

ದಾವಣಗೆರೆ: ಭಾರತೀಯ ಯೋಧರು ಕಾರ್ಗಿಲ್ ಯುದ್ಧದಲ್ಲಿ ಗೆಲುವು ಸಾಧಿಸಿದ 25 ವರ್ಷದ ವಿಜಯೋತ್ಸವದ ಅಂಗವಾಗಿ ಪ್ರೇರಣಾ ಯುವ ಸಂಸ್ಥೆ ವತಿಯಿಂದ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಯಲ್ ಎನ್‌ಫೀಲ್ಡ್ ಬೈಕ್ ರ‌್ಯಾಲಿ ನೋಡುಗರ ಗಮನ ಸೆಳೆಯಿತು.
ರಾಯಲ್ ರ‌್ಯಾಲಿ ಫಾರ್ ರಾಯಲ್ ವಿಕ್ಟರಿ ಶೀರ್ಷಿಕೆಯಡಿ ಹಮ್ಮಿಕೊಂಡಿದ್ದ ಬೈಕ್ ಜಾಥಾಕ್ಕೆ ನಗರದ ಬಾಲಕರ ಸರ್ಕಾರಿ ಪ್ರೌಢಶಾಲೆ ಮೈದಾನ ಆವರಣದಲ್ಲಿ ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಚಾಲನೆ ನೀಡಿದರು. ಸೋನೆ ಮಳೆಯ ತುಂತುರಿನ ನಡುವೆಯೂ ರ‌್ಯಾಲಿ ಸಾಗಿತು.
ಜಯದೇವ ವೃತ್ತ, ಈರುಳ್ಳಿ ಮಾರುಕಟ್ಟೆ ವೃತ್ತ, ವೆಂಕಟೇಶ್ವರ ವೃತ್ತ, ಹಳೇಬೇತೂರು ರಸ್ತೆ, ಹಗೇದಿಬ್ಬ ರಸ್ತೆ, ದುರ್ಗಾಂಬಿಕಾ ದೇವಸ್ಥಾನ ರಸ್ತೆ, ವೀರಮದಕರಿನಾಯಕ ವೃತ್ತ, ಕಿತ್ತೂರು ಚನ್ನಮ್ಮ ವೃತ್ತ, ಎವಿಕೆ ಕಾಲೇಜು ರಸ್ತೆ, ಗುಂಡಿ ಮಹದೇವಪ್ಪ ವೃತ್ತ, ವಿದ್ಯಾನಗರ, ನೂತನ ಕಾಲೇಜು ರಸ್ತೆ, ಲಕ್ಷ್ಮಿಫ್ಲೋರ್ ಮಿಲ್ ಮೂಲಕ ಹಾದು ನಿಜಲಿಂಗಪ್ಪ ಬಡಾವಣೆಯ ಸೈನಿಕರ ಸ್ಮಾರಕ ಅಮರ್ ಜವಾನ್ ಉದ್ಯಾನದ ಬಳಿ ರ‌್ಯಾಲಿ ಅಂತ್ಯಗೊಂಡಿತು.
ಬೈಕ್ ಮೇಲೆ ಹಾಗೂ ಹಿಂಬದಿ ಸವಾರರ ಕೈಯಲ್ಲಿ ತ್ರಿವರ್ಣ ಧ್ವಜಗಳು ಹಾರಾಡಿದವು. ಭಾರತ್ ಮಾತಾಕೀ ಜೈ, ಹುತಾತ್ಮ ವೀರಯೋಧರಿಗೆ, ಕಾರ್ಗಿಲ್ ವೀರರಿಗೆ ಜಯವಾಗಲಿ, ಜಿಂದಾಬಾದ್ ಜಿಂದಾಬಾದ್ ಇಂಡಿಯನ್ ಆರ್ಮಿ ಜಿಂದಾಬಾದ್, ವಂದೇಮಾತರಂ, ಜೈ ಜವಾನ್ ಜೈ ಕಿಸಾನ್ ಮೊದಲಾದ ಘೋಷಣೆಗಳು ರಸ್ತೆಗಳಲ್ಲಿ ಮೊಳಗಿದವು.
ಮಾಜಿ ಯೋಧರಾದ ಮಂಜಾನಾಯ್ಕ, ಸುರೇಶ್, ಬೇತೂರು ಬಸಪ್ಪ, ಪ್ರೇರಣಾ ಯುವ ಸಂಸ್ಥೆ ಅಧ್ಯಕ್ಷ, ಮಾಜಿ ಮೇಯರ್ ಎಸ್.ಟಿ.ವೀರೇಶ್, ಪ್ರಧಾನ ಕಾರ್ಯದರ್ಶಿ ಮಹೇಶ್ ಶೆಟ್ಟಿ, ಎಸ್.ಬಿ.ಮಧು, ಗಣೇಶ್ ಕಿರಣ್, ಎನ್.ಕೆ. ಕರಿಬಸಪ್ಪ, ಬಸವರಾಜ್ ಅಂಗಡಿ, ಯೋಗೀಶ್,ಜಗದೀಶ್ ಇತರರು ಪಾಲ್ಗೊಂಡಿದ್ದರು.