲ್ಲಿ ಸುಮಾರು 350 ಕೆ.ಜಿ.ಗೂ ಅಧಿಕ ಪ್ಲಾಸ್ಟಿಕ್ ಮತ್ತು ಕಸವನ್ನು ಸಂಗ್ರಹಿಸಲಾಯಿತು. ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ , ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ದೂಡಾ ಆಯುಕ್ತ ಹುಲಿಮನಿ ತಿಮ್ಮಣ್ಣ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಮಹಾಂತೇಶ್, ನಗರಸಭೆ ಆಯುಕ್ತೆ ರೇಣುಕಾ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಧುಸೂದನ್, ಡಿಡಿಪಿಐ ಜಿ. ಕೊಟ್ರೇಶ್, ಡಿಎಚ್‌ಒ ಡಾ. ಷಣ್ಮುಖಪ್ಪ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net