

ದಾವಣಗೆರೆ: ಬಿ-ಖಾತಾ ನಿವೇಶನಗಳಿಗೆ ಕಟ್ಟಡ ಪರವಾನಗಿ ನೀಡಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಾಲಿಕೆಯ ಮಾಜಿ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ್ ನೇತೃತ್ವದಲ್ಲಿ ನಗರಪಾಲಿಕೆ ಬಿಜೆಪಿ ಸದಸ್ಯರ ನಿಯೋಗ ಬೆಂಗಳೂರಿಗೆ ತೆರಳಿ ನಗರಾಭಿವೃದ್ಧಿ ಸಚಿವ ಬಿ.ಎಸ್. ಸುರೇಶ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ರೆವಿನ್ಯೂ ನಿವೇಶನಗಳನ್ನು ನಮೂನೆ-2 ರಲ್ಲಿ ಅಧಿಕೃತ ಎಂದು ನಮೂದಿಸಲು ಸಕ್ರಮಗೊಳಿಸಬೇಕು. ನೀರಿನ ಕಂದಾಯ ಬಾಕಿ ಇದ್ದವರಿಗೂ ಬಿ-ಖಾತೆ ನೀಡಬೇಕು. ಬ್ಯಾಂಕ್ ಸಾಲ ನೀಡಲು ಅವಕಾಶ ಮಾಡಿಕೊಡಲು ಪರಿಷ್ಕೃತ ಆದೇಶ ಹೊರಡಿಸಬೇಕೆಂದು ಎಂದು ಮನವಿ ಮಾಡಲಾಯಿತು.
ರೆವಿನ್ಯೂ ನಿವೇಶನಗಳನ್ನು ಬಿ ಖಾತಾ ರಿಜಿಸ್ಟರ್‌ನಲ್ಲಿ ನಮೂದಿಸಿ ನಮೂನೆ-2ಎ ಅಥವಾ ನಮೂನೆ-3ಎ ನೀಡುತ್ತಿದ್ದು, ಇದರಲ್ಲಿ ಸೊತ್ತಿನ ವರ್ಗೀಕರಣ ಕಾಲಂನಲ್ಲಿ ಅನಧಿಕೃತ ಎಂದು ನಮೂದಿಸಲಾಗುತ್ತಿದೆ. ಇದರಿಂದ ಈ ಆಸ್ತಿಗಳಿಗೆ ಕಟ್ಟಡ ಪರವಾನಿಗೆ ಅಥವಾ ಬ್ಯಾಂಕ್ ಸಾಲವಾಗಲೀ ನೀಡುವುದಿಲ್ಲ.
ಈಗ ದುಪ್ಪಟ್ಟು ತೆರಿಗೆ ಪಾವತಿಸಿ ಬಿ ಖಾತಾ ನಮೂನೆ-2ಎ ಅಥವಾ ನಮೂನೆ-3ಎ ಪಡೆದ ನಿವೇಶನದಾರರಿಗೆ ಕಟ್ಟಡ ಪರವಾನಗಿ ನೀಡಲು ಆಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸುತ್ತಿದ್ದಾರೆ. ರಾಜ್ಯ ಸರ್ಕಾರದ ಆದೇಶದಲ್ಲಿ ಬಡವರಿಗೆ ನೆರವಾಗುವ ಬದಲು ರೆವಿನ್ಯೂ ನಿವೇಶನಗಳನ್ನು ಅನಧಿಕೃತ ಆಸ್ತಿಗಳನ್ನು ಪ್ರತ್ಯೇಕ ಬಿ ರಿಜಿಸ್ಟರ್‌ನಲ್ಲಿ ನಮೂದಿಸಿ ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಮಾತ್ರ ತಿದ್ದುಪಡಿ ತಂದಿದ್ದು ಮತ್ತು ಅನಧಿಕೃತ ಆಸ್ತಿ ಎಂದು ಇ-ಖಾತಾ ನೀಡಿ ಆಸ್ತಿ ಸಕ್ರಮಗೊಳಿಸದೇ ಇರುವುದು ಖಂಡನೀಯ ಎಂದರು.
ಕೂಡಲೇ ರಾಜ್ಯ ಸರ್ಕಾರ ನಮೂನೆ-2ಎ ಮತ್ತು ನಮೂನೆ-3ಎ ರಲ್ಲಿ ಆಸ್ತಿ ವರ್ಗೀಕರಣ ಕಾಲಂನಲ್ಲಿ ಅಧಿಕೃತ ಎಂದು ನಮೂದಿಸಬೇಕು ಮತ್ತು ಈ ನಿವೇಶನಗಳಿಗೆ ಕಟ್ಟಡ ಪರವಾನಗಿ ನೀಡಲು ಅಗತ್ಯ ತಿದ್ದುಪಡಿ ತರಬೇಕು. ಅದಲ್ಲದೇ ಬ್ಯಾಂಕ್‌ಗಳಿಗೆ ಮನೆ ಕಟ್ಟಲು ಸಾಲ ನೀಡಲು ಈ ನಿವೇಶನಗಳನ್ನು ಅಧಿಕೃತ ಎಂದು ಆದೇಶಿಸಬೇಕು.
ಬಡವರಿಗೆ ನೆರವಾಗುವ ದೃಷ್ಟಿಯಿಂದ, ಸರ್ಕಾರ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು, ರೆವಿನ್ಯೂ ನಿವೇಶನಗಳನ್ನು ನಮೂನೆ-2 ರಲ್ಲಿ ಅಧಿಕೃತ ಎಂದು ನಮೂದಿಸಿ ಸಕ್ರಮಗೊಳಿಸಲು ಅಗತ್ಯ ಕ್ರಮ ಕೈಗೊಂಡು, ಪರಿಷ್ಕೃತ ಆದೇಶ ಹೊರಡಿಸಬೇಕೆಂದು ಮನವಿ ಮಾಡಿದರು.
ವಿಧಾನ ಪರಿಷತ್ ಮುಖ್ಯ ಸಚೇತಕ ರವಿಕುಮಾರ್, ಮಾಜಿ ಮೇಯರ್ ಎಸ್.ಟಿ.ವೀರೇಶ್, ಪಾಲಿಕೆ ಸದಸ್ಯರಾದ ಆರ್. ಶಿವಾನಂದ್, ಕೆ.ಎಂ. ವೀರೇಶ್ ನಿಯೋಗದಲ್ಲಿದ್ದರು.
---