ಕಣ್ಮನ ತಣಿಸಿದ ಸಿದ್ಧರಾಮೇಶ್ವರರ ರಥ ಜಾನಪದ ಕಲಾ ತಂಡಗಳ ಮೆರುಗು

1000295903.jpg
Published on

ದಾವಣಗೆರೆ: ಶ್ರಾವಣದ ಮೊದಲ ಸೋಮವಾರ ನಗರದಲ್ಲಿ ಜರುಗಿದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ದೇವರ 62ನೇ ವರ್ಷದ ಅದ್ದೂರಿ ರಥೋತ್ಸವ ಭಕ್ತರ ಕಣ್ಮನ ತಣಿಸಿತು.
 ಶ್ರೀ ಸಿದ್ಧರಾಮೇಶ್ವರ ದೇವರ ಮೂರ್ತಿ ಇರಿಸಿದ್ದ ಹೂವಿನಲಂಕೃತ ಭವ್ಯ ರಥ, ವೆಂಕಾಭೋವಿ ಕಾಲನಿಯ ಸಿದ್ದರಾಮೇಶ್ವರ ದೇವಸ್ಥಾನ ಆವರಣದಿಂದ ಆರಂಭವಾಗಿ ನಗರದಲ್ಲೆಡೆ ತುಂತುರು ವರುಣನ ಜತೆಯಲ್ಲೇ ಭಕ್ತಿ ಮಳೆ ಸುರಿಸಿತು.
ವೆೆಂಕಟೇಶ್ವರ ವೃತ್ತದಲ್ಲಿ ರಥಕ್ಕೆ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಆದಿಯಾಗಿ ನೆರೆದಿದ್ದ ಎಲ್ಲ ಮಠಾಧೀಶರು ಪುಷ್ಪಾರ್ಚನೆ ಮಾಡಿದರು. ಯುವತಿಯರು ಕುಂಭ ಹೊತ್ತು ಸಾಗಿದರು.
ರಥ ಮುಂದೆ ಅಲಂಕೃತ ವಾಹನಗಳ ಮೇಲೆ ಸಿದ್ದರಾಮೇಶ್ವರರು, ಬಸವಣ್ಣ, ಅಕ್ಕಮಹಾದೇವಿ, ನುಲಿಯ ಚಂದಯ್ಯ, ಮಡಿವಾಳ ಮಾಚಿದೇವ, ಮೇದಾರ ಕೇತಯ್ಯ, ಅಂಬಿಗರ ಚೌಡಯ್ಯ, ಕುರುಬ ಗೊಲ್ಲೇಶ, ಭಗೀರಥ ಮಹರ್ಷಿ, ಅಂಬೇಡ್ಕರ್ ಚಿತ್ರಪಟಗಳು ನಾನಾ ಸಮಾಜವನ್ನು ಪ್ರತಿಬಿಂಬಿಸಿದವು.
ಕಹಳೆ, ನಂದಿಕೋಲು, ಸಮಾಳ, ಕಂಸಾಳೆ, ಕೀಲುಕುದುರೆ, ಗಾರುಡಿ ಗೊಂಬೆ, ನಾದಸ್ವರ, ಮಂಗಳವಾದ್ಯ, ಪೋತರಾಜನ ಕುಣಿತ,  ಪೂಜಾ ಕುಣಿತ, ನಾಸಿಕ್ ಡೋಲು ಮೊದಲಾದ ಜಾನಪದ ಕಲಾತಂಡಗಳ ಜತೆಯಲ್ಲೇ ಶ್ರೀರಾಮ-ಸೀತೆ-ಹನುಮಂತ, ಜಾಂಬುವಂತನ  ರೂಪದಲ್ಲಿದ್ದ ಹಗಲುವೇಷಧಾರಿಗಳು ಹಾಗೂ ಹುಲಿ ಕುಣಿತದ ತಾಳ ರಥೋತ್ಸವಕ್ಕೆ ಉತ್ಸಾಹ ಇಮ್ಮಡಿಸಿದವು.
* ದಮನಿತರ ಸಾಂಸ್ಕೃತಿಕ ನಾಯಕ
ಈ ಸಂದರ್ಭದಲ್ಲಿ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ಶೋಷಿತ ದಮನಿತ ಸಮುದಾಯಗಳ ಸಾಂಸ್ಕೃತಿಕ ನಾಯಕರಾಗಿ ಬಸವಣ್ಣನವರ ಜತೆಯಲ್ಲಿದ್ದ ಸಿದ್ದರಾಮೇಶ್ವರರರು ಸಿದ್ಧ ಪುರುಷ, ಪವಾಡ ಪುರುಷರಾಗಿದ್ದರು. ಬದಲಾವಣೆ ಹರಿಕಾರರಾಗಿದ್ದರು ಎಂದು ಸ್ಮರಿಸಿದರು.
ಶೋಷಿತ ಭೋವಿ ಸಮಾಜ, ರಥೋತ್ಸವದ ಮೂಲಕ ಸಾಮಾಜಿಕ, ಶೈಕ್ಷಣಿಕ. ರಾಜಕೀಯ ಹಾಗೂ ಧಾರ್ಮಿಕ ಜಾಗೃತಿ ಮೂಡಿಸುತ್ತಿದೆ. ಧಾರ್ಮಿಕ ತಳಹದಿಯಲ್ಲಿ ಸಮಾಜ ಸಂಘಟನೆಯಾಗುತ್ತಿದೆ. ಸಂಸ್ಥಾಪಕರಾದ ಸಿದ್ಧರಾಮೇಶ್ವರರ 22ನೇ ವರ್ಷದ ಸಂಸ್ಮರಣೋತ್ಸವವನ್ನು ಜತೆಯಲ್ಲೇ ನಡೆಸುತ್ತಿದ್ದೇವೆ. ಇದನ್ನು ಸಮಾಜೋದ್ದಾರ ಜಾಗೃತಿಯ ದ್ಯೋತಕವಾಗಿ ಆಚರಿಸಲಾಗುತ್ತಿದೆ ಎಂದು ವಿವರಿಸಿದರು.
