

ದಾವಣಗೆರೆ: ತುರ್ತು ಸಂದರ್ಭದಲ್ಲಿ ಜೀವಗಳನ್ನು ಉಳಿಸಲು ರಕ್ತದ ಅವಶ್ಯಕತೆ ಇದೆ. ಇದನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ, ಹಾಗಾಗಿ ವರ್ಷಕ್ಕೆ ಕನಿಷ್ಠ ಒಂದು ಬಾರಿಯಾದರೂ ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆಯಬೇಕೆಂದು ಆಡಳಿತ ವೈದ್ಯಾಧಿಕಾರಿ ಡಾ.ಗೀತಾ ಹೇಳಿದರು.
ಇಲ್ಲಿನ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ರಕ್ತದಾನದ ಜಾಗೃತಿ ಭಾಗವಾಗಿ 2005ರಿಂದ ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತದೆ. ದಾನದಲ್ಲಿ ರಕ್ತದಾನವೇ ಶ್ರೇಷ್ಠವಾದುದು. ಎಲ್ಲರೂ ಇದರ ಮಹತ್ವ ಅರಿತು ರಕ್ತದಾನಕ್ಕೆ ಮುಂದಾಗಬೇಕು ಎಂದರು.
ರಕ್ತದಾನ ಮಾಡುವವರು ಆರೋಗ್ಯವಂತರಾಗಿರುತ್ತಾರೆ. ಅಪಘಾತ ದಿಂದಾಗಿ ಚಿಕಿತ್ಸೆ ಪಡೆಯುವವರು, ಗರ್ಭಿಣಿಯರಿಗೆ ತುರ್ತಾಗಿ ರಕ್ತ ಬೇಕಾಗಲಿದೆ. 18 ರಿಂದ 60 ರ ವಯೋಮಾನದವರು ವರ್ಷಕ್ಕೊಮ್ಮೆ ರಕ್ತದಾನ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಅಪಘಾತ, ಪ್ರಕೃತಿ ವಿಕೋಪ, ಪ್ರಸೂತಿ ಹಾಗೂ ಸ್ತ್ರೀರೋಗ ಶಸ್ತ್ರಚಿಕಿತ್ಸೆಗಳ ತುರ್ತು ಸಂದರ್ಭದಲ್ಲಿ ಹಾಗೂ ರಕ್ತಸಂಬಂಧಿ ಕಾಯಿಲೆಗಳಾದ ಥಲಸೀಮಿಯಾ, ಹಿಮೋಫಿಲಿಯಾ, ಸಿಕಲ್ಸೆಲ್, ಅನಿಮೀಯಾ ಮೊದಲಾದ ಸಮಯದಲ್ಲಿ ರಕ್ತದ ಅನಿವಾರ್ಯತೆ ಇದೆ. ನವಜಾತ ಶಿಶುಗಳಿಂದ ಹಿರಿಯರವರೆಗೆ ಎಲ್ಲಾ ವಯೋಮಾನದವರಿಗೂ ಸುರಕ್ಷಿತ ರಕ್ತದ ಅವಶ್ಯಕತೆ ಇರುತ್ತದೆ. ಆಗ ರಕ್ತದಾನಿಯೊಬ್ಬನೇ ಆಪದ್ಬಾಂಧವನಾಗಬಲ್ಲ ಎಂದು ವಿವರಿಸಿದರು.
ಇದಕ್ಕೂ ಮುನ್ನ ಜಾಥಾಕ್ಕೆ ಹಸಿರುನಿಶಾನೆ ತೋರಿ ಚಾಲನೆ ನೀಡಿದ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ.ಮ.ಕರೆಣ್ಣವರ ಮಾತನಾಡಿ, ರಕ್ತದಾನದಿಂದ ಹೃದಯಾಘಾತದ ಸಂಭವ ಹಾಗೂ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ಹೊಸ ರಕ್ತ ಉತ್ಪಾದನೆಗೊಂಡು, ಚುರುಕುತನ, ಜ್ಞಾಪನಶಕ್ತಿ ವೃದ್ಧಿಯಾಗಲಿದೆ. ಪುರುಷರು 3 ತಿಂಗಳಿಗೊಮ್ಮೆ, ಹೆಂಗಸರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದು ಹೇಳಿದರು.
ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣದಿಂದ ಆರಂಭವಾದ ಜಾಥಾ ವಿದ್ಯಾರ್ಥಿಭವನ ವೃತ್ತ, ಅಂಬೇಡ್ಕರ್ ವೃತ್ತ, ಚೇತನ ಹೋಟೆಲ್ ರಸ್ತೆ, ಮೋತಿ ವೀರಪ್ಪ ಕಾಲೇಜು ರಸ್ತೆ ಮೂಲಕ ಸಿ.ಜಿ.ಆಸ್ಪತ್ರೆಗೆ ಮರಳಿತು.
ಕಾರ್ಯಕ್ರಮದಲ್ಲಿ ಸ್ವಯಂಪ್ರೇರಿತ ರಕ್ತದಾನಿಗಳಿಗೆ ಪ್ರಮಾಣಪತ್ರ ನೀಡಲಾಯಿತು. ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್, ಡಿಎಚ್‌ಒ ಡಾ. ಷಣ್ಮುಖಪ್ಪ, ಜಿಲ್ಲಾಸ್ಪತ್ರೆ ಅಧೀಕ್ಷಕ ಡಾ.ನಾಗೇಂದ್ರಪ್ಪ, ಆರ್‌ಸಿಎಚ್ ಅಧಿಕಾರಿ ಡಾ. ರೇಣುಕಾರಾಧ್ಯ, ಹೆರಿಗೆ ಆಸ್ಪತ್ರೆ ಅಧೀಕ್ಷಕ ಡಾ.ಮಧು, ನಿವಾಸಿ ವೈದ್ಯಾಧಿಕಾರಿ ಡಾ.ಮುರುಳೀಧರ್, ತಾಲೂಕು ಆರೋಗ್ಯಾಧಿಕಾರಿ ಡಾ.ದೇವರಾಜ್, ಸ್ವಯಂಪ್ರೇರಿತ ರಕ್ತದಾನಿಗಳು, ಶುಶ್ರೂಷಕ ಕಾಲೇಜಿನ ವಿದ್ಯಾರ್ಥಿಗಳಿದ್ದರು.
ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಏಡ್ಸ್ ನಿಯಂತ್ರಣ ಸಂಸ್ಥೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಜಿಲ್ಲೆಯ ವಿವಿಧ ರಕ್ತ ಕೇಂದ್ರಗಳು, ವಿವಿಧ ಸ್ವಯಂ ಸೇವಾ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆಯಾಗಿತ್ತು.
-------------