

ದಾವಣಗೆರೆ: ಹಾಲು, ವಿದ್ಯುತ್, ಡೀಸೆಲ್ ಸೇರಿ ದಿನಬಳಕೆ ವಸ್ತಗಳ ಮೇಲೆ ಬೆಲೆ ಏರಿಕೆ ಭಾಗ್ಯ ಕಲ್ಪಿಸಿ, ಜನರಿಗೆ ಬರೆ ಎಳೆಯುವ ಕಾಂಗ್ರೆಸ್ ಸರ್ಕಾರದ ನಿಲುವು ವಿರೋಧಿಸಿ ಜಿಲ್ಲಾ ಬಿಜೆಪಿ ಘಟಕದಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಪಿಜೆ ಬಡಾವಣೆಯ ಪಕ್ಷದ ಜಿಲ್ಲಾ ಕಚೇರಿಯಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಅಲ್ಲಿನ ಅಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸಿದರು. ಬೆಲೆ ಏರಿಕೆ ವಿರುದ್ಧ ಮಂಡಲ ಹಂತದವರೆಗೂ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ ಮಾತನಾಡಿ ನಿರಂತರ ಭ್ರಷ್ಟಾಚಾರ, ಗ್ಯಾರಂಟಿಗಳ ಹೆಸರಲ್ಲಿ ಲೂಟಿ ಮಾಡುತ್ತ, ಕರುಣೆ ಇಲ್ಲದಂತೆ ತೆರಿಗೆ ವಿಧಿಸುತ್ತಿರುವ ಕಾಂಗ್ರೆಸ್ ಸರ್ಕಾರ, ಈಸ್ಟ್ ಇಂಡಿಯಾ ಕಂಪನಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇದರ ವೈಸ್‌ರಾಯ್‌ನಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.
ಒಂದೆಡೆ 2 ಸಾವಿರ ರೂ. ನೀಡುತ್ತ, ಇನ್ನೊಂದೆಡೆ 20 ಸಾವಿರ ರೂ.ಗಳನ್ನು ಜನರಿಂದ ಕೀಳುತ್ತಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯವ್ಯಾಪಿ ಹೋರಾಟ ಶುರುವಾಗಿದ್ದು ತಾರ್ಕಿಕ ಅಂತ್ಯ ಕಾಣುವವರೆಗೂನಿಲ್ಲದು ಎಂದರು.
ಸಂಸತ್ತಿನಲ್ಲಿ ಮಾತನಾಡುವ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಅವರಿಗೆ ದಾವಣಗೆರೆ ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದ ರೈತರ ಸಮಸ್ಯೆಯ ಅರಿವಿಲ್ಲವೆ? ರಾಜ್ಯದಲ್ಲಿ ಗರ್ಭಿಣಿಯರ ಸಾವಾದಾಗ, ಜಿಲ್ಲಾಡಳಿತ ಭವನದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವಾಗ ಸರ್ಕಾರವನ್ನೇಕೆ ಪ್ರಶ್ನಿಸಲಿಲ್ಲ ಎಂದು ಹೇಳಿದರು.
ಮೇಲ್ಮನೆ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್.ಶಿವಯೋಗಿಸ್ವಾಮಿ ಮಾತನಾಡಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಿದವರ ಮೇಲಿನ ಕೇಸ್ ಹಿಂಪಡೆದ ರಾಜ್ಯ ಸರ್ಕಾರ ಯಾವ ಸಂದೇಶ ನೀಡಲು ಹೊರಟಿದೆ? ಬಿಜೆಪಿ ಕಾರ್ಯಕರ್ತ ವಿನಯ್ ಸೋಮಣ್ಣ ಡೆತ್‌ನೋಟ್‌ನಲ್ಲಿ ದೂರಿದ ಇಬ್ಬರ ಶಾಸಕರನ್ನು ಎಫ್‌ಐಆರ್‌ನಿಂದ ಹೊರಗಿಟ್ಟಿದ್ದು ದುರಾದೃಷ್ಟಕರ. ಮುಸ್ಲಿಂ ಯುವತಿಯರ ಆತ್ಮರಕ್ಷಣೆ ತರಬೇತಿಗೆ ಹಣ ಮೀಸಲಿಡುವ ಸರ್ಕಾರ ಹಿಂದು ಯುವತಿಯರನ್ನು ಕಡೆಗಣಿಸಿದೆ ಎಂದು ಹೇಳಿದರು.
