ಮಕ್ಕಳಿಗೆ ಬೇಕು ಉತ್ತಮ ಕಲಿಕಾ ವಾತಾವರಣ

1000326106.jpg
Published on

ದಾವಣಗೆರೆ: ಇಂದಿನ ಮಕ್ಕಳು ಎಲೆಕ್ಟ್ರಾನಿಕ್ ಮಾಧ್ಯಮಗಳಿಂದ ಪ್ರಭಾವಿತರಾಗಿದ್ದಾರೆ. ಅವರ ಕಲಿಕೆಯ ಹಸಿವನ್ನು ನೀಗಿಸಲು ಸಂಪನ್ಮೂಲ ವ್ಯಕ್ತಿಗಳು ಸದೃಢರಾಗಬೇಕಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಕಾರ್ಯಕ್ರಮ ನಿರೂಪಣಾಧಿಕಾರಿ ಗುರುರಾಜ್ ತಿಳಿಸಿದರು.
ರಾಜ್ಯ ವಿಜ್ಞಾನ ಪರಿಷತ್ತು ಮತ್ತು ಜಿಲ್ಲಾ ಬಾಲಭವನ ಸಮಿತಿ ವತಿಯಿಂದ ಜಿಲ್ಲಾ ಬಾಲಭವನದಲ್ಲಿ ಸೋಮವಾರ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ವಿಶೇಷ ವಾರಾಂತ್ಯ ಚಟುವಟಿಕೆಗೆ ಚಾಲನೆ ನೀಡಿ ಮಾತನಾಡಿದರು.
ಕಲ್ಲನ್ನು ಮೇಲಕ್ಕೆಸೆದರೆ ಪುನಃ ಅದು ಕೆಳಗೆ ಬೀಳುತ್ತದೆ. ಪೃಥ್ವಿ ಮೊದಲು ಮಾಡಿ ಅನೇಕ ಗ್ರಹ ತಾರೆಗಳು ಅಂತರಿಕ್ಷದಲ್ಲಿ ತೇಲುತ್ತವೆ. ಈ ಆಕಾಶಕಾಯಗಳು ಏಕೆ ತೇಲುತ್ತಿವೆ ? ಅವು ಕೆಳಗೆ ಬೀಳದಂತೆ, ಅತ್ತಿತ್ತ ಚದುರಿ ಹೋಗದಂತೆ ನಿಯಂತ್ರಿಸುವ ಶಕ್ತಿ ಯಾವುದು ? ಮೊದಲಾದ ಮಕ್ಕಳ ಕುತೂಹಲಭರಿತ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಲು ಮುಂದಾದಾಗ ಕಲಿಕೆ ಅರ್ಥಪೂರ್ಣವಾಗಲಿದೆ. ಮಕ್ಕಳ ಕಲಿಕೆಗೆ ಇಂತಹ ಉತ್ತಮವಾದ ವಾತಾವರಣ ನಿರ್ಮಿಸಬೇಕಿದೆ ಎಂದರು.
ಮಕ್ಕಳ ಕನಸುಗಳಿಗೆ ಬಣ್ಣ ತುಂಬುವ ಕೆಲಸವನ್ನು ಜಿಲ್ಲಾ ಬಾಲಭವನ ವಾರಾಂತ್ಯ ಶಿಬಿರದ ಮೂಲಕ ಮಾಡುತ್ತಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಒಂದೊಂದು ಶಾಲೆಯಿಂದ 50 ಮಕ್ಕಳನ್ನು ಬಾಲಭವನಕ್ಕೆ ಆಹ್ವಾನಿಸಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡು ಬಾಲಭವನವನ್ನು ಮಕ್ಕಳಸ್ನೇಹಿಯಾಗಿ ರೂಪಿಸಲಾಗಿದೆ. ಜಿಲ್ಲೆಯ ಬಾಲಭವನ ಎರಡು ವರ್ಷಗಳ ನಿರಂತರ ಚಟುವಟಿಕೆ ನಡೆಸಿ ರಾಜ್ಯಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.
ಜಿಲ್ಲಾ ಬಾಲಭವನವನ್ನು ಅಭಿವೃದ್ಧಿ ಪಡಿಸಲು ಜಿಲ್ಲೆಯ ಹಿರಿಯ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ. ಇದು ಅಂತಿಮ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ಉದ್ಯಾನವನ, ಕ್ರೀಡಾ ಆಟಿಕೆಗಳು, ಪುಟಾಣಿ ರೈಲು ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು.
ವಾರ‌್ಯಾಂತ ಶಿಬಿರದಲ್ಲಿ ಕರ್ನಾಟಕ ವಿಜ್ಞಾನ ಪರಿಷತ್ ಜಿಲ್ಲಾ ಕಾರ್ಯದರ್ಶಿ ಎಂ.ಗುರುಸಿದ್ದಸ್ವಾಮಿ, ಜಿಲ್ಲಾ ಬಾಲಭವನ ಕಾರ್ಯಕ್ರಮ ಸಂಯೋಜಕಿ ಎಸ್.ಬಿ.ಶಿಲ್ಪಾ, ಸಂಪನ್ಮೂಲ ವ್ಯಕ್ತಿ ಡಿ.ಕೆ.ಲಕ್ಷ್ಮೀ ಇದ್ದರು. ಶಿಬಿರದಲ್ಲಿ ದಾವಣಗೆರೆಯ ನಿಂಚನ ಪಬ್ಲಿಕ್ ಶಾಲೆಯ ಶಿಕ್ಷಕರು, ಮಕ್ಕಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net