ವೃದ್ಧಾಶ್ರಮ ಸೇರುತ್ತಿರುವ ಹಳಗನ್ನಡ ಸಾಹಿತ್ಯ

1000518056.jpg
Published on

ದಾವಣಗೆರೆ: ಹಳಗನ್ನಡ ಸಾಹಿತ್ಯ ಇಂದು ವೃದ್ಧಾಶ್ರಮ ಸೇರುವ ದುಸ್ಥಿತಿಗೆ ಬಂದಿದೆ. ಇಂದಿನ ತಲೆಮಾರಿನವರು ಹಳಗನ್ನಡದ ಪದ್ಯಗಳನ್ನು ವೃದ್ಧರಂತೆಯೇ ಮೂಲೆಗುಂಪು ಮಾಡುತ್ತಿದ್ದಾರೆ ಎಂದು ಶಂಕರಘಟ್ಟದ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ. ಕುಮಾರಚಲ್ಯ ವಿಷಾದ ವ್ಯಕ್ತಪಡಿಸಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ, ಲೇಖಕ ಮಳಲ್ಕೆರೆ ಗುರುಮೂರ್ತಿ ವ್ಯಾಖ್ಯಾನಿಸಿರುವ ‘ಸೋಮೇಶ್ವರ ಶತಕ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
2 ಸಾವಿರ ವರ್ಷದಷ್ಟು ಹಳೆಯದಾದ ಕನ್ನಡ ಸಾಹಿತ್ಯವನ್ನು ನಾವಿಂದು ಪುರಸ್ಕರಿಸುತ್ತಿಲ್ಲ. ಹಳಗನ್ನಡ, ಮದ್ಯಕಾಲೀನ ಕನ್ನಡದಲ್ಲಿ ಕವಿಗಳು, ಷಟ್ಪದಿಕಾರರು, ವಚನಕಾರರು ಬಂದು ಹೋದರು. ಸಾಹಿತ್ಯದಲ್ಲಿ ಲೋಪವಿಲ್ಲ. ಅದನ್ನು ಅರ್ಥ ಮಾಡಿಕೊಂಡು ನಮ್ಮ ಮನೋಭೂಮಿಕೆಗೆ ನಾಟುವಂತೆ ಆಹ್ವಾನಿಸದಿರುವುದೇ ಓದುಗರ ದೌರ್ಬಲ್ಯ ಎಂದು ಹೇಳಿದರು.
ಗುರು-ಹಿರಿಯರಿಗೆ ಗೌರವಿಸದೆ ಕೇವಲ ಮೊಬೈಲ್‌ಗೆ ನಮಸ್ಕರಿಸುವ ಇಂದಿನ ಅಪಸವ್ಯದಲ್ಲಿ ನಾವಿದ್ದೇವೆ. ಕನ್ನಡ ವ್ಯಾಕರಣ, ಛಂದಸ್ಸು, ಅಲಂಕಾರ ಶಾಸ್ತ್ರ ಮತ್ತು ಹಳಗನ್ನಡವನ್ನು ಸರಿಯಾದ ಕ್ರಮ ಹಾಗೂ ಶಿಸ್ತುಬದ್ಧವಾಗಿ ಓದಿಕೊಂಡು ಪಾಠ ಮಾಡುವ ಅಧ್ಯಾಪಕರ ಸಂಖ್ಯೆ ಇಂದು ಕಡಿಮೆ ಆಗುತ್ತಿದೆ. ಪ್ರಾಧ್ಯಾಪಕರು ಮೂಲ ಪಠ್ಯವನ್ನು ಓದಿ ವಾಖ್ಯಾನ ಮಾಡುವ, ಬೋಧನೆ ಮಾಡದಿದ್ದರೆ ಮಕ್ಕಳಿಗೆ ಹಳಗನ್ನಡ ಅರ್ಥವಾಗುವುದಿಲ್ಲ ಎಂದು ಹೇಳಿದರು.
ಶಬ್ಧಾರ್ಥ ಸಹಿತವಾದುದೇ ಕಾವ್ಯ. ಕವಿ ಚಿತ್ರಿಸುವ ಚೆಲುವು ಅದು ಕಾವ್ಯದ ವ್ಯಾಪಾರ. ಪದ್ಯದ ಲಯ, ಅಲ್ಪವಿರಾಮ, ಪೂರ್ಣವಿರಾಮ ಇದನ್ನು ಓದುಗರು ಗ್ರಹಿಸಬೇಕು. ಕಾವ್ಯ ವಾಚನ ಎಂಬುದು ಪ್ರತಿಭೆ ಮತ್ತು ಪಾಂಡಿತ್ಯದ ಸಮ್ಮಿಲನವಾಗಿದೆ. ಕಾವ್ಯವನ್ನು ವ್ಯಾಖ್ಯಾನಿಸುವಾಗಲೂ ಎಚ್ಚರಿಕೆ ವಹಿಸುವ ಅಪರೂಪದ ಕೆಲಸವನ್ನು ಇಳಿವಯಸ್ಸಿನಲ್ಲೂ, ಲೇಖಕ ಮಳಲ್ಕೆರೆ ಗುರುಮೂರ್ತಿ ಮಾಡಿದ್ದಾರೆ ಎಂದು ತಿಳಿಸಿದರು.
