

ದಾವಣಗೆರೆ: ಹೊರವಲಯದ ಯರಗುಂಟೆಯ ಕರಿಬಸವೇಶ್ವರಸ್ವಾಮಿ ಗದ್ದಿಗೆ ಮಠದಿಂದ ನ. 29, 30 ರಂದು ಶ್ರೀ ಕರಿಬಸವೇಶ್ವರ ಸ್ವಾಮಿಯ ರಥೋತ್ಸವ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಠದ ಶ್ರೀ ಪರಮೇಶ್ವರ ಸ್ವಾಮೀಜಿ ತಿಳಿಸಿದರು.
14 ವರ್ಷಗಳಿಂದ ಕಾರ್ಯಕ್ರಮ ನಡೆಯುತ್ತಿದೆ. ಮಹಿಳೆಯರೇ ಈ ರಥ ಎಳೆಯುವುದು ವಿಶೇಷವಾಗಿದೆ. ನ. 30ರಂದು ಮಧ್ಯಾಹ್ನ 1 ಗಂಟೆಗೆ ಈ ರಥೋತ್ಸವ ಜರುಗಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನ.29ರಂದು ಬೆಳಗ್ಗೆ ವಿನಾಯಕ ಸ್ವಾಮಿ ಪೂಜೆಯೊಂದಿಗೆ ಧ್ವಜಾರೋಹಣ ನೆರವೇರಲಿದೆ. ನಂತರ ಗಣಪತಿ, ನವಗ್ರಹ ಪೂಜೆ, ರುದ್ರ ಹೋಮ, ಗೋಪೂಜೆ, ಮಹಾಮಂಗಳಾರತಿ ನಡೆಯಲಿದೆ. ರಾತ್ರಿ 8-30ಕ್ಕೆ ಅರಿಶಿಣದ ಎಣ್ಣೆ ಕಾರ್ಯಕ್ರಮ. 10 ಗಂಟೆಗೆ ಕೆ. ಬೇವಿನಳ್ಳಿಯ ಕಾಶಿ ವಿಶ್ವನಾಥ ಭಜನಾ ಸಂಘದಿಂದ ಭಜನೆ ನಡೆಯಲಿದೆ ಎಂದು ಹೇಳಿದರು.
ನ. 30ರಂದು ಬೆಳಗ್ಗೆ 6 ಗಂಟೆಗೆ ವೀರಭದ್ರಸ್ವಾಮಿ ಗುಗ್ಗಳವಿದೆ. ಬೆಳಗ್ಗೆ 10 ಗಂಟೆಗೆ ಧರ್ಮಸಭೆ ನಡೆಯಲಿದ್ದು, ಉಜ್ಜಿನಿ ಪೀಠದ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಸಾನಿಧ್ಯ ವಹಿಸುವರು. ಮುಸ್ಟೂರಿನ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ತಾವರಕೆರೆಯ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಚನ್ನಗಿರಿ ಹಿರೇಮಠದ ಕೇದಾರ ಲಿಂಗ ಶಿವಶಾಂತವೀರ ಸ್ವಾಮೀಜಿ, ಹಾಲಸ್ವಾಮಿ ವಿರಕ್ತಮಠದ ಡಾ. ಬಸವಜಯಚಂದ್ರ ಸ್ವಾಮೀಜಿ ಇತರರು ಸಮ್ಮುಖ ವಹಿಸುವರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕರಾದ ಶಾಮನೂರು ಶಿವಶಂಕರಪ್ಪ, ಬಿ.ಪಿ. ಹರೀಶ್, ಮಾಜಿ ಸಂಸದ ಡಾ.ಜಿ.ಎಂ. ಸಿದ್ದೇಶ್ವರ, ಗಾಯತ್ರಿ ಸಿದ್ದೇಶ್ವರ, ಜಿ.ಬಿ. ವಿನಯಕುಮಾರ್, ಎಚ್.ಸಿ. ಜಯಮ್ಮ, ಚೇತನಾ ಶಿವಕುಮಾರ್ ಇತರರು ಪಾಲ್ಗೊಳ್ಳುವರು. ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರಿಗೆ ಕರ್ನಾಟಕ ಚೇತನ ಪ್ರಶಸ್ತಿ ವಿತರಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸೇವಾ ಸಮಿತಿಯ ಅಧ್ಯಕ್ಷ ಟಿ.ಆರ್. ವಿಜಯ ಕುಮಾರ್, ಮಂಜುನಾಥ, ಎ.ಸಿ.ಕರಿಬಸಪ್ಪ, ಎನ್.ಎಸ್. ರಾಜು, ಎಸ್. ಸುರೇಖಾ, ಎಚ್.ಎಂ. ಸವಿತಾ, ಎಚ್.ಎಂ. ಸುನಿತಾ, ಸರೋಜಮ್ಮ, ರಾಕೇಶ್ ಪಾಟೀಲ್ ಇತರರಿದ್ದರು.