ಸಿದ್ಧಗಂಗಾ ಕಾಲೇಜಿನಲ್ಲಿ ಮತಗಟ್ಟೆ ಸಿಬ್ಬಂದಿಗೆ ತರಬೇತಿ  ಪ್ರಶ್ನೆ ಕೇಳಿದ ಜಿಲ್ಲಾ ಚುನಾವಣಾ ವೀಕ್ಷಕಿ ಶ್ರೀಲಕ್ಷ್ಮಿ

1000104554.jpg
Published on

ದಾವಣಗೆರೆ: ಟೆಂಡರ್ ಹಾಗೂ ಚಾಲೆಂಜ್ ಮತಗಳಿರುವ ವ್ಯತ್ಯಾಸವೇನು? ಟೆಂಡರ್ ಮತವನ್ನು ಹೇಗೆ ದಾಖಲಿಸುತ್ತೀರಿ? ಮತದಾರನ ಬಗ್ಗೆ ಏಜೆಂಟರಿಂದ ಆಕ್ಷೇಪಣೆ ಬಂದಾಗ ಏನು ಮಾಡುತ್ತೀರಿ? ನಕಲಿ ಮತದಾರನನ್ನು ಹೇಗೆ ಗುರುತಿಸುತ್ತೀರಿ..?
ದಾವಣಗೆರೆಯ ಸಿದ್ಧ್ದಗಂಗಾ ಪಪೂ ಕಾಲೇಜಿನಲ್ಲಿ ಮಂಗಳವಾರ, ಮತಗಟ್ಟೆ ಅಧಿಕಾರಿಗಳಿಗೆ ಜಿಲ್ಲಾ ಚುನಾವಣಾ ವೀಕ್ಷಕಿ ಶ್ರೀಲಕ್ಷ್ಮಿ ಕೇಳಿದ ಪ್ರಶ್ನೆಗಳಿವು. ಲೋಕಸಭಾ ಚುನಾವಣೆ ಸಂಬಂಧ, ನಿಯೋಜಿತ ಮತಗಟ್ಟೆ ಅಧಿಕಾರಿ-ಸಿಬ್ಬಂದಿಗೆ ಆಯೋಜಿಸಿದ್ದ ತರಬೇತಿ ವೇಳೆ ಕೊಠಡಿಗೆ ಭೇಟಿ ನೀಡಿ ಸವಾಲುಗಳಿಗೆ ಉತ್ತರ ಪಡೆದರು.
ಮೈಕ್ ವ್ಯವಸ್ಥೆ ಇಲ್ಲದ್ದರಿಂದ ಸೆಕ್ಟರ್ ಅಧಿಕಾರಿಗಳು ಡಯಾಸ್‌ನಿಂದ ಕೆಳಗಿಳಿದು ಎಲ್ಲರಿಗೂ ಕೇಳುವಂತೆ ಮಾಹಿತಿ ನೀಡಲು ಸೂಚಿಸಿದರು. ತರಬೇತಿ ಜತೆಜತೆಗೆ ಪ್ರಶ್ನೆಗಳನ್ನು ಕೇಳಿದರೆ ಚುನಾವಣೆ ನಿರ್ವಹಣೆ ಸಲೀಸಾಗಲಿದೆ ಎಂದೂ ಸಲಹೆ ನೀಡಿದರು.
ದಾವಣಗೆರೆ ಉತ್ತರ ಕ್ಷೇತ್ರದ 1128 ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದ 996 ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡಲಾಯಿತು. ಮತದಾನದ ದಿನ ಮತ್ತು ಹಿಂದಿನ ದಿನ ವಹಿಸಬೇಕಾದ ಕರ್ತವ್ಯಗಳ ಕುರಿತಂತೆ 39 ಸೆಕ್ಟರ್ ಅಧಿಕಾರಿಗಳು ಮಾಹಿತಿ ನೀಡಿದರು. ಒಟ್ಟು ಆರು ಮಂದಿ ಮಾಸ್ಟರ್ ಟ್ರೈನರ್‌ಗಳು ಇವಿಎಂ ಮತಯಂತ್ರ ನಿರ್ವಹಣೆ ಕುರಿತಂತೆ ಕೆಲವು ಸಲಹೆಗಳನ್ನು ನೀಡಿದರು.
