ಸೋನೆ ಮಳೆಯಲ್ಲೂ ಪುರಿ ಜಗನ್ನಾಥನ ರಥ ವೈಭವ

1000227364.jpg
Published on

ದಾವಣಗೆರೆ: ಒಂದೆಡೆ ಸೋನೆ ಮಳೆಯ ಸದ್ದು. ಇದಕ್ಕೆ ಪೈಪೋಟಿ ಒಡ್ಡುವಂತೆ ಹರೇ ಕೃಷ್ಣ, ಹರೇ ರಾಮ ಮಂತ್ರ ಪಠಿಸಿದ ಭಕ್ತರು ಇನ್ನೊಂದೆಡೆ. ನೃತ್ಯಕ್ಕೆ ಹೆಜ್ಜೆ ಹಾಕಿ ಭಾವಪರವಶವಾದ ಮಹಿಳಾ ಪಡೆ.
ದಾವಣಗೆರೆಯಲ್ಲಿ ಸೋಮವಾರ ಜರುಗಿದ ಪುರಿ ಜಗನ್ನಾಥ ರಥಯಾತ್ರೆಯ ಝಲಕ್ ಇದು. ಇಸ್ಕಾನ್ ಸಂಸ್ಥೆಯಿಂದ ಮೂರನೇ ಬಾರಿಗೆ ಆಯೋಜನೆಯಾಗಿದ್ದ ಯಾತ್ರೆ ಮಳೆಯ ಜತೆಜತೆಯಲ್ಲೇ ಸಾಗಿತು. ಭಕ್ತರು ಜರ್ಕಿನ್ ಧರಿಸಿ, ಕೊಡೆಗಳನ್ನು ಹಿಡಿದು ಹೆಜ್ಜೆ ಹಾಕಿದರು.
ಭಕ್ತರ ಸಹಕಾರದಿಂದ 11 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಅಶ್ವಾರೂಢ ನೂತನ ರಥದಲ್ಲಿ ಪುರಿ ಜಗನ್ನಾಥ, ಬಲರಾಮ ಹಾಗೂ ಸುಭದ್ರಾ ದೇವಿಯ ಪೂಜಾ ಮೂಲ ವಿಗ್ರಹಗಳನ್ನು ಕೂರಿಸಲಾಗಿತ್ತು. ಪೂಜೆ, ಮಹಾಮಂಗಳಾರತಿಯೊಂದಿಗೆ ಯಾತ್ರೆಗೆ ಚಾಲನೆ ನೀಡಲಾಯಿತು. ಸುಮಾರು ನಾಲ್ಕು ತಾಸಿಗೂ ಹೆಚ್ಚು ಕಾಲ ಅದ್ದೂರಿ ಮೆರವಣಿಗೆ ನಡೆಯಿತು.
ಮಂಡಿಪೇಟೆಯ ಶ್ರೀ ಕೋದಂಡರಾಮ ದೇವಸ್ಥಾನ ಬಳಿ ಆರಂಭವಾದ ರಥಯಾತ್ರೆ ಚಾಮರಾಜಪೇಟೆ ವೃತ್ತ, ಹಾಸಭಾವಿ ವೃತ್ತ, ಚೌಕಿಪೇಟೆ, ಹೊಂಡದ ವೃತ್ತ, ಕಿತ್ತೂರು ಚನ್ನಮ್ಮ ವೃತ್ತ, ಆರ್.ಎಚ್. ಛತ್ರ, ಜಯದೇವ ವೃತ್ತ, ವಿದ್ಯಾರ್ಥಿ ಭವನ ಮಾರ್ಗವಾಗಿ ಗುಂಡಿ ಮಹದೇವಪ್ಪ ವೃತ್ತದಲ್ಲಿ ಅಂತ್ಯಗೊಂಡಿತು.
ರಥೋತ್ಸವದ ಮುಂಭಾಗದಲ್ಲಿ ಪುರಿ ಜಗನ್ನಾಥ ಹಾಗೂ ಶ್ರೀರಾಮನ ಕಟೌಟ್‌ಗಳುಳ್ಳ ವಾಹನಗಳು ಸಾಗಿದವು. ಮಂಗಳವಾದ್ಯಗಳು ಮೊಳಗಿದವು. ಕೆಲವರು ತಲೆ ಮೇಲೆ  ಪುರಿ ಜಗನ್ನಾಥನ ಸಣ್ಣ ಮೂರ್ತಿಗಳನ್ನು ಹೊತ್ತು ನಡೆದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ರಥದಲ್ಲಿ ಸ್ವಾಮಿಯ ದರ್ಶನದಿಂದ ಮುಕ್ತಿ ಸಿಗುತ್ತದೆಂಬ ನಂಬಿಕೆಯಿದ್ದು  ಚಿತ್ರದುರ್ಗ, ಬಳ್ಳಾರಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಶಿವಮೊಗ್ಗ ಮೊದಲಾದ ಜಿಲ್ಲೆಗಳ ಭಕ್ತರು ಭಾಗಿಯಾಗಿದ್ದರು.
