

ದಾವಣಗೆರೆ: ಪುಸ್ತಕ ಓದುವುದರಿಂದ ಜ್ಞಾನ ವಿಸ್ತಾರದ ಜತೆಗೆ ಬದುಕಿನಲ್ಲಿ ಸಾರ್ಥಕತೆ ಸಿಗಲಿದೆ ಎಂದು ಜಗದ್ಗುರು ಜಯವಿಭವ ವಿದ್ಯಾಸಂಸ್ಥೆ ಕಾರ್ಯದರ್ಶಿ ಸೌಮ್ಯಾ ಬಸವರಾಜ್ ಹೇಳಿದರು.
ವಿನೋಬ ನಗರದ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಗತ್ತಿನಲ್ಲಿ ವಿಶ್ವವಿದ್ಯಾಲಯ ಎಂಬ ಪರಿಕಲ್ಪನೆಯೇ ಇಲ್ಲದ ಕಾಲಘಟ್ಟದಲ್ಲಿ ಭಾರತದ ನಳಂದ ವಿವಿ ಖ್ಯಾತಿ ಪಡೆಯಿತು. 16 ಸಾವಿರ ಗ್ರಂಥಗಳನ್ನು ಹೊಂದಿದ್ದ ಈ ವಿವಿಯು ವಿಶ್ವದ ಜ್ಞಾನದ ಬೆಳಕಾಯಿತು. ಜೀವನದುದ್ದಕ್ಕೂ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಿ ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಮನೋಹರ ಚಿಗಟೇರಿ ಮಾತನಾಡಿ ಶ್ರದ್ಧೆಯಿಂದ ಕಲಿತು ಉತ್ತಮ ಅಂಕ ಪಡೆದರೆ ಸಮಾಜದಲ್ಲಿ ಗೌರವ ಸಿಗಲಿದೆ ಎಂದು ತಿಳಿಸಿದರು.
ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಶಾಲೆಯ ಮುಖ್ಯಶಿಕ್ಷಕ ಎಸ್.ನಾಗರಾಜ, ಮುಖ್ಯ ಅತಿಥಿಗಳಾಗಿ ಎಸ್.ಸಿ.ಶಂಕರಮೂರ್ತಿ, ಎಸ್.ವಿ.ಎಂ.ಸಿ. ಶಾಲೆಯ ಮುಖ್ಯ ಶಿಕ್ಷಕಿ ಎಸ್.ಎಂ. ಶೈಲಜಾ, ಶೈಕ್ಷಣಿಕ ಸಲಹೆಗಾರ್ತಿ ಆರ್.ವಾಗ್ದೇವಿ, ಸುರೇಶ್‌ಣಾಯ್ಕ, ಎಸ್.ವಿ. ನಾಗರಾಜ ಇತರರಿದ್ದರು. ಶಾಂತಯ್ಯ ಪರಡಿಮಠ ಕಾರ್ಯಕ್ರಮ ನಿರ್ವಹಿಸಿದರು. ಎಚ್.ಬಿ. ಜ್ಯೋತಿ ಸ್ವಾಗತಿಸಿದರು. ಪಿ. ಅನಿತಾ ವಂದಿಸಿದರು.
ನೂತನ ಸಾಲಿನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ ಹೇಮಯ್ಯ ಮಠಪತಿ, ಸಹ ಕಾರ್ಯದರ್ಶಿಗಳಾಗಿ ವಿ.ಅನುಷಾ, ಕ್ರೀಡಾ ಕಾರ್ಯದರ್ಶಿಯಾಗಿ ಧನುಷ್, ಗ್ರಂಥಾಲಯದ ಕಾರ್ಯದರ್ಶಿಯಾಗಿ ಕಾರ್ತಿಕ್ ಬೊಂಗಾಳೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸ್ಪಂದನಾ, ಪರಿಸರ ಕಾರ್ಯದರ್ಶಿಯಾಗಿ ಅರ್ಜುನ, ಆರೋಗ್ಯ ಹಾಗೂ ಶಿಸ್ತು ಕಾರ್ಯದರ್ಶಿಯಾಗಿ ಸೌಜನ್ಯಾ, ಪ್ರವಾಸ ಕಾರ್ಯದರ್ಶಿಯಾಗಿ ಸಿ. ನೂತನಾ ಆಯ್ಕೆಯಾದರು.