

ಡಿ.ಎಂ.ಮಹೇಶ್, ದಾವಣಗೆರೆ
ದಾವಣಗೆರೆ ಲೋಕಸಭಾ ಕ್ಷೇತ್ರದ ಮತದಾನಕ್ಕೆ ಇನ್ನು 16 ದಿನ ಬಾಕಿ ಇದೆ. ಪ್ರಬಲ ಪಕ್ಷ, ಪಕ್ಷೇತರರು ಗೆಲುವಿಗೆ ತಂತ್ರ- ಪ್ರತಿತಂತ್ರ ಹೆಣೆಯುತ್ತಿದ್ದಾರೆ. ಆದರೆ ಮತದಾನ ಪ್ರಮಾಣ ಹೆಚ್ಚಿಸುವತ್ತ ಜಿಲ್ಲಾ ಸ್ವೀಪ್ ಸಮಿತಿ ಕಣ್ಣಾಯಿಸಿದೆ.
2019ನೇ ಸಾಲಿನ ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಶೇ.72.96ರಷ್ಟು ಸರಾಸರಿ ಮತದಾನ ನಡೆದಿತ್ತು. ಆಯಾ ವಿಧಾನಸಭಾ ಕ್ಷೇತ್ರವಾರು ಸಲ್ಲಿಕೆಯಾದ ಸರಾಸರಿ ಮತದಾನದ ಶೇ.10ರಷ್ಟು ಕಡಿಮೆ ಮತ ಪಡೆದ 135 ಮತಗಟ್ಟೆಗಳನ್ನು ಗುರುತಿಸಿ ವೋಟಿಂಗ್ ಅರಿವು ಮೂಡಿಸುವ ಪ್ರಯತ್ನ ನಡೆದಿದೆ.
ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಮೈಕ್ರೋ ಹಂತದಲ್ಲಿ ಮತದಾರರನ್ನು ಮತಗಟ್ಟೆ ಕೇಂದ್ರಗಳತ್ತ ತರುವ ಪ್ರಯತ್ನ ಸ್ವೀಪ್ ಸಮಿತಿಯಿಂದ ನಡೆದಿದೆ. ಗುರುತಿಸಲಾದ ಮತಗಟ್ಟೆ ಕೇಂದ್ರಗಳ ಪೈಕಿ 102 ಗ್ರಾಮಾಂತರ, 33 ನಗರ ಪ್ರದೇಶಗಳದ್ದಾಗಿವೆ.
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 65.71, ದಾವಣಗೆರೆ ದಕ್ಷಿಣದಲ್ಲಿ 65.93, ಜಗಳೂರು- 73.36, ಚನ್ನಗಿರಿ- 73.73, ಹರಿಹರ- 74.41, ಮಾಯಕೊಂಡ- 77.61, ಹೊನ್ನಾಳಿ- 79.35ರಷ್ಟು ಮತದಾನವಾಗಿತ್ತು. ಆಯಾ ಕ್ಷೇತ್ರದ ಸರಾಸರಿ ಮತದಾನದಲ್ಲಿ ಶೇ.10ರಷ್ಟು ಕಡಿಮೆ ಮತ ಗಳಿಸಿದ ಬೂತ್ಗಳನ್ನು ಕೇಂದ್ರೀಕರಿಸಲಾಗುತ್ತಿದೆ.
ಗುರುತಿಸಲಾದ 135 ಮತಗಟ್ಟೆವಾರು ಕಳೆದ ಬಾರಿ ಎಷ್ಟು ಮಂದಿ ಮತದಾರರು ಗೈರು ಹಾಜರಾಗಿದ್ದರು, ಬಾಡಿಗೆ ಮನೆ ಅಥವಾ ಉದ್ಯೋಗದ ಕಾರಣಕ್ಕೆ ಸ್ಥಳಾಂತರಗೊಂಡವರ ವಿವರ ಕಲೆ ಹಾಕಿ ಅವರನ್ನು ಮೇ. 7ರ ಮತದಾನ ದಿನದಂದು ಹಾಜರಾಗುವಂತೆ ಮನವೊಲಿಸಲು ಹಾಗೂ ಮತದಾನ ಜಾಗೃತಿ ಕಾರ್ಯಕ್ರಮ ರೂಪಿಸಲು ಎಲ್ಲ ಕ್ಷೇತ್ರದ ಬಿಎಲ್ಒಗಳಿಗೆ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್ ಹೊಸ ಟಾಸ್ಕ್ ನೀಡಿದ್ದಾರೆ.
