

ದಾವಣಗೆರೆ: ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ ಫೆ.22ರಂದು ಶ್ರೀ ಗುರುಬಸವೇಶ್ವರ ರಥೋತ್ಸವ ನಡೆಯಲಿದೆ. ಇದರ ಅಂಗವಾಗಿ ದಾವಣಗೆರೆಯಿಂದ ಪಾದಯಾತ್ರಿಗಳು 19ರಿಂದ ಯಾತ್ರೆ ತೆರಳುವರು ಎಂದು ಕೊಟ್ಟೂರು ಶ್ರೀ ಗುರುಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್ ಅಧ್ಯಕ್ಷ ಕಣಕುಪ್ಪಿ ಮುರುಗೇಶಪ್ಪ ತಿಳಿಸಿದರು.
46ನೇ ವರ್ಷದ ಪಾದಯಾತ್ರೆ ಇದಾಗಿದ್ದು, ವರ್ಷದಿಂದ ವರ್ಷಕ್ಕೆ ಯಾತ್ರಿಗಳ ಸಂಖ್ಯೆ ಹೆಚ್ಚಿದೆ. ದಾವಣಗೆರೆ ಅಲ್ಲದೆ ಹೊನ್ನಾಳಿ, ಚನ್ನಗಿರಿ, ಶಿವಮೊಗ್ಗ ಇತ್ಯಾದಿ ಕಡೆಗಳಿಂದಲೂ ಭಕ್ತರು ಬರಿಗಾಲಿನ ಯಾತ್ರೆಯಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಕೊಟ್ಟೂರು ಶ್ರೀ ಗುರುಬಸವ ರಾಜೇಂದ್ರಸ್ವಾಮಿ ಪಾದಯಾತ್ರೆ ಟ್ರಸ್ಟ್ ಅಧ್ಯಕ್ಷ ಕಣಕುಪ್ಪಿ ಮುರುಗೇಶಪ್ಪ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚೌಕಿಪೇಟೆಯ ಬಕ್ಕೇಶ್ವರ ದೇವಸ್ಥಾನದ ಆವರಣದಲ್ಲಿ ಫೆ.19ರ ಸಂಜೆ 5 ಗಂಟೆಗೆ ಪಾದಯಾತ್ರಿಗಳಿಗೆ ಬೀಳ್ಕೊಡುಗೆ ನಡೆಯಲಿದೆ. ಹೆಬ್ಬಾಳ್‌ನ ಮಹಾಂತ ರುದ್ರೇಶ್ವರ ಸ್ವಾಮೀಜಿ, ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ, ಅಯ್ಯನಹಳ್ಳಿಯ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಕೊಟ್ಟೂರು ಹಿರೇಮಠದ ಶಿವಪ್ರಕಾಶ ಸ್ವಾಮೀಜಿ, ಕೊಣಂದೂರಿನ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಟ್ರಸ್ಟ್‌ನ ಗೌರವಾಧ್ಯಕ್ಷ ಅಥಣಿ ಎಸ್. ವೀರಣ್ಣ ಅಧ್ಯಕ್ಷತೆ ವಹಿಸುವರು. ಶಾಸಕ ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ದೀಪ ಬೆಳಗಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಮೇಯರ್ ಚಮನ್‌ಸಾಬ್ ಭಾಗವಹಿಸಲಿದ್ದಾರೆ ಎಂದರು.
ಬಿ ಕಲಪನಹಳ್ಳಿ, ಬಿ. ಚಿತ್ತಾನಹಳ್ಳಿ. ಅಮೃತನಗರ, ಮಾಗಾನಹಳ್ಳಿ ಕೋಡಿಕ್ಯಾಂಪ್, ಜಂಬುಲಿಂಗನಹಳ್ಳಿ. ಸತ್ತೂರು, ಕಂಚಿಕೆರೆ, ಕಾವಲಹಳ್ಳಿ ಕ್ರಾಸ್, ತೌಡೂರು, ಅರಸೀಕೆರೆ, ಕಡಬಗೆರೆ, ಸಾಸ್ವಿಹಳ್ಳಿ, ಮತ್ತಿಹಳ್ಳಿ, ಕನ್ನಕಟ್ಟೆ, ಅಯ್ಯನಹಳ್ಳಿ ಮೂಲಕ ಕೊಟ್ಟೂರು ತಲುಪಲಾಗುವುದು. ಯಾತ್ರಿಗಳಿಗೆ ಮಾರ್ಗದಲ್ಲಿ ಭಕ್ತರಿಂದ ಉಪಾಹಾರ, ಊಟ, ಕುಡಿವ ನೀರು ಹಾಗೂ ಔಷಧೋಪಚಾರದ ವ್ಯವಸ್ಥೆ ಮಾಡಿದ್ದಾರೆ. ಯಾರೂ ಸಹ ಪ್ರಸಾದವನ್ನು ದಾರಿ ಮಧ್ಯೆ ಚೆಲ್ಲಬಾರದು ಎಂದು ಮನವಿ ಮಾಡಿದರು.
ಫೆ. 20ರಂದು ಸಂಜೆ 5 ಗಂಟೆಗೆ ಅರಸೀಕೆರೆಯ ಕೋಲಶಾಂತೇಶ್ವರ ವಿರಕ್ತಮಠದಲ್ಲಿ ಔಷಧೋಪಚಾರ ಸೇವೆಯ ಸಮಾರೋಪ ನಡೆಯಲಿದ್ದು, ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ, ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ, ಉದ್ಯಮಿ ಅಥಣಿ ವೀರಣ್ಣ, ಉಪ ಔಷಧ ನಿಯಂತ್ರಕ ಜಿ.ಪಿ.ರವಿಪ್ರಸಾದ್, ಡಾ.ಕೆ.ಸಿದ್ದಪ್ಪ, ಎಂ.ಎಸ್. ಗೀತಾ, ಎಸ್.ಆರ್. ಪ್ರಸನ್ನಕುಮಾರ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಯು. ಯೋಗೇಂದ್ರಕುಮಾರ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಕಾರ್ಯದರ್ಶಿ ಟಿ.ಜೆ. ಬಕ್ಕೇಶಪ್ಪ, ಖಜಾಂಚಿ ಮಲ್ಲಾಬಾದಿ ಗುರುಬಸವರಾಜ, ಕರಿಬಸಪ್ಪ, ವೀರೇಶ್, ಬುಸ್ನೂರು ಸುಜಾತಾ, ಟಿಂಕರ್ ಮಂಜಣ್ಣ ಇತರರಿದ್ದರು.