

ದಾವಣಗೆರೆ: ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯಿಂದ ನಗರದ ಚಿಗಟೇರಿ ಆಸ್ಪತ್ರೆಯಲ್ಲಿ ಸೆ.10 ರಂದು ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಡಾ.ಅಜಯ್ ಹೇಳಿದರು.
ಮಂಗಳವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ತಪಾಸಣಾ ಶಿಬಿರ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಿಬಿರದಲ್ಲಿ ಸ್ತನ, ಗರ್ಭಕೋಶ, ಅನ್ನನಾಳ, ಬಾಯಿ, ಕುತ್ತಿಗೆ ಮತ್ತು ಗಂಟಲು ಕ್ಯಾನ್ಸರ್ ತಪಾಸಣೆ ಮಾಡಲಾಗುವುದು. ವಿಶ್ವಾರಾಧ್ಯ ಆಸ್ಪತ್ರೆಯಲ್ಲಿ ಆಪರೇಷನ್, ಕಿಮೋ ಹಾಗೂ ರೇಡಿಯೋ ಥೆರಪಿ ಚಿಕಿತ್ಸೆ ಲಭ್ಯವಿದೆ ಎಂದರು.
ಅಲ್ಲದೇ ಸಿಜಿ ಆಸ್ಪತ್ರೆಯಲ್ಲಿ ಪ್ರತಿ ಸೋಮವಾರ ಕ್ಯಾನ್ಸರ್ ತಪಾಸಣೆಗೆ ಒಪಿಡಿ ತೆರೆಯಲಾಗಿದೆ. ಆಯುಷ್ಮಾನ್ ಭಾರತ್, ಯಶಸ್ವಿನಿ ಯೋಜನೆ ಹಾಗೂ ಇಎಸ್‌ಐ ಸೌಲಭ್ಯವನ್ನು ಆಸ್ಪತ್ರೆ ಒಳಗೊಂಡಿದೆ ಎಂದು ಹೇಳಿದರು.
ಡಾ.ಅಮಿತ್, ಡಾ.ತೇಜೇಶ್, ಡಾ.ವಿಘ್ನೇಶ್, ಮಂಜುನಾಥ್, ಸಂತೋಷ್ ಸುದ್ದಿಗೋಷ್ಠಿಯಲ್ಲಿದ್ದರು.