ಅಮೃತ ಕೃಷ್ಣ ದಾಸ್, ಕೃಷ್ಣ ಆಶ್ರಯದಾಸ್, ಪ್ರಿಯ ಗೌರಂಗದಾಸ್, ಶಂಕರ ಅರಣ್ಯದಾಸ್, ರಾಜನಾರಾಯಣ ದಾಸ್, ಶತಯೋಗಿ ದಾಸ್, ಸಮಾಜ ಸೇವಕ ಕೆ.ಬಿ. ಶಂಕರನಾರಾಯಣ್, ಪಾಲಿಕೆ ವಿಪಕ್ಷ ನಾಯಕ ಕೆ. ಪ್ರಸನ್ನ ಕುಮಾರ್, ಮಾಜಿ ಮೇಯರ್ ಎಸ್.ಟಿ. ವೀರೇಶ್, ಪಾಲಿಕೆ ಸದಸ್ಯ ಕೆ.ಎಂ. ವೀರೇಶ್, ರಥಯಾತ್ರಾ ಉತ್ಸವ ಸಮಿತಿಯ ಕಾರ್ಯದರ್ಶಿ ಕಾಸಲ್ ವಿ. ಬದರಿನಾಥ್, ಕಾಸಲ್ ಅಮರನಾಥ್, ಸತ್ಯನಾರಾಯಣಮೂರ್ತಿ, ಡಾ.ಎ.ಎಚ್.ಶಿವಯೋಗಿಸ್ವಾಮಿ ಹಾಗೂ ಸಮಿತಿ ಪದಾಧಿಕಾರಿಗಳಿದ್ದರು.
ದೈವಾನುಗ್ರಹಕ್ಕಾಗಿ ಮೆರವಣಿಗೆ
ರಥೋತ್ಸವ ಆರಂಭದಲ್ಲಿ ಮಾತನಾಡಿದ ಇಸ್ಕಾನ್ ಸಂಸ್ಥೆಯ ದಾವಣಗೆರೆ ಘಟಕದ ಮುಖ್ಯಸ್ಥ ಅವಧೂತ ಚಂದ್ರದಾಸ, ಪುರಿ ಜಗನ್ನಾಥ ಮೂಲ ಸ್ಥಳದಲ್ಲಿ ಪ್ರತಿ ವರ್ಷ ನಡೆಯುವ ರಥಯಾತ್ರೆಗೆ ಮಳೆ-ಚಳಿ ಲೆಕ್ಕಿಸದೆ ಸುಮಾರು 10ರಿಂದ 15 ಲಕ್ಷ ಜನರು ಭಾಗವಹಿಸುತ್ತಾರೆ. ದಾವಣಗೆರೆ ಜನರಿಗೂ ಇದರ ಅನುಗ್ರಹವಾಗಲಿ ಎಂಬ ಉದ್ದೇಶದಿಂದ ರಥಯಾತ್ರೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಇಂದು ಜನರು ಭಗವಂತನನ್ನು ಮರೆತಿದ್ದಾರೆ. ಪುರಿ ಜಗನ್ನಾಥ ದೇವರನ್ನು ಹೃದಯದಲ್ಲಿ ಮರು ಸ್ಥಾಪನೆ ಮಾಡಿ ಹೃದಯದಲ್ಲಿ ಬೃಂದಾವನ ಸೃಷ್ಟಿಸುವುದೇ ರಥೋತ್ಸವದ ಉದ್ದೇಶವಾಗಿದೆ. ಯಾತ್ರೆಯಲ್ಲಿ ಉತ್ಸವಮೂರ್ತಿ ಬದಲಾಗಿ ಮೂಲ ವಿಗ್ರಹಗಳನ್ನು ಕೂರಿಸುವುದು ವಿಶೇಷವಾಗಿದೆ. ಎಲ್ಲರೂ ದೇವರ ಕೃಪೆಗೆ ಪಾತ್ರರಾಗಿ ಎಂದು ವಿವರಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net