ಮತಪಟ್ಟಿಯಲ್ಲಿ ತೋರಿಸಲಾದ ವಿಳಾಸದಲ್ಲಿರದೆ ಸ್ಥಳಾಂತರವಾದವರು, ಗೈರು ಹಾಜರಾದ ಪ್ರತಿ ಮತದಾರರ ಮೊಬೈಲ್ ನಂಬರ್ ಕಲೆ ಹಾಕಿರುವ ಬಿಎಲ್ಒಗಳು ಕರೆ ಮಾಡಿ ‘ಮೇ. 7ರಂದು ದಾವಣಗೆರೆ ಜಿಲ್ಲೆಯಲ್ಲಿ ಮತದಾನ ನಡೆಯಲಿದ್ದು ನಿಮ್ಮ ಮತಗಟ್ಟೆಗೆ ಬಂದು ಮತದಾನ ಮಾಡಿ’ ಎಂದು ಹೇಳುತ್ತಿದ್ದಾರೆ. ಕೆಲವರಿಗೆ ವಾಟ್ಸಾೃಪ್ ಸಂದೇಶ ರವಾನಿಸುತ್ತಿದ್ದಾರೆ. ಕೆಲವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ವಲಸೆ ಹೋದವರ ದೂರವಾಣಿ ಸಂಖ್ಯೆ ನೀಡಲು ಹಿಂದೇಟು ಹಾಕಿರುವ ಕೆಲ ಕುಟುಂಬದವರು ತಾವೇ ಅವರಿಗೆ ಮತದಾನ ದಿನದಂದು ಮತ ಹಾಕಲು ತಿಳಿಸುವುದಾಗಿಯೂ ಹೇಳಿದವರಿದ್ದಾರೆ. ಕಳೆದ ಮೂರು ವಾರದಿಂದ ಈ ಕಾರ್ಯ ಚಾಲ್ತಿಯಲ್ಲಿದ್ದು ಬಿಎಲ್ಒಗಳು ತಾವು ಸಂಪರ್ಕಿಸಿದ ಮತದಾರರ ಮೊಬೈಲ್ ನಂಬರ್ ಸಹಿತ ಸ್ವೀಪ್ ಸಮಿತಿಗೆ ಕಾಲಕಾಲಕ್ಕೆ ವಿವರಣೆ ನೀಡುತ್ತಿದ್ದಾರೆ.
ಕಾರ್ಯಕ್ರಮಗಳ ಪ್ಯಾಕೇಜ್
ಯುವ ಮತದಾರರು, ಮಧ್ಯ ವಯಸ್ಕರು, ಮಹಿಳೆಯರು, ಹಿರಿಯ ನಾಗರಿಕರು, ವಿಕಲಾಂಗರು ಸೇರಿ ಎಲ್ಲ ವರ್ಗದ ಮತದಾರರನ್ನೂ ಸೆಳೆಯುವ ಅಂಗವಾಗಿ ಸ್ವೀಪ್ ಸಮಿತಿ ಜಿಲ್ಲೆಯಲ್ಲಿ 60ಕ್ಕೂ ಹೆಚ್ಚು ವಿಶೇಷ ಮತಗಟ್ಟೆಗಳನ್ನು ತೆರೆಯಲು ಪ್ರಯತ್ನ ನಡೆಸಿದೆ. ಯುವ ಮತಗಟ್ಟೆ, ಸಖಿ, ಅಂಗವಿಕಲಸ್ನೇಹಿ, ಸಾಂಪ್ರದಾಯಿಕ, ವಿಷಯಾಧಾರಿತ ಮತಗಟ್ಟೆಗಳನ್ನು ಕನಿಷ್ಠ ಸೌಲಭ್ಯದ ಭರವಸೆಯೊಂದಿಗೆ ಸ್ಥಾಪಿಸಲು ಯೋಜಿಸಲಾಗುತ್ತಿದೆ.
ಇದಲ್ಲದೆ ಮ್ಯಾರಥಾನ್, ಹಾಟ್ ಏರ್ ಬಲೂನ್, ಭಾರತದ ಭೂಪಟ ರಚನೆ ಸೇರಿ ಹಲವಾರು ಮತದಾನ ಜಾಗೃತಿ ಕಾರ್ಯಕ್ರಮ ನಡೆಸಿರುವ ಸ್ವೀಪ್ ಸಮಿತಿ, ಫ್ಯಾಷನ್ ಶೋ, ವಿವಿಧ ಪಂದ್ಯಾವಳಿ, ಸೈಕಲ್ ಜಾಥಾ, ಕವಾಲಿ, ಕ್ವಿಜ್, ರೀಲ್ಸ್ ಸ್ಪರ್ಧೆ, ಸಾಹಸ ಕ್ರೀಡೆಗಳು, ಯೋಗಾಸನ ಸೇರಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವ ಇರಾದೆ ಸ್ವೀಪ್ ಸಮಿತಿಯದು.
