ರೈತ ಸಂಘದಿಂದ ಕರಾಳ ದಿನಾಚರಣೆ

1000384155_20240918231309360.jpg
Published on

ದಾವಣಗೆರೆ: ರೈತರ ಸಮಸ್ಯೆಗಳಿಗೆ ಕೇಂದ್ರ- ರಾಜ್ಯ ಸರ್ಕಾರಗಳು ಸ್ಪಂದಿಸುತ್ತಿಲ್ಲ. ರೈತರಿಗೆ ಆರ್ಥಿಕ ಸ್ವಾತಂತ್ರೃ ದಕ್ಕಿಲ್ಲ ಎಂದು ಆರೋಪಿಸಿ  ಕರ್ನಾಟಕ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದಿಂದ ನಗರದಲ್ಲಿ ಬುಧವಾರ ಕರಾಳ ದಿನ ಆಚರಿಸಲಾಯಿತು.
ತೋಳುಗಳಿಗೆ ಕಪ್ಪುಪಟ್ಟಿ ಧರಿಸಿದ ರೈತ ಮುಖಂಡರು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಆವರಣದಿಂದ ಬೈಕ್ ರ‌್ಯಾಲಿ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದರು. ಜಿಂದಾಲ್ ಇತರೆ ಕಂಪನಿಗೆ ಅಗ್ಗದ ಬೆಲೆಗೆ ಭೂಮಿ ನೀಡಬಾರದು. ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆ ಕೈಬಿಡಬೇಕೆಂದು ಆಗ್ರಹಿಸಿದರು.  
ಅತಿವೃಷ್ಟಿಯಿಂದಾದ ಮನೆ-ಬೆಳೆ ನಷ್ಟಕ್ಕೆ ತಕ್ಷಣ ಪರಿಹಾರ ನೀಡಬೇಕು, ಸ್ವಯಂ ಆರ್ಥಿಕ ಯೋಜನೆ ಕೈಬಿಟ್ಟು ಹಿಂದಿನಂತೆ ಅಕ್ರಮ-ಸಕ್ರಮ ಯೋಜನೆ ಮುಂದುವರಿಸಬೇಕು. ಕನಿಷ್ಠ ಬೆಂಬಲ ಬೆಲೆ ಕಾನೂನಾತ್ಮಕಗೊಳಿಸಬೇಕು. ವಿದ್ಯುತ್ ಖಾಸಗೀಕರಣ ಕೈಬಿಡಬೇಕು. ಬಗರ್‌ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸದೆ ಸಾಗುವಳಿ ಹಕ್ಕುಪತ್ರ ನೀಡಬೇಕು. ಬ್ಯಾಂಕುಗಳು ಬಲವಂತದ ರೈತರ ಸಾಲ ವಸೂಲಿ ನಿಲ್ಲಿಸಬೇಕೆಂದು ಒತ್ತಾಯಿಸಿದರು.
ರೈತ ಸಂಘ ರಾಜ್ಯ ಉಪಾಧ್ಯಕ್ಷ ಹೊನ್ನೂರು ಮುನಿಯಪ್ಪ ಮಾತನಾಡಿ ಸ್ವಾತಂತ್ರೃ ಬಂದು 78 ವರ್ಷ ಕಳೆದರೂ ರೈತರ ಸಮಸ್ಯೆಗಳು ನಿಂತಿಲ್ಲ. ಡಾ. ಸ್ವಾಮಿನಾಥನ್ ವರದಿಯಂತೆ ಕೃಷಿ ಉತ್ಪನ್ನಗಳಿಗೆ ಯೋಗ್ಯಬೆಲೆಯನ್ನು ಕೇಂದ್ರ ಸರ್ಕಾರ ಇದುವರೆಗೂ ನೀಡಿಲ್ಲ. ರೈತರ ಸಾಲ ಮನ್ನಾ ಇತರೆ ಹೆಸರಲ್ಲಿ ಪ್ರಚಾರ ಪಡೆಯುವ ಪಕ್ಷಗಳು ಚುನಾವಣೆ ಬಳಿಕ ಮರೆತುಬಿಡುತ್ತಿವೆ. ಇತ್ತ ಕೃಷಿ ಉತ್ಪಾದನಾ ವೆಚ್ಚ ಮೂರು ಪಟ್ಟು ಹೆಚ್ಚಿದ್ದು ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತ ವಿರೋಧಿ ನಿಲುವುಗಳನ್ನು ತಾಳುತ್ತಿವೆ.  