ಕಂದಾಯ ಪರಿಷ್ಕರಣೆ ಕೈಬಿಡಲು ಒತ್ತಾಯ

dvg congres may 29
ದಾವಣಗೆರೆ ಮಹಾನಗರ ಪಾಲಿಕೆ ಆವರಣದಲ್ಲಿ ಶುಕ್ರವಾರ, ಕಂದಾಯ ಪರಿಷ್ಕರಣೆ ಕೈಬಿಡಲು ಒತ್ತಾಯಿಸಿ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು.  
Published on

ದಾವಣಗೆರೆ: ಮಹಾನಗರ ಪಾಲಿಕೆಯ ಕಂದಾಯ ಪರಿಷ್ಕರಣೆಯನ್ನು ಕೈಬಿಟ್ಟು ಹಿಂದಿನ ಕಂದಾಯವನ್ನೇ ಪರಿಗಣಿಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಪಾಲಿಕೆಯ ಮಹಾತ್ಮಗಾಂಧಿ ಪ್ರತಿಮೆ ಮುಂಭಾಗ ವಿಪಕ್ಷ ನಾಯಕ ಎ.ನಾಗರಾಜ್ ನೇತೃತ್ವದಲ್ಲಿ ಸೇರಿದ ಸದಸ್ಯರು, ಮೌನ ಪ್ರತಿಭಟನೆ ನಡೆಸಿ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಕೋವಿಡ್ ಸಂಕಷ್ಟದಿಂದ 2 ತಿಂಗಳ ಕಾಲ ವಾಣಿಜ್ಯ ನಗರವಾದ ದಾವಣಗೆರೆ ಸ್ಥಬ್ಧಗೊಂಡಿತ್ತು. ಯಾವುದೇ ವ್ಯಾಪಾರ, ವಹಿವಾಟು ನಡೆದಿಲ್ಲ. ಜನ ಲಾಕ್‌ಡೌನ್, ಜನತಾ ಕರ್ಫ್ಯೂಗೆ ಸಿಲುಕಿ ನಲುಗಿ ಹೋಗಿದ್ದಾರೆ. ಅಂದಂದಿನ ದುಡಿಮೆಯನ್ನೇ ನಂಬಿರುವ ಜನರ ಬದುಕು ಬೀದಿಗೆ ಬಿದ್ದಿದೆ. ಇಂತಹ ಸಮಯದಲ್ಲಿ ಜಿಲ್ಲಾಧಿಕಾರಿ ಈ ಹಿಂದೆ ಮಾಡಿದ ನಿರ್ಣಯದಿಂದ ಜನರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು.

ಪ್ರತಿ ಮೂರು ವರ್ಷಗಳಿಗೊಮ್ಮೆ ಕಂದಾಯ ಪರಿಷ್ಕರಣೆಯನ್ನು ಪಾಲಿಕೆಯ ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿಸಿ, ಜನಸಾಮಾನ್ಯರಿಗೆ ಹೊರೆ ಆಗದಂತೆ ಹಾಗೂ ಸರ್ಕಾರಕ್ಕೂ ಸೂಕ್ತ ಕಂದಾಯ ಬರುವ ರೀತಿಯಲ್ಲಿ ಮಾಡಲಾಗುತ್ತಿತ್ತು.

ಚುನಾಯಿತ ಸದಸ್ಯರನ್ನು ಕಡೆಗಣಿಸಿ ಪಾಲಿಕೆ ಆಡಳಿತಾಧಿಕಾರಿಯಾಗಿದ್ದ ಜಿಲ್ಲಾಧಿಕಾರಿ ಅವೈಜ್ಞಾನಿಕವಾಗಿ ಕಂದಾಯ ಪರಿಷ್ಕರಿಸಿ ಸರ್ಕಾರಕ್ಕೆ ಕಳುಹಿಸಿದ್ದಾರೆ. ಇದಕ್ಕೆ ಸರ್ಕಾರದ ಮಟ್ಟದಲ್ಲಿ ಅನುಮೋದನೆ ಸಹ ದೊರೆತಿದೆ. ಏಕಾಏಕಿ ಕಂದಾಯ ಶೇ.18ರಷ್ಟು ವಸತಿಗೆ ಹಾಗೂ ಶೇ.24ರಷ್ಟು ವಾಣಿಜ್ಯ ಮಳಿಗೆಗಳಿಗೆ ದರ ಏರಿಕೆ ಮಾಡಿರುವುದನ್ನು ಖಂಡಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ, ರಿಸರ್ವ್ ಬ್ಯಾಂಕುಗಳಿಂದ, ಸಹಕಾರ ಸಂಘಗಳಿಂದ ಸಾಲದ ಬಾಕಿ ಕಟ್ಟಲು 6 ತಿಂಗಳ ವಿರಾಮ ಘೋಷಿಸಿವೆ. ಇಂತಹ ಸಂದರ್ಭದಲ್ಲಿ ಪಾಲಿಕೆ ತೆಗೆದುಕೊಂಡಿರುವ ತೀರ್ಮಾನ ನಗರದ ಜನತೆಗೆ ಶಾಪವಾಗಿ ಪರಿಣಮಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ್, ಪಾಲಿಕೆ ಸದಸ್ಯರಾದ ದೇವರಮನೆ ಶಿವಕುಮಾರ್, ಜಿ.ಎಸ್.ಮಂಜುನಾಥ್, ಜೆ.ಎನ್.ಶ್ರೀನಿವಾಸ್, ಅಬ್ದುಲ್ ಲತೀಫ್, ಪಾಮೇನಹಳ್ಳಿ ನಾಗರಾಜ್, ವಿನಾಯಕ ಪೈಲ್ವಾನ್, ಜಿ.ಡಿ.ಪ್ರಕಾಶ್, ಜಾಕೀರ್ ಅಲಿ, ಆಶಾ ಉಮೇಶ್, ಶಿವಲೀಲಾ, ಸವಿತಾ, ಶ್ವೇತಾ ಶ್ರೀನಿವಾಸ್, ನಾಗರತ್ನಮ್ಮ ಕೃಷ್ಣಪ್ಪ, ಎ.ಬಿ.ರಹೀಂ, ಚಮನ್ ಸಾಬ್, ಮುಖಂಡರಾದ ಸೋಮ್ಲಾಪುರದ ಹನುಮಂತಪ್ಪ, ಕೆ.ಎಲ್.ಹರೀಶ್ ಇದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net