ವರ್ತಮಾನ ಸಮಸ್ಯೆಗೆ ಸ್ಪಂದಿಸುವ ಪುಸ್ತಕಗಳು  ಲಾಯರ್ಸ್‌ ರೆಡಿ ರೆಕನರ್ ಕೈಪಿಡಿ  ಬಿಡುಗಡೆ

dvg-book-aug-29.jpg
Published on

ದಾವಣಗೆರೆ: ಪುಸ್ತಕಗಳು ಜ್ಞಾನ ನೀಡುವ ಜತೆಗೆ ಸಮಾಜದ ಮುಖ್ಯವಾಹಿನಿಗೆ ಬರಲು ಮತ್ತು ವರ್ತಮಾನದ ಸಮಸ್ಯೆಗಳಿಗೆ ಸ್ಪಂದಿಸಲು ಸಹಕಾರಿ ಆಗಲಿವೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್.ಹೆಗಡೆ ಹೇಳಿದರು.
ಜಿಲ್ಲಾ ವಕೀಲರ ಸಂಘದ ಸಮುದಾಯ ಭವನದಲ್ಲಿ ಗುರುವಾರ, ವಕೀಲ ಕೆ. ದಾದಾಪೀರ್ ಬರೆದಿರುವ ‘ಲಾಯರ್ಸ್‌ ರೆಡಿ ರೆಕನರ್’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ಒಂದು ಒಳ್ಳೆಯ ಪುಸ್ತಕ ನೂರು ಸ್ನೇಹಿತರ ಮೌಲ್ಯ ಹೊಂದಿದೆ. ಲೋಕದ ಅಂದ ಪಡೆಯಲು ಅವಕಾಶ ನೀಡುವ ಪುಸ್ತಕಗಳು ಜ್ಞಾನ ಹೆಚ್ಚಿಸುತ್ತವೆ. ಪ್ರಪಂಚದ ಬಗ್ಗೆ ಹೊಸ ಮಾಹಿತಿ, ನೆಲದ ಕಾನೂನುಗಳ ಬಗ್ಗೆ ತಿಳಿಸಲಿವೆ. ಕಲಿಕೆಯ ನಿರಂತರ ಪ್ರಕ್ರಿಯೆಗೆ ಹಾಗೂ ಜೀವನದ ಗುರಿಗಳ ಸಾಧನೆಗೆ ಇವು ಅಗತ್ಯ ಎಂದು ಹೇಳಿದರು.
ಹಿರಿಯ ನ್ಯಾಯವಾದಿ ಲೇಖಕ ಕೆ. ದಾದಾಪೀರ್ ಮಾತನಾಡಿ, ನಾನು ಬರೆದ 222 ಪುಟದ ಪುಸ್ತಕದಲ್ಲಿ 20 ಕೇಂದ್ರದ ಅಧಿನಿಯಮಗಳು ಹಾಗೂ ಕರ್ನಾಟಕದ ಅಧಿನಿಯಮಗಳ ಪರಿಚಯ ನೀಡಲಾಗಿದೆ. ಬೆಂಗಳೂರಿನ ಪ್ರೀಮಿಯರ್ ಬುಕ್ ಹೌಸ್ ಇದನ್ನು ಪ್ರಕಟಿಸಿದೆ ಎಂದರು.
ಮೊಬೈಲ್‌ನಲ್ಲಿ ಗೂಗಲ್ ವೀಕ್ಷಣೆ ಬದಿಗಿಟ್ಟು, ಪುಸ್ತಕ ಓದುವ ಆನಂದ ಅನುಭವಿಸಿ, ಜ್ಞಾನ ಸಂಪನ್ನರಾಗಬೇಕು. ಆಳ ಅಧ್ಯಯನದಿಂದ ವಾಸ್ತವಾಂಶಗಳನ್ನು ಸರಿಯಾಗಿ ಮತ್ತು ಸುಲಲಿತವಾಗಿ ನ್ಯಾಯಾಲಯದಲ್ಲಿ ಮಂಡಿಸಿ, ಮನದಟ್ಟು ಮಾಡಲು ಕಾನೂನು ಪುಸ್ತಕಗಳ ಅಭ್ಯಾಸ ನಿರಂತರವಾಗಿರಬೇಕೆಂದು ತಿಳಿಸಿದರು.
ವಕೀಲರ ಸಂಘದ ಜಿಲ್ಲಾಧ್ಯಕ್ಷ  ಎಲ್.ಎಚ್. ಅರುಣ್‌ಕುಮಾರ್ ಮಾತನಾಡಿ, ಪುಸ್ತಕಗಳನ್ನು ನಮ್ಮನ್ನು ಒಂಟಿತನದ ಪ್ರಪಂಚದಿಂದ ಹೊರತರುವ ಅತ್ಯುತ್ತಮ ಒಡನಾಡಿಗಳಾಗಿವೆ.  ಒಂದು ದೇಶದ ಇತಿಹಾಸ, ಪರಂಪರೆ, ಸಂಸ್ಕೃತಿ ಮತ್ತು ಜೀವನ ಮೌಲ್ಯವನ್ನು ತಿಳಿಯಲು ಪುಸ್ತಕಗಳು ಸಹಕಾರಿಯಾಗಿವೆ. ಇವು ವಕೀಲರ ಅವಿಭಾಜ್ಯ ಅಂಗಗಳಾಗಿವೆ ಎಂದರು.  
ಕಾರ್ಯಕ್ರಮದಲ್ಲಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್.ಎನ್. ಪ್ರವೀಣ್‌ಕುಮಾರ್, ಮಕ್ಕಳಸ್ನೇಹಿ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ಶ್ರೀರಾಮ ನಾರಾಯಣ ಹೆಗಡೆ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಟಿ.ಎಂ.ನಿವೇದಿತಾ, ವಕೀಲರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯೆ ಆರ್. ಭಾಗ್ಯಲಕ್ಷ್ಮೀ, ಕೆ.ಎಂ. ನೀಲಕಂಠಯ್ಯ, ಜಿ.ಜೆ. ಸಂತೋಷ್‌ಕುಮಾರ್, ಆರ್.ಚೌಡಪ್ಪ, ಎಲ್. ನಾಗರಾಜ್, ಟಿ.ಎಚ್.ಮದುಸೂಧನ್, ಕೆ.ಎಂ. ರಾಘವೇಂದ್ರ ಇದ್ದರು.
ಸಿಬ್ಬಂದಿ ವಿ.ಟಿ. ಅನಿತಾ ಪ್ರಾರ್ಥನೆ ಗೀತೆ ಹಾಡಿದರು. ವಕೀಲರ ಸಂಘದ ಉಪಾಧ್ಯಕ್ಷ ಜಿ.ಕೆ. ಬಸವರಾಜ್ ಗೋಪನಾಳ್ ಸ್ವಾಗತಿಸಿದರು. ಕಾರ್ಯದರ್ಶಿ ಎಸ್. ಬಸವರಾಜ್ ನಿರೂಪಿಸಿದರು. ಸಹಕಾರ್ಯದರ್ಶಿ ಎ.ಎಸ್. ಮಂಜುನಾಥ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net