23ರಂದು ಸಂಗೀತ ಸಂಜೆ
ನಗರದ ಅಭಿನವ ರೇಣುಕ ಮಂದಿರದಲ್ಲಿ ಏ.23ರ ಸಂಜೆ 5 ಗಂಟೆಗೆ ಮತದಾನೋತ್ಸವದ ಅಂಗವಾಗಿ ಸಂಗೀತ ಸಂಜೆ ಆಯೋಜಿಸಲಾಗಿದೆ. ಮತದಾನ ಜಾಗೃತಿ ಗೀತೆಗಳ ಜತೆಗೆ ಕನ್ನಡ ಮತ್ತು ಹಿಂದಿ ಚಲನಚಿತ್ರಗೀತೆಗಳ ಮನರಂಜನೆ ಮತದಾರರಿಗೆ ಸಿಗಲಿದೆ. ಹಿನ್ನಲೆಗಾಯಕಿ ಶ್ರುತಿ ಎಸ್. ಪ್ರಹ್ಲಾದ್, ಸೃಷ್ಟಿ ಶಾಮನೂರು ಹಾಗೂ ಚನ್ನಗಿರಿ ತಾಲೂಕಿನ ಬಿಸಿಎಂ ಅಧಿಕಾರಿ ರವಿಕುಮಾರ್ ಅಥರ್ಗ ಹಾಡುಗಳನ್ನು ಪ್ರಸ್ತುತಪಡಿಸುವರು. ಆಶುಕವಿ ಯುಗಧರ್ಮ ರಾಮಣ್ಣ ಆಶುಕವಿತೆಗಳನ್ನು ಹೇಳುವರು. ಚುನಾವಣಾ ರಾಯಭಾರಿ ಪೃಥ್ವಿ ಶಾಮನೂರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಅಂಚೆಪತ್ರದಲ್ಲೂ ಜಾಗೃತಿ
ಡಿಜಿಟಲ್ ಕಾಲದಲ್ಲೂ ಅಂಚೆಗೇನು ಕೆಲಸ ಎನ್ನದಿರಿ. ‘ಮೇ 7ರ ಮತದಾನ ದಿನದಂದು ಮತಗಟ್ಟೆಗೆ ಬಂದು ತಪ್ಪದೇ ಮತ ಹಾಕಿ. ಉತ್ತಮ ಪ್ರಜಾಪ್ರಭುತ್ವಕ್ಕಾಗಿ ಸಹಕರಿಸಿ..’ ಎಂಬ ಬರಹವುಳ್ಳ ಅಂಚೆ ಪತ್ರಗಳು ಈಗ ಕೆಲವರ ಮನೆ ತಲುಪುತ್ತಿವೆ!
ಜಿಲ್ಲೆಯ ಸಮಾಜ ಕಲ್ಯಾಣ, ಬಿಸಿಎಂ, ಎಸ್ಸಿ-ಎಸ್ಟಿ ಇತರೆ ಹಾಸ್ಟೆಲ್ಗಳ ಮಕ್ಕಳು ತಮ್ಮ ಪಾಲಕರು ಮತ್ತು ನೆಂಟರಿಸ್ಟರಿಗೆ ಬರೆದ ಅಂಚೆ ಪತ್ರಗಳನ್ನು ಅಂಚೆ ಡಬ್ಬಿಗೆ ಹಾಕುವ ಮೂಲಕ ಮತದಾನ ಜಾಗೃತಿಗೆ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ.
----
ಈ ಬಾರಿ ಶೇ.85ಕ್ಕಿಂತ ಅಧಿಕ ಮತದಾನದ ಗುರಿ ಹೊಂದಲಾಗಿದೆ. ಕೆಲವು ಮತಗಟ್ಟೆಗಳಲ್ಲಿ ಮಾಡಿದ ಪ್ರಯತ್ನದಿಂದಾಗಿ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಫಲಿತಾಂಶ ತುಸು ಸುಧಾರಣೆಯಾಗಿತ್ತು. ಈ ಬಾರಿ ಬಿಎಲ್ಒಗಳ ಮೂಲಕ ಮೈಕ್ರೋ ಹಂತದಲ್ಲಿ ಪ್ರಯತ್ನ ನಡೆಸಿದ್ದೇವೆ.
ಸುರೇಶ್ ಬಿ. ಇಟ್ನಾಳ್
ಜಿಪಂ ಸಿಇಒ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರು.
---
ಗುರುತಿಸಲಾದ ಕೇಂದ್ರಗಳು
ವಿಧಾನಸಭಾ ಕ್ಷೇತ್ರ ಮತಗಟ್ಟೆ
------------------
ದಾವಣಗೆರೆ (ಉ) 22
ದಾವಣಗೆರೆ (ದ) 21
ಜಗಳೂರು 21
ಚನ್ನಗಿರಿ 18
ಹರಿಹರ 34
ಮಾಯಕೊಂಡ 09
ಹೊನ್ನಾಳಿ 10
--------------
ಒಟ್ಟು 135
---------------