

ದಾವಣಗೆರೆ: ಬ್ರೋಕರ್ ಕಡೆ ಹೋದರೆ ಇ-ಸ್ವತ್ತು ಒಂದೇ ದಿನದಲ್ಲಿ ಸಿಗುತ್ತದೆ! ಲಂಚ ಕೊಟ್ಟರೂ ಕೆಲಸ ಆಗದಿರುವ ಬಗ್ಗೆ ಸಾರ್ವಜನಿಕರು ಶಾಸಕರ ಬಳಿ ದೂರು ಬಂದಿವೆ!
ಗುರುವಾರ ಆಯೋಜಿಸಿದ್ದ ದಾವಣಗೆರೆ ನಗರಪಾಲಿಕೆ ಸಾಮಾನ್ಯ ಸಭೆಯಲ್ಲಿ ಪಾಲಿಕೆ ಆಡಳಿತ ಪಕ್ಷದ ಸದಸ್ಯರೇ ಮಾಡಿದ ಆರೋಪಗಳಿವು.
ನಾಮನಿರ್ದೇಶನ ಸದಸ್ಯ ಸುರಭಿ ಶಿವಮೂರ್ತಿ, ಇ-ಸ್ವತ್ತು ಸಕಾಲಕ್ಕೆ ಸಿಗುತ್ತಿಲ್ಲ. ಒಂದು ಇ-ಸ್ವತ್ತಿಗೆ 30 ಸಾವಿರ ರೂ.ನಿಂದ 50 ಸಾವಿರ ರೂ. ಹಣ ಪಡೆಯಲಾಗುತ್ತಿದೆ. ಮಧ್ಯವರ್ತಿಗಳ ಹಾವಳಿ ಬಗ್ಗೆ ಶಾಸಕರ ಬಳಿ ಜನರು ದೂರು ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇ-ಸ್ವತ್ತು, ಬಿ ಖಾತೆ ವಿತರಣೆ ಸರಳೀಕರಿಸಿ. ಜನರು ನೇರವಾಗಿ ಪಾಲಿಕೆಗೆ ಬರಲು ಅಗತ್ಯ ದಾಖಲಾತಿಗಳ ಮಾಹಿತಿಯನ್ನು ಸಾರ್ವಜನಿಕ ಪ್ರಕಟಣೆ ನೀಡಿ ಎಂದು ಸಲಹೆ ನೀಡಿದರು.
ಎ.ನಾಗರಾಜ್ ಮಾತನಾಡಿ ಬಿಲ್ ಕಲೆಕ್ಟರ್‌ಗಳಿಗೆ ತೆರಿಗೆ ವಸೂಲಾತಿ ಜತೆಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದರಿಂದ ಇ-ಸ್ವತ್ತು ವಿತರಣೆ ಸಕಾಲಕ್ಕೆ ಆಗುತ್ತಿಲ್ಲ. ಪಾಲಿಕೆ ಕಚೇರಿಗೆ ಮಧ್ಯವರ್ತಿಗಳು ಕಾಲಿಡದಂತೆ ಮಾಡಿ ಎಂದು ಹೇಳಿದರು.
ದಾವಣಗೆರೆ ಪಾಲಿಕೆಯಿಂದ ಇದುವರೆಗೆ 48 ಸಾವಿರ ಇ ಸ್ವತ್ತು ನೀಡಲಾಗಿದೆ. ಪಾಲಿಕೆ ಆವರಣದಲ್ಲಿ ಮಧ್ಯವರ್ತಿಗಳಿಗೆ ಅವಕಾಶವಿಲ್ಲ. ಅಂಥವರು ಕಂಡುಬಂದಲ್ಲಿ ಎಸ್ಪಿ ಅವರಿಗೆ ಸೂಕ್ತ ಕ್ರಮಕ್ಕೆ ಪತ್ರ ಬರೆಯಲಾಗುವುದು. ಈಗಾಗಲೆ ಸರಳೀಕರಿಸಿದಂತೆ ಕಡಿಮೆ ಸಂಖ್ಯೆಯ ಆಸ್ತಿ ದಾಖಲಾತಿಗಳನ್ನು ಪಡೆಯಲಾಗುತ್ತಿದೆ ಎಂದು ಆಯುಕ್ತೆ ರೇಣುಕಾ ಹೇಳಿದರು.
ತೆರಿಗೆ ವಸೂಲಾತಿಗೆ ಸ್ವಸಹಾಯ ಸಂಘಗಳ ಸದಸ್ಯರನ್ನು ನಿಯೋಜಿಸಿ, ತೆರಿಗೆ ಸಂಗ್ರಹಣೆ ಆಧರಿಸಿ ಅವರಿಗೆ ಕಮಿಷನ್ ನೀಡಲು ನಿರ್ಧರಿಸಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ಇದು ಕಾರ್ಯಾಚರಣೆಗೆ ಬರಲಿದೆ ಎಂದೂ ತಿಳಿಸಿದರು.