ನೀರಾವರಿ ಮತ್ತು ಭೂಮಿ ಅಭಿವೃದ್ಧಿಗೆ ಲಕ್ಷಾಂತರ ಕೋಟಿ ರೂಪಾಯಿಗಳಷ್ಟು ಸಾಲ ಮಾಡಿ ಬಂಡವಾಳ ಹಾಕಿ ಸಾಲಗಾರರಾಗುತ್ತಿದ್ದಾರೆ. ರೈತರಿಗೆ ಸಾಲ ನೀಡುವಾಗ ಸಿಬಿಲ್ ಸ್ಕೋರ್ ಪರಿಗಣಿಸಬಾರದು. ಮೈಕ್ರೋ ಫೈನಾನ್ಸ್ ಕಂಪನಿಗಳ ಹಣಕಾಸು ವ್ಯವಹಾರದ ಮೇಲೆ ಸರ್ಕಾರಗಳು ನಿಯಂತ್ರಣ ವಹಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಪಿ.ಪಿ. ಮರುಳಸಿದ್ದಯ್ಯ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಅಧಿಕಾರಿಗಳೇ ಸರಿಪಡಿಸಬಹುದಾದ ಸಣ್ಣ ಪುಟ್ಟ ತಿದ್ದುಪಡಿಗಳಿಗೆ ಜನಸಾಮಾನ್ಯರನ್ನು ಅನಗತ್ಯ ಅಲೆದಾಡಿಸಲಾಗುತ್ತಿದೆ. 2 ರೂ. ವೆಚ್ಚದಲ್ಲಿ ನೀಡಬಹುದಾದ ಪಹಣಿ ಇನ್ನಿತರೆ ದಾಖಲೆಗಳಿಗೆ 25 ರೂ. ಪಡೆಯಲಾಗುತ್ತಿದೆ. ಬರಗಾಲವನ್ನೇ ಬಂಡವಾಳ ಮಾಡಿಕೊಂಡ ಬೋರ್‌ವೆಲ್ ಮಾಲೀಕರು ಇಷ್ಟಬಂದಂತೆ ಬೆಲೆ ನಿಗದಿ ಮಾಡುತ್ತಿದ್ದಾರೆ. ಸರ್ಕಾರ, ಇಲಾಖೆಗಳು ಸರಿಯಾದ ನೀತಿಗಳನ್ನು ಜಾರಿ ಮಾಡದೆ ಸುಮ್ಮನೆ ಕುಳಿತಿವೆ ಎಂದು ದೂರಿದರು.
ಜಿಲ್ಲಾ ಕಾರ್ಯಾಧ್ಯಕ್ಷ ಹೊನ್ನೂರು ರಾಜು, ಗೋಶಾಲೆ ಬಸವರಾಜ್, ಜಿಲ್ಲಾ ಕಾರ್ಯದರ್ಶಿ ಸಂತೋಷ ನಾಯ್ಕ, ಜಿಲ್ಲಾ ಹಸಿರುಸೇನೆ ಸಂಚಾಲಕ ಎಂ.ಅಭಿಲಾಷ್, ಹಾಲಸ್ವಾಮಿ, ದೊಡ್ಡೇರಿ ಬಸವರಾಜಪ್ಪ, ಮಂಜಪ್ಪ, ಷಣ್ಮುಖಪ್ಪ, ಮಲ್ಲೇನಹಳ್ಳಿ ನಾಗರಾಜ್, ಕ್ಯಾತನಹಳ್ಳಿ ನಾಗರಾಜಪ್ಪ, ನುಗ್ಗೆಹಳ್ಳಿ ನಿಂಗಪ್ಪ, ರವಿ ಹಳ್ಳಿ, ಕರಿಬಸಪ್ಪ, ಸಂತೋಷ್ ಮಲಹಾಳ್, ಗಣೇಶ್, ಪ್ರಕಾಶ್ ಸೇರಿದಂತೆ ತಾಲ್ಲೂಕು ಹಾಗೂ ಗ್ರಾಮ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net