ಪಾಲಿಕೆ ಸದಸ್ಯ ಕೆ. ಪ್ರಸನ್ನಕುಮಾರ್ ಮಾತನಾಡಿ, ಸಿದ್ದರಾಮಯ್ಯ ಅವರ ಖಜಾನೆ ಖಾಲಿಯಾಗಿದೆ. ಶೇ. 80 ಪರ್ಸೆಂಟೇಜ್ ಸರ್ಕಾರ, ಜನರಿಗೆ ಬೆಲೆ ಏರಿಕೆ ಬಿಸಿ ಮುಟ್ಟಿಸಿ ಕೊಟ್ಟಿದ್ದನ್ನು ಕಿತ್ತುಕೊಳ್ಳುತ್ತಿದೆ. ಇದು ಬಡವರ ವಿರೋಧಿ ಸರ್ಕಾರ ಎಂದು ಟೀಕಿಸಿದರು.
ಮಾಜಿ ಶಾಸಕ ಎಂ. ಬಸವರಾಜನಾಯ್ಕ ಮಾತನಾಡಿ ರಾಜ್ಯ ಸರ್ಕಾರದ ಅಧಿಕಾರದ ಗೊಂದಲ ಒಂದೆಡೆ ಇದ್ದರೆ ಬೆಲೆ ಏರಿಕೆಯಿಂದಾಗಿ ಜನರೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ್ ನಾಯ್ಕ ಮಾತನಾಡಿ ಕಾಂಗ್ರೆಸ್ ಸರ್ಕಾರ, ನೆರೆಯ ರಾಜ್ಯಗಳ ಬಗ್ಗೆ ಉಲ್ಲೇಖಿಸಿ ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುವುದಾದರೆ ಕರ್ನಾಟಕ ಬಿಟ್ಟು ಅಲ್ಲಿಯೇ ಆಡಳಿತ ಮಾಡಲಿ ಎಂದರು.
ಹರಿಹರ ಮುಖಂಡ ಚಂದ್ರಶೇಖರ ಪೂಜಾರ್ ಮಾತನಾಡಿ ಸಂವಿಧಾನ ಬದಲಿಸುವ ಹೇಳಿಕೆಯನ್ನು ಕಾಂಗ್ರೆಸಿಗರೇ ಹೇಳಿಕೆ ನೀಡಿದ್ದಾರೆ. ವರಿಷ್ಠರು ಸುಮ್ಮನಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಮುಖಂಡರಾದ ಪಿ.ಸಿ. ಶ್ರೀನಿವಾಸ್, ಎಚ್.ಎನ್. ಶಿವಕುಮಾರ್, ಬೆಳ್ಳೂಡಿ ಮಂಜುನಾಥ್, ಎಲ್.ಎನ್.ಕಲ್ಲೇಶ್, ಕೊಟ್ರೇಶ್‌ಗೌಡ, ಪಿಎಸ್. ಜಯಣ್ಣ, ಎಚ್.ಬಿ. ದುರುಗೇಶ್, ಕೃಷ್ಣಪ್ಪ,ಹಾಲೇಶನಾಯ್ಕ, ಮುಕುಂದಪ್ಪ, ಸುನಿಲ್ ಪೈಲ್ವಾನ್, ಎಚ್.ಸಿ. ಜಯಮ್ಮ, ಸವಿತಾ ರವಿಕುಮಾರ್ ಇತರರಿದ್ದರು.