ಸದಸ್ಯ ಎಚ್.ಉದಯಕುಮಾರ್ ಮಾತನಾಡಿ ರಾಜೀವ್‌ಗಾಂಧಿ ಬಡಾವಣೆಯಲ್ಲಿ ಮಧ್ಯವರ್ತಿಯೊಬ್ಬರು ಒಂದೇ ದಿನದಲ್ಲಿ ಸ್ವತ್ತು ವಿತರಣೆ ಮಾಡಿಸಿ ಕೊಟ್ಟಿದ್ದಾರೆ. ಒಂದೇ ದಿನದಲ್ಲಿ ಎಲ್ಲ ಅಧಿಕಾರಿಗಳ ಸಹಿ ಮಾಡಿಸಿದ್ದಾನೆ. ಮೂಲ ದಾಖಲಾತಿಗಳನ್ನೂ ಮರೆಮಾಚಿ ಮತ್ತೊಬ್ಬರ ಹೆಸರಲ್ಲಿ ಖಾತೆ ಮಾಡಿಸಲಾಗಿದೆ ಎಂದು ಮೊಬೈಲ್‌ನಲ್ಲಿನ ದಾಖಲೆಯನ್ನು ಆಯುಕ್ತರಿಗೆ ಪ್ರದರ್ಶಿಸಿದರು.
ಇದಕ್ಕೆ ಧ್ವನಿಗೂಡಿಸಿದ ಸದಸ್ಯೆ ಸುಧಾ, ರಾಜೀವ್‌ಗಾಂಧಿ ಬಡಾವಣೆಯಲ್ಲಿ ಒಂದೇ ಆಸ್ತಿಯ ಎರಡೆರಡು ಖಾತೆಗಳನ್ನು ಸೃಷ್ಟಿಸಲಾಗಿದೆ. 30 ವರ್ಷದಿಂದ ಮೂಲ ನಿವಾಸಿಗಳ ಬದಲಾಗಿ ಬೇರೆಯವರಿಗೆ ಆಸ್ತಿ ವರ್ಗಾವಣೆಯಾಗಿದೆ. ಬಹಳಷ್ಟು ಪ್ರಕರಣಗಳಲ್ಲಿ ಈ ಲೋಪವಾಗಿದೆ. ಇ ಸ್ವತ್ತು ನೀಡುವಾಗ ಪರಿಶೀಲಿಸಿ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.
ದಪ್ಪ ಚರ್ಮದ ಅಧಿಕಾರಿಗಳು!
ನಾನು ಪ್ರತಿ ವಾರ್ಡ್‌ಗೂ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದೇನೆ. ಪಾಲಿಕೆಯ ದಪ್ಪ ಚರ್ಮದ ಅಧಿಕಾರಿಗಳಿಗೆ ಜನರು ಮತ್ತು ಪಾಲಿಕೆ ಸದಸ್ಯರ ಸಮಸ್ಯೆಗೂ ಅರ್ಥವಾಗಬೇಕೆಂದು ಅವರನ್ನೂ ಕರೆದುಕೊಂಡು ಹೋಗುತ್ತಿದ್ದೇನೆ ಎಂದು ಮೇಯರ್ ಕೆ. ಚಮನ್‌ಸಾಬ್ ಹೇಳಿಕೊಂಡರು.
ಜನರು ಸಮಸ್ಯೆ ಹೊತ್ತು ಕಚೇರಿಗೆ ಬರಬಾರದು. ಭೇಟಿ ವೇಳೆ ಜನರ ಬೈಗುಳ ನನಗೆ ಅನಿವಾರ್ಯವಾಗಿದೆ. ರಾಜ್ಯೋತ್ಸವ ಆಚರಣೆ ಸಿದ್ಧತೆ ಹಿನ್ನೆಲೆಯಲ್ಲಿ ಕೆಲ ದಿನಗಳಿಂದ ನನಗೆ ರೌಂಡ್ಸ್ ಮಾಡಲಾಗಿಲ್ಲ. ನ.30ರಿಂದ ಮತ್ತೆ ಚಾಲನೆ ನೀಡುತ್ತೇನೆ ಎಂದೂ ಸದಸ್ಯರಿಗೆ ಉತ್ತರಿಸಿದರು.
ಮೇಯರ್ ಬಂದು ಹೋದರೂ ಕೆಲಸ ಆಗುತ್ತಿಲ್ಲ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ನಮ್ಮ ಆಡಳಿತ ಎಂದುಹೇಳಿಕೊಳ್ಳಲು ನಾಚಿಕಯಾಗುತ್ತದೆ ಎಂದು ಬಿ.ಎಚ್. ವಿನಾಯಕ್ ಹೇಳಿದರು. ಕೇವಲ ಮೇಯರ್, ಆಯುಕ್ತರ ಭೇಟಿ ಸಾಲದು. ಆಯಾ ಪಾಲಿಕೆ ಸದಸ್ಯರ ಮೇಲೂ ಜವಾಬ್ದಾರಿ ಇದೆ ಎಂದು ಪಾಮೇನಹಳ್ಳಿ ನಾಗರಾಜ್ ಹೇಳಿದರು.
----