ಮತದಾನ ಪೂರ್ವದಲ್ಲಿ ಕಲ್ಪಿತ ಮತದಾನ ಹಾಗೂ ನಂತರ ವಾಸ್ತವಿಕ ಮತದಾನದ ಪ್ರಕ್ರಿಯೆಗಳು, ಮತದಾನ ಮುಗಿಯುವ ಹಂತದಲ್ಲಿ ವಹಿಸಬೇಕಾದ ಜವಾಬ್ದಾರಿಗಳು, ಮುಗಿದ ನಂತರದಲ್ಲಿ ಚಲಾವಣೆಯಾದ ಮತಗಳ ಬಗ್ಗೆ ತಾಳೆ ಹಾಕಿ ದಾಖಲೆ ವಹಿಗಳನ್ನು  ಚುನಾವಣಾಧಿಕಾರಿಗಳಿಗೆ ನೀಡಬೇಕು. ಹಾಗೂ ಇವಿಎಂ ಹಾಗೂ ವಿವಿ ಪ್ಯಾಟ್ ಯಂತ್ರಗಳನ್ನು ಕ್ಯಾರಿಯಿಂಗ್ ಕೇಸ್‌ನಲ್ಲಿರಿಸಿ ಸೀಲ್ ಮಾಡುವ ಕ್ರಮಗಳ ಬಗ್ಗೆ ವಿವರಣೆ ನೀಡಲಾಯಿತು.
ಮತದಾನ ದಿನದಂದು ಮತಗಟ್ಟೆಗಳಿಗೆ ಬರುವ ಹಿರಿಯ ಅಧಿಕಾರಿಗಳು, ಮೈಕ್ರೋ ಅಬ್ಸರ್‌ವರ್ ಎಲ್ಲರ ಹೆಸರು, ಪದನಾಮ ಹಾಗೂ ಸಹಿಯನ್ನು ಪಡೆದು ದಾಖಲೀಕರಿಸಬೇಕು. ಮತಗಟ್ಟೆಯಲ್ಲಿ ಮತಯಂತ್ರ ದೋಷ ಕಂಡುಬಂದಾಗ ಪರಿಹರಿಸಿಕೊಳ್ಳಲು ಸರಳವಾಗಲಿದೆ ಎಂದೂ ಸಲಹೆ ನೀಡಲಾಯಿತು.
ಸ್ಥಳಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಭೇಟಿ ನೀಡಿ ಕೆಲವು ಸಲಹೆ ಸೂಚನೆಗಳನ್ನು ನೀಡಿದರು. ಸಹಾಯಕ ಚುನಾವಣಾಧಿಕಾರಿಗಳಾದ ರೇಣುಕಾ, ಇಸ್ಮಾಯಿಲ್, ಸಂಯೋಜಕಿ ನಜ್ಮಾ ಇತರರಿದ್ದರು.
ಇದೇ ವೇಳೆ ಎರಡೂ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಆರು ಕಡೆ ಅಂಚೆ ಮತದಾನಕ್ಕೆ ಅವಕಾಶ ಮಾಡಲಾಗಿತ್ತು. ದಾವಣಗೆರೆ ಉತ್ತರ ಕ್ಷೇತ್ರದಲ್ಲಿ 81 ಅಂಚೆ ಮತಗಳ ಪೈಕಿ 29 ದಾಖಲಾದವು.
ಕೆಲವರು ಚುನಾವಣಾ ಕೆಲಸದಿಂದ ವಿಮುಕ್ತಿ ನೀಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದರು. ಆರೋಗ್ಯಾಧಿಕಾರಿಗಳ ಮೂಲಕ ಅವರ ಆರೋಗ್ಯ ತಪಾಸಣೆ ಮಾಡಿಸಲಾಯಿತು. ದಾವಣಗೆರೆ ಉತ್ತರ ಕ್ಷೇತ್ರದ ಮಹಿಳೆಯೊಬ್ಬರಿಗೆ ತೀವ್ರ ಆರೋಗ್ಯ ಸಮಸ್ಯೆ ಇರುವುದಾಗಿ ಹೇಳಿದಾಗ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕಳುಹಿಸಿ ತಪಾಸಣೆ ನಡೆಸಲಾಯಿತು. ತೀವ್ರ ಸಮಸ್ಯೆ ಇಲ್ಲದ್ದರಿಂದ ಮಾತ್ರೆ ನೀಡಿದ ಬಳಿಕ ತರಬೇತಿಗೆ ಹಾಜರಾದರು ಎಂದು ಅಧಿಕಾರಿಯೊಬ್ಬರು ವಿಜಯವಾಣಿಗೆ ಮಾಹಿತಿ ನೀಡಿದರು.
---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net