ಅಂಬಿಗರ ಗುರುಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಮಾತನಾಡಿ ಬಸವಣ್ಣನವರ ಅನುಭವಮಂಟಪದಲ್ಲಿ ವಿಶೇಷ ಅನುಭಾವಿಯಾಗಿ ಮನದ ಮೈಲಿಗೆಯನ್ನು ತೊಳೆಯುವ, ಕಠಿಣತೆಯಿಂದ ಸೌಮ್ಯತೆಯೆಡೆ ಪರಿವರ್ತಿಸಿದ್ದ ಸಿದ್ದರಾಮೇಶ್ವರರ ರಥ ಹಲವು ವರ್ಷದಿಂದ ನಡೆದು ಬರುತ್ತಿದೆ. ಬಸವಾದಿ ಶಿವಶರಣರು ಸಮಾನತೆಗಾಗಿ ಕ್ರಾಂತಿ ಮಾಡಿದರು. ಅವರ ತತ್ವ ಬಿಂಬಿಸುವ ಕಾರ್ಯಕ್ರಮವನ್ನು ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ನಿರ್ವಹಿಸುತ್ತಿದ್ದಾರೆ ಎಂದರು.
ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ ಭಾರತದ ಶ್ರೇಣೀಕತ ಜಾತಿ ವ್ಯವಸ್ಥೆಯ ಸಮಾಜ ಹೋಗಿ ಸಮಮಾಜ ನಿರ್ಮಿಸುವ ಆಶಯದೊಂದಿಗೆ 1.96 ಲಕ್ಷ ಅಮರಗಣಂಗಳು ಕ್ರಾಂತಿ ಮಾಡಿದ್ದರು. ಶೂನ್ಯಪೀಠದ ಮೂರನೇ ಅಧ್ಯಕ್ಷರಾಗಿದ್ದ ಶಿವಯೋಗಿ ಸಿದ್ದರಾಮೇಶ್ವರರು ಎಲ್ಲ ಸಮುದಾಯದೊಂದಿಗೆ ಬೆಎತು ಕಾಯಕಕ್ಕೆ ಮಹತ್ವ ನೀಡಿದರು. ಈ ಕಾರ್ಯಕ್ರಮ ಉತ್ತಮ ಮಳೆ-ಬೆಳೆ ತರಲಿ ಎಂದು ಹಾರೈಸಿದರು.
 ಮಡಿವಾಳ ಪೀಠದ ಬಸವ ಮಾಚಿದೇವ ಶ್ರೀ, ತೇಲಸಂಗದ ಕುಂಬಾರ ಗುಂಡಯ್ಯ ಸ್ವಾಮೀಜಿ, ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ತಂಗಡಗಿಯ ಹಡಪದ ಅಪ್ಪಣ್ಣ ಭಾರತಿ ಸ್ವಾಮೀಜಿ, ಕೊರಟಗೆರೆಯ ಮಹಾಲಿಂಗ ಸ್ವಾಮೀಜಿ, ಚಿತ್ರದುರ್ಗದ ತಿಪ್ಪೇರುದ್ರ ಸ್ವಾಮೀಜಿ, ಮೇದಾರ ಕೇತಯ್ಯ ಸ್ವಾಮೀಜಿ, ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಬಸವ ರಮಾನಂದ ಸ್ವಾಮೀಜಿ, ಗುರುಕಲ್ಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ಅಗಡಿ ಮಠದ ಗುರುಲಿಂಗ ಸ್ವಾಮೀಜಿ, ಶಿಕಾರಿಪುರ ಚನ್ನಬಸಪ ಸ್ವಾಮೀಜಿ ಪಾಲ್ಗೊಂಡಿದ್ದರು.
ಶಾಸಕರಾದ ಕೆ.ಎಸ್.ಬಸವಂತಪ್ಪ, ಲತಾ ಮಲ್ಲಿಕಾರ್ಜುನ, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್. ರವಿಕುಮಾರ್, ಮೇಯರ್ ವಿನಾಯಕ ಪೈಲ್ವಾನ್, ಪಾಲಿಕೆ ಸದಸ್ಯ ಎ.ನಾಗರಾಜ, ಮುಖಂಡ ಜಿ.ಬಿ.ವಿನಯಕುಮಾರ್, ಭೋವಿ ನಿಗಮದ ಮಾಜಿ ನಿರ್ದೇಶಕ ಕಾಳಘಟ್ಟ ಹನುಮಂತಪ್ಪ, ಅಯೂಬ್ ಪೈಲ್ವಾನ್, ರಾಜಪ್ಪ, ಉತ್ಸವ ಸಮಿತಿ ಅಧ್ಯಕ್ಷ ಎಚ್. ಜಯಣ್ಣ, ವಿ.ಗೋಪಾಲ್, ಎ.ಬಿ. ನಾಗರಾಜ್, ಎಚ್.ಮಂಜುನಾಥ್, ಪಿ.ಶ್ರೀನಿವಾಸ, ಎಚ್.ಬಿ. ನಾಗರಾಜ, ದೊರೆರಾಜ್, ಜಿ.ಸಿ.ಮಂಜಪ್ಪ, ಉಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net