

ದಾವಣಗೆರೆ: ದಾವಲ್‌ಪೇಟೆ ತೊಗಟವೀರ ಸಮಾಜದಿಂದ ಶ್ರೀ ಚೌಡೇಶ್ವರಿ ಅಮ್ಮನವರ ಶ್ರಾವಣ ಮಾಸದ ರಥೋತ್ಸವ ಮಂಗಳವಾರ ಸಂಜೆ ನೆರವೇರಿತು.
ಚೌಡೇಶ್ವರಿ ದೇವಿಯ ಉತ್ಸವ ಮೂರ್ತಿ ಹೊತ್ತ ಅಲಂಕೃತ ವಾಹನದೊಂದಿಗೆ ಚೌಡೇಶ್ವರಿ ದೇವಸ್ಥಾನ ಆವರಣದಿಂದ ಆರಂಭವಾದ ಭವ್ಯ ರಥ, ಶಿವಾಜಿ ನಗರದ ದುರ್ಗಾಂಬಿಕಾ ದೇವಸ್ಥಾನ, ದೊಡ್ಡಪೇಟೆಯ ಗಣೇಶ ದೇವಸ್ಥಾನ, ಹಾಸಭಾವಿ ರಸ್ತೆ ಮಂಡಿಪೇಟೆ, ವಿಜಯಲಕ್ಷ್ಮೀ ವೃತ್ತ ಮೊದಲಾದ ರಾಜಬೀದಿಗಳಲ್ಲಿ ಸಂಚರಿಸಿತು.
ಉಡುಪಿಯ ಚಂಡೆ ವಾದನ, ನಾದಸ್ವರ ಕಲಾವಿದರು ರಥೋತ್ಸವಕ್ಕೆ ಮೆರುಗು ನೀಡಿದ್ದರೆ ಆರತಿ ತಟ್ಟೆಗಳೊಂದಿಗೆ ಮುತ್ತೈದೆಯರು, ಸಮಾಜದ ಮುಖಂಡರು ಹೆಜ್ಜೆ ಹಾಕಿದರು.
ತೊಗಟವೀರ ಸಮಾಜದ ಸೇವಾ ಟ್ರಸ್ಟ್ ಅಧ್ಯಕ್ಷ ದ್ವಾರಕಾನಾಥ್ ರಥೋತ್ಸವಕ್ಕೆ ಚಾಲನೆ ನೀಡಿದರು. ಖಜಾಂಚಿ ಶಂಕರ್, ದೇವಸ್ಥಾನದ ಅಧ್ಯಕ್ಷ ಎಲ್. ಆರ್. ವೆಂಕಟೇಶ, ಉಪಾಧ್ಯಕ್ಷ ಜಗನಾಥ, ಟ್ರಸ್ಟಿಗಳಾದ ಚೌಡಪ್ಪ ಕಿರಿಗೆರೆ, ರವಿಕುಮಾರ್, ತಿಮ್ಮಪ್ಪ, ಜಗನ್ನಾಥ ಮೂರ್ತಿ, ಶ್ರೀಧರ ಮೂರ್ತಿ, ರಾಘವೇಂದ್ರ ಬಾಬು, ಸುರೇಶ್, ಮುರಳೀಧರ ಇತರರು ಪಾಲ್ಗೊಂಡಿದ್ದರು.
ಬೆಳಗ್ಗೆ ದೇವಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಮಾಡಲಾಯಿತು. ನವಗ್ರಹ, ಗಣಪತಿ, ಕಲಾದಿ ಹೋಮ, ಪುಷ್ಪಾರ್ಚನೆ ಹಾಗೂ ವಿವಿಧ ಪೂಜಾ ಕೈಂಕರ್ಯ ನಡೆದವು.
ಬುಧವಾರ ಬೆಳಗ್ಗೆ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಡಿಪ್ಲೋಮಾ ಹಾಗೂ ಇಂಜಿನಿಯರಿಂಗ್‌ನಲ್ಲಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಆಯೋಜಿಸಲಾಗಿದೆ. ಶ್ರೀ ದಿವ್ಯಜ್ಞಾನಾನಂದಗಿರಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
--