ಅಧಿಕಾರಿಗಳ ಬದುಕುವ ಭಾಗ್ಯ ಕಸಿದ ಸರ್ಕಾರ    ಬಿಜೆಪಿಯ ಶ್ರೀನಿವಾಸ ದಾಸಕರಿಯಪ್ಪ ಆರೋಪ

1000160051.jpg
Published on

ದಾವಣಗೆರೆ: ಕಾಂಗ್ರೆಸ್ ಸರ್ಕಾರ, ನಿಷ್ಠಾವಂತ ಅಧಿಕಾರಿಗಳು ಬದುಕುವ ಭಾಗ್ಯವನ್ನು ಕಸಿದಿದೆ. ರಾಜ್ಯದ ಅಧಿಕಾರಿಗಳಿಗೆ ಭಯದ ವಾತಾವರಣ ಸೃಷ್ಟಿಯಾಗಿದ್ದು ದಬ್ಬಾಳಿಕೆ ಹೆಚ್ಚಿದೆ ಎಂದು ಬಿಜೆಪಿ ಎಸ್‌ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಆರೋಪಿಸಿದರು.  
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಹಿನ್ನೆಲೆಯಲ್ಲಿ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕಿದ್ದ ಸರ್ಕಾರ ಅವರನ್ನು ರಕ್ಷಿಸುವ ಸಲುವಾಗಿ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಎಸಗುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ದಕ್ಷ ಅಧಿಕಾರಿ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಕೆಲವೇ ಅಧಿಕಾರಿಗಳನ್ನು ಅಮಾನತು ಮಾಡಿದರೆ ಸಾಲದು. ಸಚಿವರ ರಜೀನಾಮೆ ಪಡೆಯಬೇಕು. ಈ ಪ್ರಕರಣವನ್ನು ಸಿಬಿಐಗೆ ವಹಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ. ಈ ಹಗರಣದಲ್ಲಿ ಸಿಎಂ, ಡಿಸಿಎಂ ಪಾಲು ಇದೆಯೇ ಎಂದು ಪ್ರಶ್ನಿಸಿದರು.
ಹಣಕಾಸು ಇಲಾಖೆ ನಿಯಮವನ್ನೇ ಬದಿಗಿಟ್ಟು ಬ್ಯಾಂಕ್ ಖಾತೆಯಿಂದಲೇ ಆರ್ಥಿಕ ಚಟುವಟಿಕೆ ನಿರ್ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಯಾರು? ಈ ಹಗರಣದಲ್ಲಿ ಇತರೆ ಸಚಿವರ ಪಾಲುದಾರಿಕೆ ಇದೆಯೆ? ಎಸ್‌ಟಿ ಮೀಸಲು ಕ್ಷೇತ್ರದಲ್ಲಿ ಗೆದ್ದ ಶಾಸಕರು ಈ ಪ್ರಕರಣದ ಬಗ್ಗೆ ಏಕೆ ಮೌನ ಮುರಿಯುತ್ತಿಲ್ಲ? ಎಂದೂ ಪ್ರಶ್ನೆ ಕೇಳಿದರು.
ಗಂಗಾ ಕಲ್ಯಾಣ, ಸ್ವ-ಉದ್ಯೋಗ, ಶಿಕ್ಷಣಕ್ಕೆ ಮಹತ್ವ ನೀಡಬೆಕಿದ್ದ ಎಸ್‌ಟಿ ನಿಗಮದ ಹಣ ದುರ್ಬಳಕೆಯಾಗಿದೆ. ಬಡವರಿಗೆ ಸಲ್ಲಬೇಕಿದ್ದ ಹಣ ನಕಲಿ ದಾಖಲೆ ಸೃಷ್ಟಿಸಿ ತೆಲಂಗಾಣ ಚುನಾವಣೆಗೆ ಬಳಸಲಾಗಿದೆ. ಈ ಬಗ್ಗೆ ತನಿಖೆ ಆಗಬೆಕು. ಸಮಾಜದ ಜನಪ್ರತಿನಿಧಿಗಳು, ಮುಖಂಡರು ಪಕ್ಷಾತೀತ ಹೋರಾಟಕ್ಕೆ ಮುಂದಾಗಬೇಕು ಎಂದು ಹೇಳಿದರು.
ಸರ್ಕಾರ ಕೂಡಲೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಸೂಕ್ತ ತನಿಖೆ ನಡೆಸಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲು ಕ್ರಮ ವಹಿಸಬೇಕು. ಇಂತಹ ಘಟನೆ ಮರುಕಳಿಸುವಂತೆ ನಿಗಾ ವಹಿಸಬೇಕು ಎಂದು ಕೋರಿದರು.
ಸುದ್ದಿಗೋಷ್ಠಿಯಲ್ಲಿ ತ್ಯಾವಣಗಿ ಕೃಷ್ಣಕುಮಾರ್, ದುರುಗೇಶ್, ಸಾಲಕಟ್ಟೆ ಸಿದ್ದಪ್ಪ, ಲೋಕೇಶ್‌ಕುಮಾರ್, ರಮೇರ್ಶ, ರಾಜು ಅಳಗೋಡು ಇದ್ದರು.
---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net