

ದಾವಣಗೆರೆ: ಭಾರತ ಸ್ವಾತಂತ್ರೃ ಅಮೃತ ಮಹೋತ್ಸವ ಆಚರಣೆ ಸವಿನೆನಪಿಗಾಗಿ, ಕೇಂದ್ರ ಸರ್ಕಾರದ ‘ಅಮೃತ ಸರೋವರ’ ಕಾರ್ಯಕ್ರಮದಡಿ, ದಾವಣಗೆರೆ ಜಿಪಂ ಜಿಲ್ಲೆಯ 160 ಕೆರೆಗಳ ಪುನರುಜ್ಜೀವನದ ಸಂಕಲ್ಪ ಮಾಡಿದೆ.
ಈ ಹಿಂದೆ 75 ಸಾಂಪ್ರದಾಯಿಕ ಜಲಮೂಲಗಳನ್ನು ಪುನಶ್ಚೇತನಗೊಳಿಸುವ ಇರಾದೆ ಇತ್ತು. ಅದರ ಪ್ರಮಾಣ ದ್ವಿಗುಣಗೊಳಿಸುವ ಸೂಚನೆ ಇದ್ದು, ಗುರಿ ರೇಖೆ ದಾಟಿ 160 ಕೆರೆಗಳ ಪುನಶ್ಚೇತನ ಕಾಮಗಾರಿ ಸದ್ದಿಲ್ಲದೇ ಸಾಗಿದೆ.
ನರೇಗಾ ಯೋಜನೆಯಡಿ ಕೈಗೊಳ್ಳಲಾದ ಈ ಕಾಮಗಾರಿ ವೆಚ್ಚ ಆಯಾ ಕೆರೆ ವ್ಯಾಪ್ತಿ ಮತ್ತು ಹೂಳಿನ ಮೇಲೆ ಆಧಾರಿತವಾಗಿದೆ. ಕನಿಷ್ಠ 5 ಲಕ್ಷ ರೂಪಾಯಿಯಿಂದ 40 ಲಕ್ಷ ರೂ.ವರೆಗೆ ಕಾಯಕಲ್ಪಗೊಳಿಸಿ ಸ್ಥಳೀಯ ಮಟ್ಟದಲ್ಲಿ ಜನ-ಜಾನುವಾರುಗಳಿಗೆ ನೀರು ಬಳಸುವ ಪ್ರಮುಖ ಉದ್ದೇಶ ಈ ಯೋಜನೆಯದ್ದು.
ಕೆಲವೆಡೆ ಮಾಜಿ ಸೈನಿಕರು, ಹುತಾತ್ಮರ ಕುಟುಂಬದ ಸದಸ್ಯರು ಧ್ವಜಾರೋಹಣ ಮಾಡಿದ್ದಾರೆ. ಇದೇ ವೇಳೆ ಜಲಸಂರಕ್ಷಣೆ ಜಾಗೃತಿಗಾಗಿ ಶಾಲಾ ಮಕ್ಕಳಿಗೆ ಪ್ರಬಂಧ, ಚಿತ್ರಕಲೆ ಹಾಗೂ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಸಹ ನಡೆಸಲಾಯಿತು.
ನೀರಿನ ಸಂರಕ್ಷಣೆ ಜತೆಗೆ ಬದುವಿನ ಸಾಮರ್ಥ್ಯ ಹೆಚ್ಚಿಸುವುದು, ಹೂಳೆತ್ತಿ ನೀರಿನ ಶೇಖರಣಾ ಸಾಮರ್ಥ್ಯ ವೃದ್ಧಿಸುವುದು, ಪೂರಕ ನಾಲೆಗಳ ಅಭಿವೃದ್ಧಿ, ಕೆರೆಯ ಪರ್ಯಾವರಣದಲ್ಲಿ ಸಸ್ಯೋದ್ಯಾನದ ಅಭಿವೃದ್ಧಿ, ತನ್ಮೂಲಕ ಪರಿಸರ ಸಮತೋಲನ ಕಾಯ್ದುಕೊಂಡು ಅಂತರ್ಜಲ ಹೆಚ್ಚಿಸುವುದು, ಪ್ರಾಣಿ-ಪಶು ಪಕ್ಷಿಗಳಿಗಾಗಿ ನೀರನ್ನು ಉಳಿಸುವುದು ಅಮೃತ ಸರೋವರ ಪರಿಕಲ್ಪನೆಯ ಮಹದೋದ್ದೇಶ.
ಅಮೃತ ಸರೋವರ ಕೆರೆಗಳ ಮಾದರಿಯೊಂದಿಗೆ ಅಂತರ್ಜಲ ಮೂಲಗಳನ್ನು ಅಭಿವೃದ್ಧಿ ಪಡಿಸುವುದು. ಮುಂಬರುವ ದಿನದಲ್ಲಿ ಗ್ರಾಮೀಣ ಜಲ ಭದ್ರತೆಗೆ ಧಕ್ಕೆಯಾಗದಂತೆ ಗಮನ ಹರಿಸುವತ್ತ ಯೋಜನೆ ಕೇಂದ್ರೀಕರಿಸಿದೆ.
ನೀರನ್ನೇ ಕಾಣದಿದ್ದ, ಜಗಳೂರು ತಾಲೂಕಿನ ಕೊಣಚಗಲ್ ಕಲ್ಯಾಣಿ ಕೂಡ ಇತ್ತೀಚೆಗೆ ಜನಾಕರ್ಷಣೆಯ ಜಲಪಾತ್ರೆಯಾಗಿದ್ದು ಈ ಯೋಜನೆ ಅನುಷ್ಠಾನದಿಂದಾದ ಗಮನಾರ್ಹ ಬದಲಾವಣೆ. ಮುಂಬರುವ ಸ್ವಾತಂತ್ರೃ ದಿನಾಚರಣೆ ಹೊತ್ತಿಗೆ ಉದ್ದೇಶಿತ ಕೆರೆಗಳಿಗೆ ಹೊಸ ರೂಪ ನೀಡುವ ಜಿಪಂ ಕನಸು ಸಾಕಾರಗೊಂಡಲ್ಲಿ ಜಲಮೂಲಗಳತ್ತ ಸಾಂಪ್ರದಾಯಿಕ ಹಬ್ಬಗಳ ಆಚರಣೆಯ ತಾಣವಾದರೂ ಅಚ್ಚರಿಯಿಲ್ಲ!