ನಾವು ಓದುತ್ತಿರುವುದು 103 ವರ್ಷದಿಂದೀಚಿನ ಕನ್ನಡ ಸಾಹಿತ್ಯ. ನವೋದಯ, ಪ್ರಗತಿಶೀಲ, ನವ್ಯ, ನವ್ಯೋತ್ತರ, ದಲಿತ ಹಾಗೂ ಬಂಡಾಯ ಎಂಬುದಾಗಿ ಸಾಹಿತ್ಯವನ್ನು ಪ್ರತ್ಯೇಕಿಸಿಕೊಂಡಿದ್ದೇವೆ. ಇಂದು ಭಾಮಿನಿ (ಷಟ್ಪದಿ) ಬದಲಾಗಿ ಅನೇಕರು ಮಿನಿ ಕಾವ್ಯ ಕೇಳುತ್ತಿದ್ದಾರೆ.
ಹಲ್ಮಿಡಿ ಶಾಸನದ ಅವಧಿಯಿಂದಲೂ ಆರಂಭವಾದ ಕನ್ನಡ ಸಾಹಿತ್ಯ ರಚನೆಯನ್ನು ಚಾರಿತ್ರಿಕ ಪ್ರಜ್ಞೆಯಿಂದ ಓದದಿದ್ದಲ್ಲಿ ಮುಂದಿನ ತಲೆಮಾರಿಗೆ ಇದನ್ನು ತಲುಪಿಸುವುದು ಕಷ್ಟವಾಗಲಿದೆ. ಇದರ ಜವಾಬ್ದಾರಿಯನ್ನು ಕಸಾಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡಪರ ಸಂಘಟನೆಗಳು ಹೊರಬೇಕಿದೆ ಎಂದರು.
ಒಳರಾಜಕೀಯ, ಜಾತೀಯತೆ, ಗುಂಪುಗಾರಿಕೆ ಹಾಗೂ ಭ್ರಷ್ಟ್ಟಾಚಾರದಿಂದಾಗಿ ಅಧ್ಯಯನಶೀಲತೆ ಮರೀಚಿಕೆಯಾಗಿದ್ದು, ಯುವ ವಿದ್ವಾಂಸರು, ಅಧ್ಯಯನ ಸಂಸ್ಥೆಗಳು ಕಾಣಿಸುತ್ತಿಲ್ಲ. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಪರಂಪರೆ  ಉಳಿಯಲು ಏಕಾಗ್ರತೆ ಮತ್ತು ನೈಜ ಸಾಹಿತ್ಯ ಅಭಿರುಚಿಯುಳ್ಳ ಗುಂಪುಗಳು ಬೇಕೇ ಹೊರತು ಕಿರುಚುವವರು ಮತ್ತು ಅರಚುವವರಲ್ಲ ಎಂದು ಹೇಳಿದರು.
ಪ್ರಾಸ್ತಾವಿಕ ಮಾತನಾಡಿದ ಸಿರಿಗೆರೆ ನಾಗರಾಜ ಪ್ರಾಸ್ತಾವಿಕ ಮಾತನಾಡಿ, 4 ಸಾವಿರಕ್ಕೂ ಅಧಿಕ ತ್ರಿಪದಿಗಳನ್ನು ಬರೆದ ಮಳಲ್ಕೆರೆ ಗುರುಮೂರ್ತಿ ಅವರು, 16ನೇ ಶತಮಾನದ ಮಹಲಿಂಗರಂಗರನ್ನು ಬಿಟ್ಟರೆ ಷಟ್ಪದಿ ಹಾಗೂ ತ್ರಿಪದಿಗಳಲ್ಲಿ ಕಾವ್ಯ ಬರೆದವರಾಗಿದ್ದಾರೆ ಎಂದರು.
ಸಹ್ಯಾದ್ರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಹಾ.ಮ. ನಾಗರ್ಜುನ ಕೃತಿ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ. ಸಿ.ವಿ. ಪಾಟೀಲ್, ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ ಇದ್ದರು.
ಅಮೂಲ್ಯ ಎಸ್. ಕಟ್ಟಿ ಗಮಕ ವಾಚನ ಮಾಡಿದರೆ ಜಗನ್ನಾಥರಾವ್ ಅದರ ವ್ಯಾಖ್ಯಾನ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ, ತಾಲೂಕು ಘಟಕಗಳು, ಮೈಸೂರಿನ ಸಂವಹನ ಪ್ರಕಾಶನ, ಮಳಲ್ಕೆರೆ ಗುರುಮೂರ್ತಿ ಅಭಿಮಾನಿ ಬಳಗದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net