ಎಸ್‌ಎಸ್‌ಕೆ ಸಮಾಜಕ್ಕೆ ಸಿಎ ನಿವೇಶನ ಸಹಸಾರ್ಜುನ ಮಹಾರಾಜರ ಜಯಂತ್ಯುತ್ಸವ

1000494306.jpg
Published on

ದಾವಣಗೆರೆ: ದಾವಣಗೆರೆ-ಹರಿಹರ ಪ್ರಾಧಿಕಾರ ವ್ಯಾಪ್ತಿಯಲ್ಲಿ 11 ಸಿಎ ನಿವೇಶನಗಳಿದ್ದು ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದವರು ಅರ್ಜಿ ಸಲ್ಲಿಸಿದರೆ ಮಂಜೂರು ಮಾಡಿಸಿಕೊಡಲಾಗುವುದು ಎಂದು ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ ಭರವಸೆ ನೀಡಿದರು.
ಶ್ರೀ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದಿಂದ ನಗರದ ಶಂಕರಮಠದಲ್ಲಿ ಹಮ್ಮಿಕೊಂಡಿದ್ದ, ಶ್ರೀ ರಾಜರಾಜೇಶ್ವರ ಸಹಸ್ರಾರ್ಜುನ ಮಹಾರಾಜರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಎಲ್ಲ ಸಮಾಜಕ್ಕೂ ನಿವೇಶನ ಕಲ್ಪಿಸಿದ್ದಾರೆ. ಸಣ್ಣ ಸಮಾಜದವರಾದ  ಕ್ಷತ್ರಿಯರು ಅರ್ಜಿ ಸಲ್ಲಿಸಲಿ. ಮುಂದಿನ ದಿನದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಂದ ಭೂಮಿಪೂಜೆ ಮಾಡಿಸಲಿ ಎಂದರು.
ಕಿರಾಣಿ ಹಾಗೂ ಬಟ್ಟೆಯಂಗಡಿ ನಡೆಸುವ ಸಹಸ್ರಾರ್ಜುನ ಕ್ಷತ್ರಿಯ ಸಮಾಜದವರು ಕಷ್ಟ ಜೀವಿಗಳು. ಈ ಸಮುದಾಯ ಮತ್ತಷ್ಟು ಸಂಘಟನೆ ಆಗಬೇಕಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಮಕ್ಕಳು ಕೂಡ ಶಿಕ್ಷಣದ ಜತೆಗೆ ಕ್ರೀಡೆ, ಸಾಂಸ್ಕೃತಿಕ ಇನ್ನಿತರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕರೊನಾ ಅವಧಿಯಲ್ಲಿ ಕುಟುಂಬಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ ಶ್ರೇಯಸ್ಸು ಮಹಿಳೆಯರದು. ಇಂದಿನ ದಿನಗಳಲ್ಲೂ ಗೃಹಿಣಿಯರು ಮನೆಗಳಲ್ಲಿ ಸುಮ್ಮನೆ ಕೂರದೆ ಬಿಡುವಿನ ವೇಳೆಯಲ್ಲಿ ಔದ್ಯೋಗಿಕ ಚಟುವಟಿಕೆಗಳನ್ನು ನಡೆಸಬೇಕಿದೆ ಎಂದು ಸಲಹೆ ನೀಡಿದರು.
ಹುಬ್ಬಳ್ಳಿಯ ಸಂಗೀತಗಾರ ಪಂಡಿತ್ ಬಾಲಚಂದ್ರ ನಾಕೋಡ್ ಸಂಗೀತ ಗಾಯನದೊಂದಿಗೆ ರಂಜಿಸಿದರು. ನಂತರ ಮಾತನಾಡಿ, ಹುಬ್ಬಳ್ಳಿ-ಧಾರವಾಡ ಮೊದಲಾದೆಡೆ ಸಮಾಜದವರು ಅದ್ದೂರಿ ಮೆರವಣಿಗೆ ಮೂಲಕ ಸಹಸಾರ್ಜುನ ಮಹಾರಾಜರ ಜಯಂತ್ಯುತ್ಸವ ಆಚರಿಸುತ್ತಾರೆ. ಆದರೆ ದಾವಣಗೆರೆಯವರು ಅಚ್ಚುಕಟ್ಟಾದ ಕಾರ್ಯಕ್ರಮ ನಡೆಸುತ್ತಿರುವುದು ಮೆಚ್ಚುಗೆ ವಿಚಾರ ಎಂದರು.
ರಾಣೆಬೆನ್ನೂರಿನ ನಗರಸಭೆ ಸದಸ್ಯೆ ತ್ರಿವೇಣಿ ಎನ್. ಪವಾರ್ ಮಾತನಾಡಿ ಹಿಂದು ಧರ್ಮ, ಸಂಸ್ಕೃತಿ ಉಳಿಯಬೇಕಾದರೆ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚಬೇಕು ಎಂದು ಅಶಿಸಿದರು.
ಪ್ರಾಸ್ತಾವಿಕ ಮಾತನಾಡಿದ ಎಸ್‌ಎಸ್‌ಕೆ ಸಮಾಜದ ಜಿಲ್ಲಾ ಕಾರ್ಯದರ್ಶಿ ಮಹೇಶ್ ಸೋಳಂಕಿ ಮಾತನಾಡಿ ಕ್ರಿಸ್ತಪೂರ್ವ 2600ರ ಅವಧಿಯಲ್ಲಿದ್ದ ಸಹಸ್ರಾರ್ಜುನ ಮಹಾರಾಜರ ಶೌರ್ಯಕ್ಕೆ ಹೆಸರಾಗಿದ್ದರು. ಶತ್ರುಗಳು ಇವರಿಗೆ ಶರಣಾಗುತ್ತಿದ್ದರು. ಸಪ್ತ ಚಕ್ರವರ್ತಿಗಳಲ್ಲಿ ಒಬ್ಬರಾಗಿದ್ದರು ಎಂದು ಸ್ಮರಿಸಿದರು.
ಮಹಾಭಾರತ, ವಾಯುಪುರಾಣ ಗ್ರಂಥಗಳಲ್ಲಿ ಸಹಸ್ರಾರ್ಜುನ ಮಹಾರಾಜರ ಉಲ್ಲೇಖವಿದೆ. ಅವರ ಜಪ ಅಥವಾ 108 ಬಾರಿ ಪಾರಾಯಣ ಮಾಡಿದವರಿಗೆ ನಷ್ಟವಾದ ವಸ್ತುಗಳು ಮರಳುತ್ತವೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಎಸ್‌ಎಸ್‌ಕೆ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಾರಸಾ ಆರ್. ಕಾಟ್ವೆ, ಮಹಿಳಾ ಜಿಲ್ಲಾ ಘಟಕದ ಗೌರವಾಧ್ಯಕ್ಷೆ ಶುಭಾಂಜಲಿ ಕಠಾರೆ, ನಾಗರತ್ನಾ ಬದ್ದಿ, ಪ್ರವೀಣ್ ಕಾಟ್ವೆ ಇತರರಿದ್ದರು. ಗಿರೀಶ್ ಮೆಹರ‌್ವಾಡೆ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net