ಚದುರಂಗ ಚುರುಕುತನ ವೃದ್ಧಿ  ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿಕೆ

1000415958.jpg
Published on

ದಾವಣಗೆರೆ: ಚದುರಂಗ ಬಹಳ ಬುದ್ಧಿವಂತರು ಆಡುವ ಆಟ. ಇದರಿಂದ ಹೆಚ್ಚಿನ ಜ್ಞಾನ ಪಡೆಯಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದರು.
ದಾವಣಗೆರೆ ಚೆಸ್ ಕ್ಲಬ್‌ನಿಂದ ನಗರದಲ್ಲಿ ಆಯೋಜಿಸಿರುವ ‘ಪುನೀತ್ ರಾಜ್‌ಕುಮಾರ್ ಕಪ್’ ಪಂದ್ಯಾವಳಿಗೆ  ನಗರದ ಎಂಸಿಸಿ ‘ಬಿ’ ಬ್ಲಾಕ್‌ನ ಸಚಿವರ ನಿವಾಸದ ಆವರಣದಲ್ಲಿ ಸಂಸದರೊಂದಿಗೆ ಚಾಲನೆ ನೀಡಿ ಮಾತನಾಡಿದರು.
 ಮಾನಸಿಕ ಸದೃಢತೆಗೆ ಚೆಸ್ ಸಹಕಾರಿಯಾಗಿದ್ದು, ಹೆಚ್ಚಿನ ಯುವಕರು ಚದುರಂಗದತ್ತ ಒಲವು ತೋರುತ್ತಿದ್ದಾರೆ. ಚೆಸ್ ಕ್ಲಬ್ ಅವರಿಗೆ ಉತ್ತಮ ತರಬೇತಿ ನೀಡಬೇಕು ಎಂದು ತಿಳಿಸಿದರು.
ಚೆಸ್ ಕ್ಲಬ್ ಉತ್ಸುಕತೆಯಿಂದ ಪಂದ್ಯಾವಳಿ ಆಯೋಜಿಸಿದ್ದು, 2 ಲಕ್ಷ ರೂ.ಗಳ ಬಹುಮಾನ ಮೊತ್ತವಿದೆ. ಇದು ಇಲ್ಲಿಗೆ ನಿಲ್ಲದೆ ಕ್ಲಬ್‌ನಿಂದ ನಿರಂತರ ಕಾರ್ಯಕ್ರಮ ಆಯೋಜಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಪ್ರಥಮವಾಗಿ ಸರ್ಕಾರಿ ಕಾಲೇಜುಗಳ ಪಿಯುಸಿ ವಿದ್ಯಾರ್ಥಿಗಳಿಗೆ ‘ಸಕ್ಷೇಮ’ ಉಚಿತ ಸಿಇಟಿ, ನೀಟ್ ತರಬೇತಿ ಕಾರ್ಯಕ್ರಮ ಪ್ರಾರಂಭಿಸಲಾಗಿದೆ. ಪಿಯುಸಿ ಮತ್ತಿತರ ಫಲಿತಾಂಶಗಳಲ್ಲಿ ಜಿಲ್ಲೆ ಮಂಗಳೂರು ಉಡುಪಿ ಮೀರಿಸಬೇಕಿದೆ ಎಂದರು.
ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಪಾಲಿಕೆ ಮಹಾಪೌರ ಕೆ.ಚಮನ್‌ಸಾಬ್, ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಪಾಲಿಕೆ ಸದಸ್ಯರಾದ ಎ.ಬಿ ರಹೀಮ್ ಸಾಬ್, ಸವಿತಾ ಹುಲ್ಮನೆ ಗಣೇಶ್, ಅನಿತಾಬಾಯಿ ಇತರರು ಇದ್ದರು.
ಜಾತಿಗಣತಿ ಜಾರಿಗೆ ಮುನ್ನ ಚರ್ಚೆ
ಜಾತಿ ಜನಗಣತಿ ಜಾರಿಗೆ ಮುನ್ನ ಎಲ್ಲ ಸಮುದಾಯಗಳ ನಾಯಕರ ಜತೆ ಮೊದಲು ಚರ್ಚೆ ಆಗಬೇಕು ಎಂದು ಗಣಿ ಹಾಗೂ ತೋಟಗಾರಿಕೆ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್  ಹೇಳಿದರು.
ಜಾತಿ ಗಣತಿ ಬೇಕು - ಬೇಡ ಎನ್ನುವವರಿದ್ದಾರೆ.ಹೀಗಾಗಿ ಮೊದಲು ವಿಸ್ತೃತ ಚರ್ಚೆ ಆಗಬೇಕು. ಆನಂತರ ಅಂತಿಮವಾಗಿ ಏನಾಗುತ್ತೋ ನೊಡೋಣ ಎಂದು  ಸುದ್ದಿಗಾರರಿಗೆ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಾದ ಅಗತ್ಯವಿಲ್ಲ ಎಂದು ಜಾತ್ಯತೀತ ಜನತಾ ದಳದ ಹಿರಿಯ ಶಾಸಕ ಜಿ.ಟಿ.ದೇವೇಗೌಡರು ನೀಡಿದ ಹೇಳಿಕೆ ಸರಿಯಾಗಿದ್ದು ನಾನದನ್ನು  ಸ್ವಾಗತಿಸುವೆ ಎಂದರು.
ಎಫ್‌ಐಆರ್ ಆದವರನ್ನೆಲ್ಲ ಬಂಧಿಸಲು ಆಗುತ್ತಾ? ಎಲ್ಲರೂ ರಾಜೀನಾಮೆ ಕೊಡಬೇಕಾ? ಮುಡಾ ಪ್ರಕರಣದಲ್ಲಿ  ತನಿಖೆ ಆಗದೆ ಸತ್ಯಾಂಶ ತಿಳಿಯಲು ಹೇಗೆ ಸಾಧ್ಯ. ನಿವೇಶನ ವಾಪಸ್ ಮಾಡಿದೆ ಅದ್ಹೇಗೆ ತಪ್ಪಾಗುತ್ತದೆ  ಎಂದು ಮಲ್ಲಿಕಾರ್ಜುನ್ ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net